ಸರ್ವಸ್ವವನ್ನೂ ಹೋರಾಟಕ್ಕೆ ಅರ್ಪಿಸಿಕೊಂಡ ಬಂದಕುಂಟೆ ನಾಗರಾಜಯ್ಯ-ನೀರಕಲ್ಲು ರಾಮಕೃಷ್ಣ

ತುಮಕೂರು : ಬಂದಕುಂಟೆ ನಾಗರಾಜಯ್ಯ ಸರ್ವಸ್ವವನ್ನೂ ಹೋರಾಟಕ್ಕೆ ಅರ್ಪಿಸಿಕೊಂಡರು ಎಂದು ರೈತ ಹೋರಾಟಗಾರ ನೀರಕಲ್ಲು ರಾಮಕೃಷ್ಣ ಹೇಳಿದರು.

ತುಮಕೂರಿನ ಟೌನ್ ಹಾಲ್ ಸರ್ಕಲ್ ನಲ್ಲಿರುವ ಐಎಂಎ ಹಾಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತುಮಕೂರು ಮತ್ತು ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಿಧನರಾದ ಹೋರಾಟದ ಒಡನಾಡಿ, ವತಿಯಿಂದ ದಲಿತ ಮುಖಂಡ ಬಂದಕುಂಟೆ ನಾಗರಾಜಯ್ಯ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದಕ್ಕೂ ಮೊದಲು ಬಂದಕುಂಟೆ ನಾಗರಾಜಯ್ಯನವರಿಗೆ ಸಿದ್ದರಬೆಟ್ಟದ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡು ಹೋಗಿ 2000 ಕೊಡುತ್ತೇನೆ ಎಂದು ರೇವಯ್ಯ ಹೇಳಿದರು. ಆದರೆ ಅವರು ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ. ಹೀಗಾಗಿ ಶಾಲೆಯನ್ನು ಬಿಟ್ಟು ಹೊರಬಂದರು. ಆಗ ಒಂದು ಹಸುವನ್ನು ತೆಗೆದುಕೊಂಡು ಬರುವ ಹಾಲಿನಿಂದ ಜೀವನ ನಡೆಸುವುದು ಎಂದು ತೀರ್ಮಾನವಾಯಿತು. ಸಾಲಕ್ಕಾಗಿ ವಿಜಯ ಬ್ಯಾಂಕ್ ಹೋಗಿ ಮ್ಯಾನೇಜರ್ ಅವರನ್ನ ಕೇಳಿದೆವು. ಉದ್ಯೋಗದಲ್ಲಿರುವವರ ಶ್ಯೂರಿಟಿ ಬೇಕು ಎಂದರು. ನಾವು ಯಾರನ್ನು ಶ್ಯೂರಿಟಿ ಕೊಡುವುದು ಎಂದು ಆಗಲ್ಲ ಎಂದೆವು. ನೀವು ಚಳವಳಿಗಾರರು ನಿಮಗೆ ಸಾಲ ಕೊಡುವುದಿಲ್ಲ ಎಂದರು. ಬ್ಯಾಂಕಿನಿಂದ ಹೊರಗೆ ಬಂದು ನಿಂತೆವು. ಆಗ ಸಣ್ಣಮುದ್ದಯ್ಯ, ಯಾಕ್ರಯ್ಯ ಇಲ್ಲಿ ನಿಂತಿದ್ದೀರ ಎಂದು ಕೇಳಿದರು. ಅದಕ್ಕೆ ನಡದ ವಿಚಾರವನ್ನು ತಿಳಿಸಿದೆವು. ಬನ್ನಿ ನಾನೇ ಶ್ಯೂರಿಟಿ ಕೊಡುತ್ತೇನೆ. ಎಂದು ಮತ್ತೆ ಬ್ಯಾಂಕ್ ಮ್ಯಾನೇಜರ್ ಬಳಿ ಕರೆದುಕೊಂಡು ಹೋದರು. ಶ್ಯೂರಿಟಿ ಕೊಟ್ಟ ಮೇಲೆ 25 ಸಾವಿರ ಹಣವನ್ನು ಸಾಲವಾಗಿ ಕೊಟ್ಟರು. ಹಸುವನ್ನು ಕೊಂಡೆವು. ಆದರೆ ಮೇವಿಗೆ ಸಮಸ್ಯೆಯಾಯಿತು. ನನ್ನ ಬಣವೆಯಿಂದಲೇ ಹುಲ್ಲು ಕೊಟ್ಟೆ. ಆದರೂ ಅದರಿಂದ ಜೀವನ ನಡೆಸಲು ಬಂದಕುಂಟೆಯವರಿಗೆ ಸಾಧ್ಯವಾಗಲಿಲ್ಲ ಎಂದು ವಿವರಿಸಿದರು.

ಹೋರಾಟಗಾರ್ತಿ ಹುಚ್ಚಹನುಮಕ್ಕ ಮಾತನಾಡಿ, ಪಿರಿಯಾಪಟ್ನಕ್ಕೆ ಹೋರಾಟಕ್ಕೆ ಹೋದೆವು. ಬಂದಕುಂಟೆ ನಾಗರಾಜಯ್ಯ ಜೊತೆ ಸೇರಿಕೊಂಡು ಕಾರ್ಯಕ್ರಮ ನಡೆಸಿದ್ದೇವೆ. ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋರಾಟ ಮಾಡುತ್ತಿದ್ದರು. ಇದರಿಂದಾಗಿ ನಾವು ಕೂಡ ಚಳವಳಿಯಲ್ಲಿ ಭಾಗವಹಿಸಿದೆವು. ಹೆಣ್ಣು ಮಕ್ಕಳು ಹೇಗಿರಬೇಕು ಎಂಬುದನ್ನು ಕಲಿಸಿದರು. ಧೈರ್ಯವಾಗಿ ಇರಬೇಕು ಎಂಬುದನ್ನು ಹೇಳಿಕೊಟ್ಟರು ಎಂದು ಹೇಳಿದರು.

ಡಾ.ಅರುಂಧತಿ ಮಾತನಾಡಿ, ನಾನು 1980ರ ದಶಕದಲ್ಲಿ ಪಿಯುಸಿ ಓದಲು ತುಮಕೂರಿಗೆ ಬಂದೆ. ಆಗ ದಲಿತ ಸಹಪಾಠಿಗಳಾದ ಬಸವರಾಜು, ರಂಗಸ್ವಾಮಿ ಕೃಷ್ಣಪ್ಪ, ಇವರೆಲ್ಲರ ಮೂಲಕ ಕೆ.ಬಿ.ಸಿದ್ದಯ್ಯ, ಬಂದಕುಂಟೆ ನಾಗರಾಜಯ್ಯ ಅವರು ಪರಿಚಯ ಆದರು. ಇವರು ಮಾಡುವ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆದೊಯ್ಯುತ್ತಿದ್ದರು. ನಾವು ಉತ್ಸಾಹದಿಂದ ಹೋಗುತ್ತಿದ್ದೆವು. ನಾಗರಾಜಯ್ಯ ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಹೊಗಳಿಕೊಳ್ಳುತ್ತಿರಲಿಲ್ಲ. ಹೀಗೆ ಹೇಳಿಕೊಂಡು ಲಾಭ ಮಾಡಿಕೊಳ್ಳುವ ಮನಸ್ಥಿತಿ ಇರಲಿಲ್ಲ. ಅವರು ಚಳವಳಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಇಂದು ಮಿದುಳಿಗೆ ಸೇರಿಕೊಂಡಿರುವ ಕೋರೆ ಹಲ್ಲುಗಳು ಹಿಂಸಿಸುತ್ತಿದೆ. ದಲಿತರ ಮೇಲಿನ ಕ್ರೌರ್ಯ ಹೆಚ್ಚುತ್ತಿದೆ. ಶೋಷಣೆಯನ್ನು ಗುರುತಿಸುವಲ್ಲಿ ನಾವು ವಿಫಲರಾಗಿದ್ದೇವೆ. ಕೇವಲ ಹಿಂದಿನವರ ಸಾಹಸ ಗಾಥೆಗಳನ್ನು ಹೇಳಿಕೊಂಡು ಬರುತ್ತಿದ್ದೇವೆ. ಶೋಷಣೆ ಹೆಚ್ಚಲು ಕಾರಣರಾಗುತ್ತಿದ್ದೇವೆ. ಶೋಷಕವರ್ಗ ಮೆದುಳಿನಲ್ಲಿ ಮೂಡಿರುವ ಕೋರೆಹಲ್ಲುಗಳನ್ನು ಗುರುತಿಸಿ ಹೋರಾಟ ಮಾಡಬೇಕು ಎಂದರು.

ಸಾಹಿತಿ ತಿಮ್ಮನಹಳ್ಳಿ ವೇಣುಗೋಪಾಲ್ ಮಾತನಾಡಿ, ಬಂದಕುಂಟೆ ನಾಗರಾಜಯ್ಯ ಭೌತಿಕವಾಗಿ ನಮ್ಮ ಜೊತೆ ಇಲ್ಲ. ಜನಪರ ಸಂಗಾತಿಯಾಗಿದ್ದಂತಹ ಬಂದಕುಂಟೆ ನಾಗರಾಜಯ್ಯ ಇಲ್ಲ. ಆದರೆ ಬಂದಕುಂಟೆ ನಾಗರಾಜಯ್ಯನವರ ಹೋರಾಟ, ಸಂಘಟನೆ, ಅವರ ಸಮಾಜಮುಖಿ ಮನಸ್ಸು ಅವರ ನೆನಪುಗಳು ನಮ್ಮ ಜೊತೆಯಲ್ಲಿ ಇವೆ. ಹಾಗಾಗಿ ಬಂದಕುಂಟೆ ನಾಗರಾಜಯ್ಯ ಸದಾ ನಮ್ಮ ಜೊತೆಯಲ್ಲಿ ಇರುತ್ತಾರೆ. ದಲಿತ ಚಳವಳಿಯ ಮಹಾನ್ ಚೇತನ ಪೆÇ್ರ.ಬಿ.ಕೃಷ್ಣಪ್ಪ ಬಿತ್ತಿದ ಬಿತ್ತನೆ ಬೀಜದ ಫಸಲು ಬಂದಕುಂಟೆ ನಾಗರಾಜಯ್ಯ ಎಂದು ನಾನು ತಿಳಿದುಕೊಂಡಿದ್ದೇನೆ. ಬಾಬಾ ಸಾಹೇಬರ ಚಿಂತನೆಯ ಕುಲುಮೆಯಲ್ಲಿ ಬೆಂದು ಅರಳಿದ ತುಮಕೂರು ಜಿಲ್ಲೆಯ ದಲಿತ ದಮನಿತ ಜನರ ಹೋರಾಟಗಾರ. 80ರ ದಶಕದಲ್ಲಿ ನನಗೆ ಬಂದಕುಂಟೆ ನಾಗರಾಜಯ್ಯ ಹೆಚ್ಚು ಪರಿಚಿತರಾದರು. ದಲಿತ ಚಳವಳಿಯಲ್ಲಿ ಅವರು ತೊಡಗಿಸಿಕೊಂಡಿದ್ದರು. ಬಂಡಾಯ ಸಂಘಟನೆ, ಬರವಣಿಗೆಯಲ್ಲಿ ನಾನು ತೊಡಗಿಸಿಕೊಂಡಿದ್ದೆ. ಈ ಸಂದರ್ಭದಲ್ಲಿ ಬೇರೆ ಬೇರೆ ವೇದಿಕೆಗಳಲ್ಲಿ, ಸಂದರ್ಭಗಳಲ್ಲಿ ನನ್ನ ಸಹವರ್ತಿಗಳಾಗಿ ಸಹಚಿಂತಕರಾಗಿ ಆಲೋಚನೆಗಳನ್ನು ಹಂಚಿಕೊಳ್ಳುತ್ತಾ ನನಗೆ ಒತ್ತಾಸೆಯಾಗಿ ನಿಂತವರು ಬಂದಕುಂಟೆ ನಾಗರಾಜಯ್ಯ ಎಂದು ಸ್ಮರಿಸಿದರು.

ಹೋರಾಟಗಾರ್ತಿ ಅನುರಾಧ ದೊರೈರಾಜ್ ಮಾತನಾಡಿ, ತುಮಕೂರಿನಲ್ಲಿ ಬಂದಕುಂಟೆ ನಾಗರಾಜಯ್ಯ ಅವರ ಮದುವೆ ಆಯಿತು. ಕಾಲೋನಿಯ ನಾವೆಲ್ಲ ರೇμÉ್ಮ ಸೀರೆಗಳನ್ನು ಧರಿಸಿಕೊಂಡು, ಒಡೆವೆಗಳನ್ನು ಹಾಕಿಕೊಂಡು ಮದುವೆಗೆ ಹೋದೆವು. ಅಲ್ಲಿದ್ದ ವರ ವಧು ಸಾಮಾನ್ಯ ಬಟ್ಟೆಗಳನ್ನು ಧರಿಸಿಕೊಂಡಿದ್ದರು. ಇದರಿಂದ ನಮಗೆ ನಾಚಿಕೆ ಆಯಿತು. ಸರಳ ಮದುವೆಯಾದರು. ಅಲ್ಲಿಂದ ನಾಗರಾಜಣ್ಣ ನಾವು ತುಂಬ ಹೊಂದಿಕೊಂಡು ಎಲ್ಲಾ ಹೋರಾಟದಲ್ಲಿ ಭಾಗವಹಿಸಿದೆವು. ತುಮಕೂರಿಗೆ ಬಂದಾಗ ನಾಗರಾಜಣ್ಣ ನಮ್ಮ ಮನೆಗೂ ಬರುತ್ತಿದ್ದರು ಎಂದು ಹೇಳಿದರು.

ಲೇಖಕಿ ಮಲ್ಲಿಕಾ ಬಸವರಾಜು ಮಾತನಾಡಿ, ಬಂದಕುಂಟೆ ನಾಗರಾಜಯ್ಯ ಅವರು ನಮ್ಮ ಕುಟುಂಬದೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದರು. ಅವರು ಮನೆಗೆ ಬಂದಾಗಲೆಲ್ಲ ಆಪ್ತ ಮಾತುಕತೆ ಇರುತ್ತಿತ್ತು. ನಾನು ಹೈಸ್ಕೂಲ್ ನಲ್ಲಿದ್ದಾಗ ಮೊದಲ ಬಾರಿಗೆ ಬಂದಕುಂಟೆ ನಾಗರಾಜಯ್ಯ ಅವರನ್ನು ನೋಡಿದ್ದೆ. ನಮ್ಮ ಅಣ್ಣನ ಜೊತೆಗೆ ಮನೆಗೆ ಬರುತ್ತಿದ್ದರು. ನಮ್ಮ ಮನೆಯಿಂದ ಬಂದಕುಂಟೆ ನಾಗರಾಜಯ್ಯ ಒಂದು ಎಮ್ಮೆ ಖರೀದಿಸಿ ತೆಗೆದುಕೊಂಡು ಹೋಗಿದ್ದರು. ಹಾಲು ಮಾರಿ ಜೀವನ ನಡೆಸುತ್ತಿದ್ದರು. ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಅವರು ಇದ್ದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚರಕ ಆಸ್ಪತ್ರೆಯ ಮುಖ್ಯಸ್ಥ ಡಾ.ಬಸವರಾಜು, ದಲಿತ ಸಂಘರ್ಷ ಸಮಿತಿ ತುಮಕೂರಿನಲ್ಲಿ 70-80ರ ದಶಕದಲ್ಲಿ ಬಹಳ ಅದ್ಬುತವಾದ ಸಂಘಟನೆಯಾಗಿ ಹೊರಹೊಮ್ಮಿತ್ತು. ಇದಕ್ಕೆ ಹಲವಾರು ಕಾರಣಕರ್ತರು ಈಗಾಗಲೇ ನಮ್ಮನ್ನು ಅಗಲಿದ್ದಾರೆ. ರೇವಯ್ಯ, ಕೆ.ಬಿ.ಸಿದ್ದಯ್ಯ, ತಿಪಟೂರಿನ ಪಾಂಡು, ಬೆಲ್ಲದಮಡು ರಂಗಸ್ವಾಮಿ, ಬಂದಕುಂಟೆ ನಾಗರಾಜಯ್ಯ ಈ ಐದು ಜನರನ್ನು ನಾವು ಕಳೆದುಕೊಂಡಿದ್ದೇವೆ. ಇದರಿಂದ ಡಿಎಸ್ಎಸ್ ಅನಾಥವಾದ ಸ್ಥಿತಿಯಲ್ಲಿದೆ. 70-80ರ ದಶಕದಲ್ಲಿ ನಾವು ತುಮಕೂರಿಗೆ ಕಾಲಿಟ್ಟೆವು. 1975-76ರದಲ್ಲಿ ಡಿಎಸ್ಎಸ್ ಜನ್ಮತಾಳಿತು. ನಾವು 1980-81ರಲ್ಲಿ ಪಿಯುಸಿ ಓದಲು ಬಂದೆವು. ಆಗ ಸಂಘಟನೆಗಳು ಪ್ರಬಲವಾಗಿ ಈ ಸಮಾಜವನ್ನು ಕಟ್ಟುತ್ತಿದ್ದವು. ಆ ಸಂದರ್ಭದಲ್ಲಿ ಬಂದಕುಂಟೆ ನಾಗರಾಜು ಅವರು ಸ್ಮರಿಸಲೇಬೇಕು. ನಾನು, ರಂಗಸ್ವಾಮಿ, ಬಾಲಕೃಷ್ಣಪ್ಪ ಶ್ರೀನಿವಾಸನ್, ನಾಗೇಂದ್ರಪ್ಪ ಸೇರಿದಂತೆ ಹತ್ತು ಜನ ಸ್ನೇಹಿತರು ಒಟ್ಟಿಗೆ ಇರುತ್ತಿದ್ದೆವು. ನಾವು ಓದಬೇಕಾದರೆ ನಾಗರಾಜಯ್ಯ ಒಳ್ಳೆಯ ವಿಚಾರವಂತರಾಗಿದ್ದರು. ಅವರು ನಮ್ಮನ್ನು ಪ್ರತಿ ಭಾನುವಾರ ಟೌನ್ ಹಾಲ್ ಪಾರ್ಕಲ್ಲಿ ನಮಗೆ ಹೋರಾಟದ ನೆನಪುಗಳನ್ನು ತುಂಬುತ್ತಿದ್ದರು. ಇವರ ವಿಚಾರಗಳನ್ನು ಕೇಳಲು ಪಾರ್ಕಿನಲ್ಲಿ ಕುಳಿತಿದ್ದರೆ, ಎನ್.ಜಿ.ರಾಮಚಂದ್ರ, ಶ್ರೀನಿವಾಸ್ ಕುಮಾರ್, ನಟರಾಜಪ್ಪ ಮತ್ತು ಬಂದಕುಂಟೆ ನಾಗರಾಜು ಸಹ ಬ್ಯಾಗ್ ತಗಲುಹಾಕಿಕೊಂಡು ಬರುತ್ತಿದ್ದರು. ಇಂತಹ ಹಿರಿಯರ ಒಡನಾಟ ಇಲ್ಲದೆ ಇದ್ದರೆ, ನಾವು ಏನೋ ಆಗಿರುತ್ತಿದ್ದೆವು. ಇಂತಹ ವಿಚಾರವನ್ನು ಬಿತ್ತಿದ ನಾಗರಾಜಯ್ಯ ಅವರು, ಬಹಳ ಪ್ರತಿಭಾವಂತರಾಗಿದ್ದರು. ಧೈರ್ಯವಂತ, ಸಂಘಟನಾಗಾರ, ಹೋರಾಟಗಾರರಾಗಿದ್ದರು. ಇಂತಹ ಒಬ್ಬ ವ್ಯಕ್ತಿ ಸರಳವಾಗಿ ಮದುವೆಯಾದರು. ಹೋರಾಟದ ಜೊತೆಗೆ ಹೇಗೆ ಕುಟುಂಬವನ್ನು ನಿರ್ವಹಣೆ ಮಾಡಿದರು. ಹೇಗೆ ಸಂಘಟನೆಯನ್ನು ಕಟ್ಟುತ್ತಾ ಹೋದರು ಎಂಬುದು ಎಲ್ಲ ಡಿಎಸ್ಎಸ್ ಹೋರಟಗಾರರಿಗೂ ಗೊತ್ತಿರುವ ಸಂಗತಿ. ನಮ್ಮ ತಾಲೂಕು ಶಿರಾ. ಅಲ್ಲಿ ಒಂದು ಸಮಾವೇಶ ನಡೆಯುತ್ತದೆ. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿಗೆ ಬಂದಕುಂಟೆ ನಾಗರಾಜಯ್ಯನವರು ಸಹ ಬಂದಿದ್ದರು. ಪೆÇ್ರ. ರವಿವರ್ಮ ಬಂದಿದ್ದರು. ಈ ಮೂರು ಜನ ದಲಿತ ಸಮಾವೇಶದಲ್ಲಿ ಮಾತನಾಡಿದ್ದು ನನಗೆ ಕಣ್ಣಿಗೆ ಕಟ್ಟಿದ ಹಾಗಿದೆ ಎಂದರು.

ನುಡಿನಮನ ಕಾರ್ಯಕ್ರಮದಲ್ಲಿ ಎನ್.ಜಿ.ರಾಮಚಂದ್ರ, ಕುಂದೂರು ತಿಮ್ಮಯ್ಯ, ನರಸಿಂಹಯ್ಯ, ವಿರೂಪಾಕ್ಷ ಡ್ಯಾಗೇರಹಳ್ಳಿ, ಎನ್.ಜಿ.ರಾಮಚಂದ್ರ, ಡಾ.ಮುರುಳೀಧರ್, ಕುಂದೂರು ಮುರಳಿ, ಪಿ.ಎನ್.ರಾಮಯ್ಯ, ಕಂಟಲಗೆರೆ ಸಣ್ಣಹೊನ್ನಯ್ಯ, ಡಾ.ಶಿವಣ್ಣ ತಿಮ್ಲಾಪುರ, ನರಸಿಂಹಯ್ಯ, ಎಂ.ಸಿ.ನರಸಿಂಹಮೂರ್ತಿ ಮತ್ತು ಬಂದಕುಂಟೆ ನಾಗರಾಜ್ ಕುಟುಂಬ ವರ್ಗದವರು ಭಾಗವಹಿದ್ದರು.

Leave a Reply

Your email address will not be published. Required fields are marked *