ತುಮಕೂರು: ಬೆಂಗಳೂರು ವಿಭಾಗದ ಯುವ ಕವಿಗೋಷ್ಠಿಯನ್ನು ನಗರದ ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಜುಲೈ 10ರಂದು ಬೆಳಿಗ್ಗೆ 10.30 ಗಂಟೆಗೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಸುಮಾ ಸತೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಮತ್ತು ಜಿಲ್ಲಾ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದು ಹೇಳಿದರು.
ಯುವ ಕವಿಗೋಷ್ಠಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ವಹಿಸುವರು. ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್., ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಅಸ್ಗರ್ ಬೇಗ್, ಸಾಹಿತ್ಯ ಅಕಾಡೆಮಿ ಸದಸ್ಯರಾದ ಪಿ.ಚಂದ್ರಿಕಾ ಹಾಗೂ ಡಾ.ಅಕ್ಕೈ ಪದ್ಮಶಾಲಿ ಉಪಸ್ಥಿತರಿರುವರು ಎಂದು ವಿವರಿಸಿದರು.
ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ತುಮಕೂರಿನ ಸೂರ್ಯಕೀರ್ತಿ ವಹಿಸುವರು. ಮಧ್ಯಾಹ್ನ 2 ಗಂಟೆಗೆ ‘ಕಾವ್ಯ ಎನ್ನುವುದು ಎಲ್ಲಿದೆ?’ ಕುರಿತು ಕಥೆಗಾರ ಡಾ.ನಟರಾಜ್ ಹುಳಿಯಾರ್ ಉಪನ್ಯಾಸ ನೀಡುವರು, ನಂತರ ಸಂವಾದ ನಡೆಯಲಿದೆ. ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಹಾಗೂ ಡಾ.ರವಿಕುಮಾರ್ ಬಾಗಿ ಭಾಗವಹಿಸುವರು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಯುವ ತಲೆ ಮಾರು ಕಳೆದುಹೋಗಿದೆ ಎಂಬ ಆರೋಪದ ನಡುವೆ ಗಂಭೀರವಾಗಿ ಕಾವ್ಯ ಓದುವ, ಬರೆಯುವವರು ಹೆಚ್ಚಿದ್ದಾರೆ. ಅದರಲ್ಲೂ ವಿವಿಧ ವಲಯದ, ವಿವಿಧ ವರ್ಗದ ಯುವ ಕವಿಗಳು ಕಾವ್ಯ ಕಟ್ಟುವಲ್ಲಿ ಸಶಕ್ತರಾಗಿದ್ದಾರೆ. ಅಂಥವರನ್ನು ಗುರುತಿಸಿ ಅವಕಾಶ ನೀಡುತ್ತಿದೆ ಕರ್ನಾಟಕ ಸಾಹಿತ್ಯ ಅಕಾಡೆಮಿ. ಇಂಥ ಯುವಕವಿ ಗೋಷ್ಠಿಗಳನ್ನು ಜಿ.ಎಸ್.ಶಿವರುದ್ರಪ್ಪ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸಂಘಟಿಸಿದ್ದರು. ಆಗ ಶಿವಮೊಗ್ಗದಲ್ಲಿ ನಡೆದ ಯುವಕವಿಗೋಷ್ಠಿಯಲ್ಲಿ ಈಗಿನ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಭಾಗವಹಿಸಿದ್ದರು. ‘ಕಾವ್ಯಕ್ಷೇತ್ರದಲ್ಲಿ ಬೆಳೆಯಲು ಬಹುದೊಡ್ಡ ಪ್ರೋತ್ಸಾಹ ನೀಡಿತು’ ಎನ್ನುವುದು ಮುಕುಂದರಾಜ್ ಅವರ ಹೆಮ್ಮೆಯ ಮಾತು. ಅವರ ಅವಧಿಯಲ್ಲಿ ಒಟ್ಟು ನಾಲ್ಕು ವಲಯಮಟ್ಟದ ಯುವಕವಿಗೋಷ್ಠಿಗಳು ನಡೆಯಲಿವೆ. ಈಗಾಗಲೇ ಮೈಸೂರು ಭಾಗದ ಯುವಕವಿಗೋಷ್ಠಿ, ಹಾಸನದಲ್ಲಿ ಹಾಗೂ ಕಲಬುರ್ಗಿ ಭಾಗದ ಯುವಕವಿಗೋಷ್ಠಿ, ಹೊಸಪೇಟೆಯಲ್ಲಿ ಜರುಗಿದೆ. ಇನ್ನೊಂದು ಕವಿಗೋಷ್ಠಿ ಬೆಳಗಾವಿ ವಿಭಾಗ ಮಟ್ಟದ ಯುವಕವಿಗೋಷ್ಠಿ ಬೆಳಗಾವಿಯಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಹಿರಿಯ ಲೇಖಕಿಯರಾದ ಬಾ.ಹ.ರಮಾಕುಮಾರಿ, ಶೈಲಾ ನಾಗರಾಜ್, ಹಾಗೂ ಸಿ.ಎನ್.ಸುಗುಣಾದೇವಿ ಹಾಗೂ ಕವಿಗೋಷ್ಠಿ ನಿರ್ವಾಹಕ ಗಣೇಶ ಅಮೀನಗಡ ಹಾಜರಿದ್ದರು.