ಹದಿಹರೆಯದ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆ ಇರಲಿ- ಹನುಮದಾಸ್

ತುಮಕೂರು : ಪ್ರೌಢಾವಸ್ಥೆಯ ಜೀವನ ಅತ್ಯಂತ ಅಮೂಲ್ಯವಾಗಿದ್ದು ಈ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಹನುಮದಾಸ್ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.

ತುಮಕೂರು ನಗರ ಸಾಂತ್ವನ ಕೇಂದ್ರದ ಸಹಯೋಗದಿಂದ ದೇವರಾಯ ಪಟ್ಣದ ಆಕ್ಸ್ ಫರ್ಡ ಪ್ರೌಢಶಾಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು 12 ರಿಂದ 18 ವರ್ಷಗಳ ನಡುವಿನ ಅವಧಿ ಅತ್ಯಂತ ಸೂಕ್ಷ್ಮವಾದದ್ದು. ಈ ಅವಧಿಯಲ್ಲಿ ಮನಸ್ಸು ನಮ್ಮ ಹತೋಟಿಗೆ ಬರುವುದು ಕಷ್ಟ. ಆದರೆ ಮಾನಸಿಕ ನಿಗ್ರಹವೊಂದಿದ್ದರೆ ಏನು ಬೇಕಾದರೂ ಸಾಧಿಸಲು ಸಾಧ್ಯ. ಶಿಸ್ತುಬದ್ದ ಜೀವನ ನಿಮ್ಮದಾದರೆ ಭವಿಷ್ಯ ಸುಂದರವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಿಗಳ ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷರಾದ ಬಿ.ಎಂ. ಗಂಗರಾಜು ಮಾತನಾಡಿ ವಿದ್ಯಾರ್ಥಿಗಳು ಮನೆಯಿಂದ ಶಾಲಾ ಕಾಲೇಜುಗಳಿಗೆ ಹೋಗಿ ಬರುವಾಗ ಎಚ್ಚರಿಕೆಯಿಂದ ಇರಬೇಕು. ಪೋಷಕರು ಹಾಗೂ ಶಿಕ್ಷರ ಮಾತು ಕೇಳಿ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ಮಕ್ಕಳ ಸಾಗಾಣಿಕೆ ಮತ್ತು ಅದರ ಪರಿಣಾಮಗಳು ಕುರಿತು ಮಾತನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ ಮಾತನಾಡಿ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಆದಾಯ ತರುವ ಕ್ಷೇತ್ರವಾಗಿ ಮಾನವ ಕಳ್ಳ ಸಾಗಾಣಿಕೆ ಜಾಲ ಬೆಳೆದು ನಿಂತಿದೆ. ನಂಬಿಸಿ ಕರೆದೊಯ್ಯುವ, ಅಪಹರಿಸುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದರು.

ಕಾಣೆಯಾಗುವ ಮಕ್ಕಳು ಹೆಚ್ಚಾಗಿ ಲೈಂಗಿಕ ಚಟುವಟಿಕೆಗಳಿಗೆ, ಅಪರಾಧ ಕೃತ್ಯಗಳಿಗೆ, ಭಿಕ್ಷಾಟನೆಗೆ, ದುಡಿಮೆಗೆ , ವೇಶ್ಯಾವಾಟಿಕೆಗೆ ಬಳಕೆಯಾಗುತ್ತಾರೆ. ಆದ ಕಾರಣ ಎಲ್ಲಿಯೇ ಆಗಲಿ ಮಹಿಳೆಯರು ಮತ್ತು ಮಕ್ಕಳು ಕಾಣೆಯಾದ ತಕ್ಷಣ ಸಮೀಪದ ಪೋಲಿಸ್ ಠಾಣೆಗೆ ದೂರು ನೀಡಬೇಕು. ಕಾಣೆಯಾದ, ಅಪಹರಿಸಲ್ಪಟ್ಟವರನ್ನು ಪತ್ತೆ ಮಾಡಲು ಎಲ್ಲರೂ ಸಹಕರಿಸಬೇಕು. ಉದಾಸೀನ ಮಾಡಬಾರದು ಎಂದರು.

ಸಾಂತ್ವನ ಕೇಂದ್ರದ ಸಮಾಲೋಚಕಿ ಪಾರ್ವತಮ್ಮ ಮಾತನಾಡಿ ಕಲಿಯುವ ದಿನಗಳಲ್ಲಿ ಶಿಕ್ಷಣ ಬಿಟ್ಟರೆ ಬೇರೆ ಕಡೆ ಮನಸ್ಸು ಹರಿಯಬಿಡಬಾರದು. ನಮ್ಮ ಮನಸ್ಸು ಚೆನ್ನಾಗಿದ್ದರೆ ಗುರಿ ಮುಟ್ಟಲು ಸಾಧ್ಯ. ಆದರೆ ಕೆಲವೊಮ್ಮೆ ಕುಟುಂಬ ಸಮಸ್ಯೆಗಳು ನಮ್ಮ ಮನಸ್ಸನ್ನು ಘಾಸಿಗೊಳಿಸುತ್ತವೆ. ಅಂತಹ ಸಂದರ್ಭದಲ್ಲಿ ಸಾಂತ್ವನ ಕೇಂದ್ರದ ಸಲಹೆ ಪಡೆಯಬಹುದು ಎಂದರು.

ಪೋಲಿಸ್ ಅಧಿಕಾರಿ ಬಾಬು ಕಿಲಾರಿ ಮಾತನಾಡಿ ಪೋಕ್ಸೋ ಮತ್ತು ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿದ್ದು ನಾಗರಿಕ ಸಮಾಜಕ್ಕೆ ಒಂದು ದೊಡ್ಡ ಸವಾಲಾಗಿದೆ. ಇದರಿಂದ ಪೋಷಕ ವರ್ಗದಲ್ಲಿ ಆತಂಕ ಹೆಚ್ಚುತ್ತಿದೆ. ಆದ ಕಾರಣ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕಾಗಿದೆ ಎಂದರು.

ಮುಖ್ಯ ಶಿಕ್ಷಕ ಜಿ.ಎಚ್. ತಿಮ್ಮಣ್ಣಪ್ಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಮುಖಂಡರುಗಳಾದ ರಾಜಶೇಖರಯ್ಯ, ಶಂಭಣ್ಣ, ಮೋಹನದಾಸ್, ಕೃಷ್ಣಪ್ಪ, ಟಿ.ಕೆ. ವೀರಪ್ಪ, ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಮಾಣಿಕ್ಯ ಮೊದಲಾದವರು ಉಪಸ್ಥಿತರಿದ್ದರು. ಹಿಂದಿ ಶಿಕ್ಷಕ ಕನ್ನಯ್ಯ ಪದ್ಮಪಾದ ನಿರೂಪಿಸಿ, ಶಿಕ್ಷಕಿ ಶೈಲಜಾ ವಂದಿಸಿದರು.

Leave a Reply

Your email address will not be published. Required fields are marked *