ತುಮಕೂರು: ರಾಜ್ಯ ಬಿಜೆಪಿಯ ಭೀಮಹೆಜ್ಜೆ ರಥಯಾತ್ರೆ ಬೆಂಗಳೂನಿನಿಂದ ಹೊರಟು ಶುಕ್ರವಾರ ನಗರಕ್ಕೆ ಆಗಮಿಸಿಲಿದೆ. ಕ್ಯಾತ್ಸಂದ್ರ ಟೋಲ್ ಬಳಿಯಿಂದ ರಥಯಾತ್ರೆಯನ್ನು ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಲು ಜಿಲ್ಲಾ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಮೊದಲಾದವರು ಈ ರಥಯಾತ್ರೆಯಲ್ಲಿ ಆಗಮಿಸುವರು. ಬೆಂಗಳೂರಿನಿಂದ ಬೆಳಗಾವಿಯ ನಿಪ್ಪಾಣಿಗೆ ರಥಯಾತ್ರೆ ತೆರಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದಗೌಡ ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನೂರು ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಭೇಟಿ ನೀಡಿದ್ದು ಅಲ್ಲಿ ಹಿತಕಾರಿಣಿ ಸಭಾದ ಅಧಿವೇಶನದಲ್ಲಿ ಭಾಗವಹಿಸಿದ್ದರು. ಶಿಕ್ಷಣ ಮತ್ತು ವಸತಿ ಶಾಲೆಯ ಬಗ್ಗೆ ಮಾತನಾಡಿದ್ದರು. ಈ ಐತಿಹಾಸಿಕ ಭೀಮಹೆಜ್ಜೆಗೆ ಶತಮಾನದ ಸಂಭ್ರಮ ಆಚರಿಸಲಾಗುತ್ತಿದೆ. ಮಾರ್ಗದುದ್ದಕ್ಕೂ ಸಾರ್ವಜನಿಕ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ರಥಯಾತ್ರೆ ಆಗಮಿಸಿದ ನಂತರ ನಗರದ ಬಿಜಿಎಸ್ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್‍ನವರು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನದ ಬಗ್ಗೆ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ದಲಿತರು, ಹಿಂದುಳಿದ ವರ್ಗಗಳಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಸಾರ್ವಜನಿಕರಿಗೆ ಪ್ರಚಾರ ಮಾಡುವುದು. ಎಸ್.ಸಿ, ಎಸ್.ಟಿ. ಸಮುದಾಯದ ಅಭಿವೃದ್ಧಿಗೆ ಮೀಸಲಾದ ಸುಮಾರು 14 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಈ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದರು.
ಮುಖಂಡ ಬಿ.ಹೆಚ್.ಅನಿಲ್‍ಕುಮಾರ್ ಮಾತನಾಡಿ, ಸ್ವಾತಂತ್ರ ಪೂರ್ವ ಹಾಗೂ ನಂತರದಲ್ಲಿ ಕಾಂಗ್ರೆಸ್‍ನವರು ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿ, ಚುನಾವಣೆಯಲ್ಲಿ ಸೋಲಿಸಿದ್ದು, ಮಾಡಿದ ಅವಮಾನ ಸಹಿಸಲಾಗುವುದಿಲ್ಲ, ದಲಿತ, ಹಿಂದುಳಿದ ಸಮುದಾಯಗಳನ್ನು ದಾರಿ ತಪ್ಪಿಸಿ ಮತ ಬ್ಯಾಂಕ್ ಮಾಡಿಕೊಂಡುಬಂದ ಕಾಂಗ್ರೆಸ್ ನಾಯಕರು, ಈ ವರ್ಗಗಳ ಹಿತ ಕಡೆಗಣಿಸಿದ್ದಾರೆ. ಭೀಮಹೆಜ್ಜೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಮಧುಗಿರಿ ಸಂಘಟಿತ ಜಿಲ್ಲೆ ಅಧ್ಯಕ್ಷ ಹನುಮಂತೇಗೌಡರು ಭೀಮಹೆಜ್ಜೆ ರಥಯಾತ್ರೆಯ ವಿವರ ನೀಡಿದರು.
ಮುಖಂಡರಾದ ಪಾವಗಡ ರವಿ, ಅಶೋಕ್, ಹನುಮಥರೆಡ್ಡಿ, ಚಿಕ್ಕಣ್ಣ, ವೀರಣ್ಣ, ನಾಗರಾಜ್, ಅರುಣ್‍ಕುಮಾರ್ ಮೊದಲಾದವರು ಭಾಗವಹಿಸಿದ್ದರು.