ಬಿಜೆಪಿಯು ಅಘೋಷಿತ ಸರ್ವಾಧಿಕಾರ ಪ್ರದರ್ಶಿಸಿದೆ : ಮಾಜಿ ಶಾಸಕ ಡಾ. ರಫೀಕ್ ಅಹ್ಮದ್

ತುಮಕೂರು : ರಾಹುಲ್ ಗಾಂಧಿಯವರ ನೀಡಿರುವ ಹೇಳಿಕೆಗೆ ಸಹಿಸಲಾಗದ ಮತ್ತು ಉತ್ತರಿಸಲಾಗದ ಬಿಜೆಪಿ ಸರ್ಕಾರವು ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಉತ್ತರಕುಮಾರನ ರೀತಿ ಹೇಡಿತನ ಪ್ರದರ್ಶಿಸಿದೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ದೇಶದ ಹಿತಾಸಕ್ತಿಗಾಗಿ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹೆದರಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ಕುಹಕಾಸ್ತ್ರ ಪ್ರಯೋಗಿಸಿದೆ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.

ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿಯವರು ಹೆಚ್ಚು ಜನಪ್ರಿಯರಾಗಿದ್ದು, ರಾಹಲ್ ಗಾಂಧಿಯವರ ನಾಯಕತ್ವದ ಬಗ್ಗೆ ದೇಶದ ಜನತೆ ಅತೀ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗುತ್ತಿದ್ದು ಖಾಲಿ ಖುರ್ಚಿಗೆ ಭಾಷಣ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನರಿತ ಬಿಜೆಪಿ ಪಕ್ಷ ಮುಂಬರುವ ಕರ್ನಾಟಕ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ ಬಲ ಕುಗ್ಗಿಸಲು ಕುತಂತ್ರ ರೂಪಿಸಿ ತನ್ನ ಸ್ವಾರ್ಥಕ್ಕಾಗಿ ಪ್ರಜಾಪ್ರಭುತ್ವವನ್ನು ಅಣಕಿಸಿ ಅಘೋಷಿತ ಸರ್ವಾಧಿಕಾರ ಮಾಡಲು ಹೊರಟಿರುವುದನ್ನು ಮಾಜಿ ಶಾಸಕರು ತೀವ್ರವಾಗಿ ಖಂಡಿಸಿದ್ದಾರೆ.

ಪ್ರಪಂಚದಲ್ಲಿಯೇ ಅತ್ಯಂತ ಉನ್ನತ ಹಾಗೂ ಮಾದರಿ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶವೆಂದರೆ ನಮ್ಮ ಭಾರತ ದೇಶವಾಗಿದೆ. ಅಂತಹ ನಮ್ಮ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಜನತೆ ಕಾಯುತ್ತಿದ್ದಾರೆ. ಮುಂಬರುವ ಕರ್ನಾಟಕ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಧಿಕ್ಕರಿಸಿ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಮತದಾರರು ಸಜ್ಜಾಗಿದ್ದಾರೆ. ಇಂದು ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿದಕ್ಕಾಗಿ ನಾವೆಲ್ಲರೂ ಬಿಜೆಪಿ ಸರ್ಕಾರದ ವಿರುದ್ದ ನಿರಂತರವಾದ ಹೋರಾಟ ಮಾಡುತ್ತೇವೆ ಎಂದು ಡಾ. ರಫೀಕ್ ಅಹ್ಮದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *