ದೇವೇಗೌಡರ ಸಾವು ಬಯಸುವ ಕೆ.ಎನ್.ರಾಜಣ್ಣ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ

ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಾವನ್ನು ಪದೇ ಪದೇ ಬಯಸುತ್ತಿರುವ ಸಚಿವ ಕೆ.ಎನ್.ರಾಜಣ್ಣನವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದ್ದು, ಜಿಲ್ಲೆಯ ಒಕ್ಕಲಿಗರು ಕೆ.ಎನ್.ಆರ್. ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಹೇಳಿದರು.

ಬಿಜೆಪಿ ಚುನಾವಣಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹತಾಶರಾಗಿರುವ ಕಾಂಗ್ರೆಸ್ ನಾಯಕರು ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತನಾಡುತ್ತಿದ್ದಾರೆ. ಅದರಲ್ಲೂ ಸಚಿವ ಕೆ.ಎನ್.ರಾಜಣ್ಣನವರು ಪದೇಪದೇ ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಒಕ್ಕಲಿಗರು ಕಾಂಗ್ರೆಸ್ ನಾಯಕರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ದೇವೇಗೌಡರು ಈ ದೇಶದ ಪ್ರಧಾನಿಯಾಗಿದ್ದವರು, ಒಕ್ಕಲಿಗರ ಸಮುದಾಯದ ಸರ್ವೋಚ್ಛ ನಾಯಕರು, ಅವರ ಬಗ್ಗೆ ಕೆ.ಎನ್.ರಾಜಣ್ಣ ಪದೇಪದೇ ಅವಹೇಳನಾಕಾರಿಯಾಗಿ ಮಾತನಾಡುವುದು, ಅವರ ಸಾವಿನ ಕುರಿತು ಹೇಳಿಕೆ ನೀಡುವುದನ್ನು ಒಕ್ಕಲಿಗರು ಸಹಿಸುವುದಿಲ್ಲ. ಕೆ.ಎನ್.ರಾಜಣ್ಣ ಕೂಡಲೇ ದೇವೇಗೌಡರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ದೇವೇಗೌಡರಂತಹ ಹಿರಿಯರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡುವುದರಿಂದ ನಿಮ್ಮ ವರ್ಚಸ್ಸು ಕಮ್ಮಿಯಗುತ್ತದೆ, ಕೆ.ಎನ್.ರಾಜಣ್ಣರಾಗಲಿ, ಅವರ ಕಡೆಯವರಾಗಲಿ ದೇವೇಗೌಡರ ಬಗ್ಗೆ ಅವಮಾನಕರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಒಕ್ಕಲಿಗರು ನಿಮಗೆ ಮಾರ್ಮಿಕ ಉತ್ತರ ನೀಡುವರು ಎಂದು ಬ್ಯಾಟರಂಗೇಗೌಡ ಎಚ್ಚರಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ, ಶಾಸಕ ಎಸ್.ಅರ್.ಶ್ರೀನಿವಾಸ್ ಮೊದಲಾದವರು ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರು ಹೊರಗಿನವರು ಎಂದು ಹೇಳಿಕೆ ನೀಡುತ್ತಿದ್ದಾರೆ. ಡಾ.ಪರಮೇಶ್ವರ್, ಕೆ.ಎನ್.ರಾಜಣ್ಣ ಅವರೇನೂ ಅದೇ ಕ್ಷೇತ್ರದವರಲ್ಲ, ಸೋಮಣ್ಣ ಅವರನ್ನು ಜಿಲ್ಲೆಯ ಜನ ಪ್ರೀತಿ ತೋರಿಸಿ ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರೂ ಕೂಡಾ ಈ ಕ್ಷೇತ್ರದವರಲ್ಲ, ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದವರು, ಆದರೂ ಬಿಜೆಪಿಯವರು ಮುದ್ದಹನುಮೇಗೌಡರ ಬಗ್ಗೆ ಹೊರಗಿನವರೆಂಬ ಟೀಕಿಸುವುದಿಲ್ಲ ಎಂದರು.

ಕಾಂಗ್ರೆಸ್‍ನವರಿಗೆ ಸೋಲಿನ ಹತಾಶೆ ಕಾಡಿದೆ

ಬಿಜೆಪಿ ರಾಜ್ಯ ವಕ್ತಾರ ಹೆಚ್.ಎನ್.ಚಂದ್ರಶೇಖರ್ ಮಾತನಾಡಿ,ಚುನಾವಣೆಗೆ ಮೊದಲೇ ಕಾಂಗ್ರೆಸ್‍ನವರಿಗೆ ಭೀತಿ ಕಾಡುತ್ತಿದೆ. ಇದೇ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರಿಂದ ಜಿಲ್ಲೆಯ ನಾಯಕರವರೆಗೆ ನಾಲಿಗೆ ಹರಿಬಿಟ್ಟು ಮಾತನಾಡುತ್ತಿದ್ದಾರೆ.ಸುಸಂಸ್ಕøತ ನಾಯಕರೆಂದುಕೊಂಡಿದ್ದ ಗೃಹ ಸಚಿವ ಡಾ.ಪರಮೇಶ್ವರ್ ಅವರಿಗೂ ಕಾಂಗ್ರೆಸ್‍ನ ಕೆಟ್ಟ ಸಂಸ್ಕøತಿ ಅಂಟಿದೆ. ಅವರೂ ನಾಲಿಗೆ ಹರಿಬಿಟ್ಟು ನರಸತ್ತವರು, ಗಂಡಸರಿಲ್ಲವೆ ಎಂದೆಲ್ಲಾ ಬಿಜೆಪಿ ಬಗ್ಗೆ ಮಾತನಾಡಲು ಶುರುಮಾಡಿದ್ದಾರೆ. ಕಾಂಗ್ರೆಸ್‍ನವರು ಟಿಕೆಟ್ ಕೊಡದೆ ಕಡೆಗಣಿಸಿದ್ದ ಕೆ.ಎನ್.ರಾಜಣ್ಣ ಅವರಿಗೆ ಟಿಕೆಟ್ ನೀಡಿ ರಾಜಕೀಯ ಜನ್ಮ ನೀಡಿದ್ದ ದೇವೇಗೌಡರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡುತ್ತಿರುವುದು ಶೋಭೆಯಲ್ಲ, ರಾಜಣ್ಣನವರು ಕ್ಷಮೆ ಕೋರಬೇಕು. ಪ್ರಧಾನಿ ಮೋದಿಯವರು ದೇವೇಗೌಡರ ಬಗ್ಗೆ ಪಿತೃ ಸಮಾನ ಗೌರವ ನೀಡುತ್ತಾರೆ. ಇದೇ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಕಾರಣವಾಗಿದೆ ಎಂದರು.

ಗುಬ್ಬಿ ಶಾಸಕ ಎಸ್.ಅರ್.ಶ್ರೀನಿವಾಸ್ ಅವರು ಮೆದುಳಿಗೂ ನಾಲಿಗೆಗೂ ಸಂಪರ್ಕವಿಲ್ಲದಂತೆ ಮಾತನಾಡುತ್ತಾರೆ. ಪುಲ್ವಾಮ ದಾಳಿಯನ್ನು ಬಿಜೆಪಿಯವರು ಮಾಡಿಸಿದ್ದು ಎಂಬ ಬೇಜಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ದಾಳಿ ನಡೆದ 14 ದಿನಗಳಲ್ಲಿ ನಮ್ಮ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರ ಸಂಹಾರ ಮಾಡಿದ್ದು ಮೋದಿ ಸರ್ಕಾರದ ದಿಟ್ಟ ಕ್ರಮ. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಉಗ್ರರ ದಾಳಿಗಳನ್ನು ಅವರೇ ಲೆಕ್ಕ ಹಕಿಕೊಳ್ಳಲಿ. ಟೀಕೆಗಾಗಿ ದೇಶ ವಿದ್ರೋಹಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು.

ಮೋದಿ ಎಂದರೆ ಅಭಿವೃದ್ಧಿ: ಜ್ಯೋತಿಗಣೇಶ್

ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಬಿಜೆಪಿಯವರು ಮೋದಿ ಹೆಸರಿನಲ್ಲಿ ಮತ ಕೇಳುತ್ತಾರೆ ಎಂಬ ಕಾಂಗ್ರೆಸ್‍ನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೋದಿ ಎಂದರೆ ಅಭಿವೃದ್ಧಿ, ಮೋದಿ ಎಂದರೆ ದೇಶ ರಕ್ಷಣೆ, ಕಾಂಗ್ರೆಸ್ ಎಂದರೆ ಪಾಪರ್ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಬಗ್ಗೆ ಮತನಾಡುವ ಯೋಗ್ಯತೆ ಇಲ್ಲ, ವೈಯಕ್ತಿಕ ಟೀಕೆಗಳನ್ನು ಮಾಡುತ್ತಾ ಜನರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ಅಭಿವೃದ್ಧಿ ಬೇಕಿಲ್ಲ, ಅವರ ಚಿಂತನೆಗಳೂ ಅಭಿವೃದ್ಧಿಯ ಪರವಾಗಿಲ್ಲ ಎಂದು ಟೀಕಿಸಿದರು.

ಬಿಜೆಪಿ ಮುಖಂಡರಾದ ಹೆಚ್.ಎಂ.ರವೀಶಯ್ಯ, ಟಿ.ಆರ್.ಸದಾಶಿವಯ್ಯ, ಬೆಳ್ಳಿ ಲೋಕೇಶ್, ಜೆ.ಜಗದೀಶ್, ತುಂಬಾಡಿ ದೇವರಾಜು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *