ತುಮಕೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಮೂರು ದಶಕಗಳ ಹಿಂದಿನ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವ ರಾಜ್ಯ ಸರ್ಕಾರ ಹಿಂದೂ ವಿರೋಧ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿ ಜಿಲ್ಲಾ ಬಿಜೆಪಿ ಮುಖಂಡರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಭಾರತದ ಧಾರ್ಮಿಕ ತಳಹದಿಯ ರಾಮಾಯಣದ ಮೂಲಪುರುಷ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿ ರಾಮ ಮೂರ್ತಿ ಪ್ರತಿಷ್ಠಾನ ಮಾಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಳೆಯ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿ, ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಟೀಕಿಸಿದರು.
ವೋಟ್ ಬ್ಯಾಂಕಿಗಾಗಿ ಅಲ್ಪಸಂಖ್ಯಾತರನ್ನಯ ಓಲೈಕೆ ಮಾಡುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರಸೇವಕರನ್ನು ಬಂಧಿಸುವ ಪ್ರಯತ್ನ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಈ ತಿಂಗಳ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಮಾಡುತ್ತಿರುವಾಗ ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರು ಹಿಂದೂಗಳನ್ನು ಬಂಧಿಸುವ ಮೂಲಕ ಅವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇದು ಕಾಂಗ್ರೆಸ್‍ನ ಸರ್ವನಾಶಕ್ಕೆ ನಾಂದಿಯಾಗುತ್ತದೆ ಎಂದರು.
ವಿದ್ರೋಹ ಚಟುವಟಿಕೆ ಮಾಡುವ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ಕೇಸ್‍ಗಳನ್ನು ಹಿಂದೆಪಡೆಯುವ ಕಾಂಗ್ರೆಸ್ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಮುಂದಾದ ಕರಸೇವಕರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ನಾಯಕರು ತಮ್ಮ ಅವನತಿಗೆ ಕಾರಣವಾಗುತ್ತಿದ್ದಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಳೆ ಅವರ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ರಾಮ ವಿರೋಧಿ, ಹಿಂದೂ ವಿರೋಧಿ ಖಂಡಿಸಿ, ಬಂಧಿಸಿರುವ ರಾಮಭಕ್ತರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
500 ವರ್ಷಗಳ ಪ್ರಯತ್ನದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದೇ 22ರಂದು ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮವಿದೆ. ಇಂತಹ ಐತಿಹಾಸಿಕ ಸನ್ನಿವೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತ ಹಿಂದೂಗಳ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದೆ. ಬಂಧಿಸಿರುವ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಅಲ್ಪ ಸಂಖ್ಯಾತರ ಓಲೈಕೆಗಾಗಿ ಹಿಂದೂಗಳಿಗೆ ನೋವು ಕೊಡುತ್ತಿದೆ. ಹಿಂದೂ ವಿರೋಧಿತನ ಕಾಂಗ್ರೆಸ್‍ನವರ ರಕ್ತದ ಕಣಕಣಗಳಲ್ಲಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಹಿಂದೂಗಳ ಸಂಭ್ರಮದ ಸಂದರ್ಭವನ್ನು ಸಹಿಸಲಾಗದ ಕಾಂಗ್ರೆಸ್‍ನವರು ಹೊಟ್ಟೆಕಿಚ್ಚಿನಿಂದ ಹಿಂದೂಗಳಿಗೆ ಹಿಂಸೆ ಕೊಡುತ್ತಿದ್ದಾರೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಹೊರಟಿರುವ ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್ ಮುಕ್ತ ದೇಶಕ್ಕೆ ಶ್ರೀಕಾರವಾಗುತ್ತಿದ್ದಾರೆ ಎಂದರು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಾವಿರ ಕೋಟಿ ಬಿಡುಗಡೆ ಮಾಡುವ ಸಿಎಂ ಸಿದ್ದರಾಮಯ್ಯನವರಿಗೆ ರೈತರ ಸಂಕಷ್ಟ ಕಾಣಲಿಲ್ಲವೆ? 500 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆ, ಬೆಳೆ ಇಲ್ಲದೆ ರೈತ ಕುಟುಂಬಗಳ ಬದುಕು ಅತಂತ್ರವಾಗಿದೆ. ಇಂತಹ ಸಂದರ್ಭದಲ್ಲಿ ರೈತರನ್ನು ಮರೆತ ಸಿದ್ದರಾಮಯ್ಯ ಮುಸ್ಲೀಮರ ಓಲೈಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮುಖಂಡ ಎಂ.ಬಿ.ನಂದೀಶ್ ಮಾತನಾಡಿ, ದೇಶವೇ ಸಂಭ್ರಮಿಸುತ್ತಿರುವ ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನವಾದ ಈ ತಿಂಗಳ 22ರಂದು ರಾಜ್ಯ ಸರ್ಕಾರ ರಜೆ ಘೋಷಿಸಬೇಕು. ಅಂದು ಉತ್ಸವ ರೀತಿಯ ಕಾರ್ಯಕ್ರಮ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಎಸ್.ಪಿ ಚಿದಾನಂದ್ ಅವರು, ಕಾಂಗ್ರೆಸ್ ನಾಯಕರಿಗೆ ಹಿಂದೂಗಳೇ ಗುರಿಯಾಗಿದ್ದಾರೆ. ಹಿಂದೂಗಳಿಗೆ ತೊಂದರೆ ನೀಡುವುದು ಅವರ ಅಜೆಂಡವಾಗಿದೆ. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿಂದೂಗಳಿಗೆ ತೊಂದರೆ ಕೊಡುವ ಧೋರಣೆಯನ್ನು ಕಾಂಗ್ರೆಸ್ ನಾಯಕರು ಕೈಬಿಡಬೇಕು ಎಂದರು.
ಜಿಲ್ಲಾ ಬಿಜೆಪಿ ಕೋಶಾಧ್ಯಕ್ಷ ಡಾ.ಪರಮೇಶ್, ಮುಖಂಡರಾದ ಹೆಚ್.ಟಿ.ಭೈರಪ್ಪ, ವಿನಯ್ ಬಿದರೆ, ಹೆಚ್.ಟಿ.ಚಂದ್ರಶೇಖರ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧÀ್ಯಕ್ಷ ಯಶಸ್, ನಗರ ಅಧ್ಯಕ್ಷ ಹನುಮಂತರಾಜು, ಮುಖಂಡರಾದ ಬಿ.ಎಸ್.ನಾಗೇಶ್, ಟಿ.ಆರ್.ಸದಾಶಿವಯ್ಯ, ಬ್ಯಾಟರಂಗೇಗೌಡ, ಜಿಲ್ಲಾ ವಕ್ತಾರ ಜಗದೀಶ್, ಕೆ.ವೇದಮೂರ್ತಿ, ಕಾವ್ಯ ರವಿಶಂಕರ್, ಜ್ಯೋತಿ, ನಗರ ಪಾಲಿಕೆ ಸದಸ್ಯರು ಇತರರು ಭಾಗವಹಿಸಿದ್ದರು.