ತುಮಕೂರು: ರಕ್ತದಾನ ಅತ್ಯಂತ ಶ್ರೇಷ್ಠ ದಾನ ಹಾಗೂ ಜೀವ ಉಳಿಸುವ ಕಾರ್ಯವಾಗಿದೆ. ನಮ್ಮ ವಿದ್ಯಾರ್ಥಿಗಳು ಪ್ರತಿವರ್ಷ ದೊಡ್ಡ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಿದ್ದಾರೆ ಎಂದು ಕುಲಪತಿ ಪ್ರೊ. ವೆಂಕಟೇಶ್ವರಲು ತಿಳಿಸಿದರು.
ವಿವಿ ಕಲಾ ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕವು ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಸಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡು ಶೈಕ್ಷಣಿಕವಾಗಿ, ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಬೇಕು ಎಂದರು.
ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಲ್ತ್ ಕಾರ್ಡ್ ವಿತರಿಸಿ ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಿ ಜಾಗೃತಿ ಮೂಡಿಸುವ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಸ್ಥೆ ಡಾ. ವೀಣಾ ಎ. ಎಸ್. ಮಾತನಾಡಿ, ರಕ್ತದಾನದ ಮಹತ್ವ ಮತ್ತು ಉಪಯೋಗವನ್ನು ತಿಳಿಸಿದರು.
ವಿದ್ಯಾರ್ಥಿಗಳಿಗೆ ಹೆಲ್ತ್ ಕಾರ್ಡ್ ವಿತರಿಸಲಾಯಿತು. 152 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ಯುವ ರೆಡ್ ಕ್ರಾಸ್ ಘಟಕದ ಸಂಯೋಜಕ ಡಾ. ನಾಗರಾಜು ಆರ್. ಸಿ., ಮತ್ತಿತರರು ಉಪಸ್ಥಿತರಿದ್ದರು.