ತುಮಕೂರು: ಸಿರಾ ತಾಲ್ಲೂಕಿನ ಹೆಚ್. ಕಾವಲ್ ಗ್ರಾಮದ ಬಾಲಕ ಆಟವಾಡುತ್ತಿದ್ದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದ ಪ್ರಕರಣವನ್ನು ಬೆಸ್ಕಾಂ ಅಧಿಕಾರಿಗಳು ಸಹಜ ಸಾವು ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಭೋವಿ ಸಮಾಜದ ಸಂಘಟನೆ ನೇತೃತ್ವದಲ್ಲಿ ಪೆÇೀಷಕರು ಹಾಗೂ ಸಂಬಂಧಿಕರು ನಗರದ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.
ಬೆಸ್ಕಾಂ ಅಧಿಕಾರಿಗಳು ಬಾಲಕ ವಿದ್ಯುತ್ ಪ್ರವಹಿಸಿ ಸತ್ತಿಲ್ಲ, ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬ ವಾದ ಮಂಡಿಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭೋವಿ ಸಮಾಜ, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಅನಾಹುತ ಸಂಭವಿಸಿದೆ. ಮೃತ ಬಾಲಕನ ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಸೂಕ್ತ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಲಾಯಿತು.
ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಚಿಕ್ಕನಾಯಕನಹಳ್ಳಿ ಶಾಸಕ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಭೇಟಿ ನೀಡಿ ಮೃತ ಬಾಲಕನ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಈ ಪ್ರಕರಣ ಸಂಬಂಧ ಪಾರದರ್ಶಕ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಅಲ್ಲಿಂದಲೇ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದರು.
ಒಂದು ವೇಳೆ ಈ ಪ್ರಕರಣದ ತನಿಖೆಗೆ ಉದಾಸೀನ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಮೃತ ಬಾಲಕನ ತಂದೆಗೆ ಮಾತು ಬರಲ್ಲ, ವಾಸಿಸಲು ಒಂದು ಸೂರಿಲ್ಲ, ಪರಿಸ್ಥಿತಿ ಶೋಚನೀಯವಾಗಿದೆ. ಬೆಸ್ಕಾಂ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‍ಬಾಬು ಅವರು, ಹೇಮಂತ್ ಎಂಬ ಮಗು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಬೆಸ್ಕಾಂ ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ. ಕೂಲಿ ಕೆಲಸ ಮಾಡಿಕೊಂಡು ಈ ಕುಟುಂಬ ಜೀವನ ಸಾಗಿಸುತ್ತಿದ್ದು, ಹೊಟ್ಟೆ ಬಟ್ಟೆ ಕಟ್ಟಿ ಮಗುವನ್ನು ಓದಿಸುತ್ತಿದ್ದರು. ಹಾಗಾಗಿ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮನೆ ನಿರ್ಮಿಸಿ ಕೊಡಲು ಪ್ರಯತ್ನಿಸುತ್ತೇನೆ ಎಂದರು.
ಮೃತಪಟ್ಟಿರುವ ಬಾಲಕನ ಮರಣೋತ್ತರ ವರದಿ ಬಂದ ನಂತರ ಸರ್ಕಾರದ ಗಮನಕ್ಕೆ ತಂದು ಈ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಹೇಳಿದ ಅವರು, ಬೆಸ್ಕಾಂ ಅಧಿಕಾರಿಗಳು ಇನ್ನೂ ಹಳೇ ಕಾಲದಲ್ಲೇ ಇದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಟಿಸಿಯನ್ನು ಕಲ್ಲು ಮೇಲೆ ಇಟ್ಟಿದ್ದಾರೆ. ಇಂತಹ ಜಾಗಗಳಲ್ಲಿ ಪೆನ್ಲಿಂಗ್ ಮಾಡಬೇಕು. ಇದನ್ನೆಲ್ಲಾ ಗಮನಿಸಿದರೆ ಬೆಸ್ಕಾಂ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದರು.
ಈಗಾಗಲೇ ಬೆಸ್ಕಾಂ ಎಇಇ ಮೇಲೆ ಎಫ್‍ಐಆರ್ ದಾಖಲಾಗಿದೆ ಎಂದ ಅವರು, ಈಗಾಗಲೇ ಎಲ್ಲಾ ಇಲಾಖೆಯವರನ್ನು ಕರೆಸಿ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಎಚ್ಚರಿಕೆ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಶಾಸಕ ಸುರೇಶ್‍ಬಾಬು ರವರು ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ ಮೇರೆಗೆ ಭೋವಿ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ವಿ. ಮರಿಯಪ್ಪ, ನಗರ ಸಿಪಿಐ ದಿನೇಶ್‍ಕುಮಾರ್ ಇದ್ದರು. ಪ್ರತಿಭಟನೆಯಲ್ಲಿ ಭೋವಿ ಸಮುದಾಯದ ಅಧ್ಯಕ್ಷ ಓಂಕಾರ್ ಮತ್ತಿತರರು ಭಾಗಿಯಾಗಿದ್ದರು.