ತುಮಕೂರು: ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ರೋಗದ ಕುರಿತು ನಗರದಲ್ಲಿ ತುಮಕೂರು ವೈದ್ಯಕೀಯ ಸಂಘ ಹಾಗೂ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಬುಧವಾರದಂದು ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಟೌನ ಹಾಲ್ ಬಳಿ ವೈದ್ಯಕೀಯ ಸಂಘ ಮುಂಭಾಗದ ಸ್ತನ ಕ್ಯಾನ್ಸರ್ ಜಾಗೃತಿ ಜಾಥಾಗೆ ಚಾಲನೆ ನೀಡಿದ ಸಾಹೇ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದಂತಹ ಡಾ. ಕೆ.ಬಿ ಲಿಂಗೇಗೌಡ ಅವರು ಮಾತನಾಡಿ, ಮೊದಲ ಹಂತದಲ್ಲೇ ಕ್ಯಾನ್ಸರ್ ರೋಗದ ಗುಣಲಕ್ಷಣಗಳನ್ನು ಪತ್ತೆ ಹಚ್ಚಿದರೆ, ಚಿಕಿತ್ಸೆ ಮೂಲಕ ಪೂರ್ಣವಾಗಿ ರೋಗಿಯನ್ನು ಗುಣಪಡಿಸಲು ಸಾಧ್ಯವಿದೆ. ಸಮಾಜದಲ್ಲಿ ಶೇ 80% ಮಂದಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಅದನ್ನು ಪ್ರಥಮ ಹಂತದಲ್ಲಿ ತಿಳಿದು ಚಿಕಿತ್ಸೆ ಪಡೆಯುವಂತೆ ಅವರು ಮನವಿ ಮಾಡಿದರು.
ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಪ್ರಭಾಕರ್ ಅವರು ಮಾತನಾಡಿ, ನಗರದ ಜನತೆಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ದಿವಸವನ್ನು ‘ಪಿಂಕ್ ಡೇ’ ಎಂದು ಆಚರಿಸುತ್ತಿದ್ದು, ಇದೇ 20ರಂದು ಸ್ತನ ಕ್ಯಾನ್ಸರ್ ಬಗ್ಗೆ ವಿಜ್ಞಾನ ಅಧಿವೇಶನ ನಡೆಸುತ್ತಿದ್ದೇವೆ. ಅನೇಕ ತಜ್ಞ ವೈದ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟಾರ್ ಡಾ.ಎಂ.ಜೆಡ್.ಕುರಿಯನ್, ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರಾದ ಡಾ. ರಂಗಸ್ವಾಮಿ ಹೆಚ್.ವಿ, ಕಾರ್ಯದರ್ಶಿ ಡಾ. ಮಹೇಶ್, ಕರ್ನಾಟಕ ಸ್ತ್ರೀ ರೋಗ ತಜ್ಞ ಸಂಸ್ಥೆ ಡಾಕ್ಟರ್ ದುರ್ಗಾ ದಾಸ್ ಆಸ್ರನ್ನ, ಶ್ರೀ ರೋಗ ತಜ್ಞರಾದ ಡಾ.ಲಲಿತಾ ಹೆಚ್, ಡಾ. ಜ್ಯೋತಿ ಸಿದ್ದಲಿಂಗೇಶ್ವರ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ತುಮಕೂರು ವೈದ್ಯಕೀಯ ಸಂಘದ ಸಿಬ್ಬಂದಿ ವರ್ಗದವರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ನಗರದ ಟೌನ್ ಹಾಲ್ ನಿಂದ ಆರಂಭಗೊಂಡ ಜಾಥಾ, ಎಂ.ಜಿ ರೋಡ್, ವಿವೇಕಾನಂದ ರೋಡ್ ಹಾಗೂ ಅಶೋಕ ರೋಡ್ ನಲ್ಲಿ ಸಂಚರಿಸಿ, ಜನತೆಯಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿತು.