ತುಮಕೂರು : ಮುಂದಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಉತ್ತಮ ಹೆಸರು ತರುವಲ್ಲಿ ಎಲ್ಲಾ ಶಿಕ್ಷಕರು ಸಹ ನಿರಂತರವಾಗಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ನಗರದ ಕೆ.ಪಿ.ಎಸ್ ಎಂಪ್ರೆಸ್ ಬಾಲಕಿಯರ ಶಾಲಾ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 137ನೇ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ಸನ್ಮಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸದೃಢ ಮಾನವ ಸಂಪನ್ಮೂಲವನ್ನು ನಿರ್ಮಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕರ ಕಾರ್ಯ ಅತ್ಯಂತ ಜವಾಬ್ದಾರಿಯುತವಾದುದು, ಮಕ್ಕಳಿಗೆ ವಿದ್ಯಾ-ಬುದ್ದಿಯ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಮೂಲಕ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವುದು ಶಿಕ್ಷಕರ ಜವಾಬ್ದಾರಿ ಎಂದು ಅಭಿಪ್ರಾಯ ಪಟ್ಟರು.
ಅತ್ಯಂತ ಶ್ರೇಷ್ಠ ಶಿಕ್ಷಕರೆನಿಸಿಕೊಂಡ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಎಲ್ಲಾ ಶಿಕ್ಷಕರು ಸಹ ಅವರಂತೆ ಮಕ್ಕಳೊಂದಿಗೆ ಒಡನಾಟ ಬೆಳೆಸಿಕೊಂಡು ಪ್ರೀತಿಯಿಂದ ಅವರ ತಪ್ಪುಗಳನ್ನು ತಿದ್ದುವ ಮೂಲಕ ಸರಿ ದಾರಿಯನ್ನು ತೋರಬೇಕೆಂದರಲ್ಲದೆ, ತನ್ನ ತಾಯಿಯು ಸಹ ಶಿಕ್ಷಕಿ ಆಗಿದ್ದು, ಅವರಿಂದ ಅನೇಕ ಜೀವನ ಮೌಲ್ಯಗಳನ್ನು ಕಲಿತಿದ್ದೇನೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಶಿಕ್ಷಕರು ದೇಶದ ಅಭಿವೃದ್ಧಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ-ತಾಯಿಯ ನಂತರ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳುವ ಶಕ್ತಿ ಶಿಕ್ಷಕರಿಗೆ ಮಾತ್ರ ಸಾಧ್ಯ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ತಮ್ಮ ವ್ಯಕ್ತಿತ್ವ ಮತ್ತು ಆದರ್ಶಗಳ ಮೂಲಕ ಜೀವನಪರ್ಯಂತ ನೆನಪಿನಲ್ಲುಳಿಯುತ್ತಾರೆ ಎಂದು ತಿಳಿಸಿದರು.
ಅತ್ಯಂತ ಹೆಚ್ಚು ಸರ್ಕಾರಿ ನೌಕರರನ್ನು ಶಿಕ್ಷಣ ಇಲಾಖೆ ಹೊಂದಿದ್ದು, ಮೌಲ್ಯಯುತ ಶಿಕ್ಷಣ ನೀಡುವ ಮುಖೇನ ಸದೃಢ ಮಾನವ ಸಂಪನ್ಮೂಲ ಸೃಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಶಿಕ್ಷಕರು ಮಕ್ಕಳಿಗೆ ಮಾದರಿಯಾಗಿರಬೇಕು. ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳಿಗೆ ಶಿಕ್ಷಕರು ಒಗ್ಗಿಕೊಂಡು ವಿದ್ಯಾರ್ಥಿಗಳಿಗೆ ಹೊಸ ಹೊಸ ವಿಷಯಗಳನ್ನು ಕಲಿಸಬೇಕು ಎಂದು ತಿಳಿಸಿದರು.
ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಮಾತನಾಡಿ, ದೇಶದ ಅಭಿವೃದ್ಧಿ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಶಿಕ್ಷಕರು ಆತ್ಮ ವಿಶ್ವಾಸ, ವಿನಯ ಶೀಲತೆ, ಸಂಸ್ಕಾರ ಮತ್ತು ಪ್ರಾಮಾಣಿಕತೆಯನ್ನು ಕಲಿಸುವ ಮೂಲಕ ಮಕ್ಕಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಮಾಡಬೇಕು. ಶಿಕ್ಷಕರು ಮಕ್ಕಳಿಗೆ ಪ್ರೀತಿಯಿಂದ ಕಲಿಸಬೇಕು. ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಯಶಸ್ಸು ಇದ್ದೇ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಡಯಟ್(ಅಭಿವೃದ್ಧಿ) ಉಪನಿರ್ದೇಶಕ ಕೆ. ಮಂಜುನಾಥ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಕೆ. ಮನಮೋಹನ್, ವಿವಿಧ ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಜಿಲ್ಲೆಯ ಶಿಕ್ಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರಿಗೆ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಗಣ್ಯರಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗಣ್ಯರಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸಾವಿತ್ರಿ ಬಾಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.