ಬಿಎಸ್‌ಎನ್‌ಲ್ ನಿಂದ 4ಜಿ-5ಜಿ ಸೇವೆ ಪ್ರಾರಂಭ- ಮರಳಿಗೂಡಿಗೆ ಬಂದ ಗ್ರಾಹಕರು

ತುಮಕೂರು : ಬಿಎಸ್ಎನ್ಎಲ್ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ 4ಜಿ ಸೇವೆ ಪ್ರಾರಂಭಿಸಿದೆ. ಡಿಸೆಂಬರ್ ನಿಂದ 5ಜಿ ಸೇವೆಯನ್ನು ಪ್ರಾರಂಭಿಸುತ್ತಿರುವುದರಿಂದ  ಬೇರೆ ಸಿಮ್‌ಗೆ ಹೋಗಿದ್ದ ಗ್ರಾಹಕರು ಪುನಃ ಮರಳಿ ಗೂಡಿಗೆ ಎನ್ನುವಂತೆ ಬಿಎಸ್ಎನ್ಎಲ್ ನತ್ತ ವಾಪಸ್ ಬರುತ್ತಿದ್ದಾರೆ ಎಂದು ಬಿಎಸ್‌ಎನ್‌ಎಲ್ ನ ಸಾರ್ವಜನಿಕ ವಲಯದ ಹಿರಿಯ ವ್ಯವಸ್ಥಾಪಕರಾದ ದಿಗಂಬರ್ ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ 2ಜಿ ಮತ್ತು 3ಜಿ ಸೇವೆಗಳನ್ನು ಮಾತ್ರ ಒದಗಿಸಲಾಗುತ್ತಿತ್ತು. ಇದೀಗ 4ಜಿ ಸೇವೆ ಒದಗಿಸಲಾಗುತ್ತಿದೆ. ತುಮಕೂರು ಮತ್ತು ಹಾಸನ ವ್ಯಾಪಾರ ವಹಿವಾಟಿನ ವಲಯದಲ್ಲಿ ಜುಲೈನಿಂದಲೇ ಈ ಸೇವೆ ಆರಂಭಗೊಂಡಿದ್ದು, ಪ್ರಸ್ತುತ ತುಮಕೂರಿನಲ್ಲಿ 50 ಮತ್ತು ಹಾಸನದಲ್ಲಿ 20 ಸೈಟ್ ಗಳು 4ಜಿ ಸೇವೆಯಲ್ಲಿ ಕಾರ್ಯಾರಂಭಗೊಂಡಿವೆ. ಜುಲೈ ಅಂತ್ಯದ ವೇಳೆಗೆ 100 ಮತ್ತು 50 ಕ್ರಮವಾಗಿ ತುಮಕೂರು ಮತ್ತು ಹಾಸನದಲ್ಲಿ ಇರುತ್ತವೆ. ಅಕ್ಟೋಬರ್ ವೇಳೆಗೆ ತುಮಕೂರಿನ 286ಮತ್ತು ಹಾಸನದಲ್ಲಿ 194 ಅಸ್ತಿತ್ವದಲ್ಲಿರುವ ಮತ್ತು ಹೊಸ ಸೈಟ್ ಗಳು  4ಜಿಗೆ ಹೊಂದಿಕೆಯಾಗಲಿವೆ ಎಂದರು.

ಬಿಎಸ್ಎನ್ಎಲ್ ಯೋಜನೆಯು ದಿನಕ್ಕೆ 1 ಜಿಬಿ ಡೇಟಾದೊಂದಿಗೆ 28 ದಿನಗಳವರೆಗೆ 108ರೂ.ಗಳಿಂದ ಪ್ರಾರಂಭವಾಗಲಿದೆ. ಇತರೆ 28 ದಿನಗಳವರೆಗೆ 349 ರಿಂದ ಪ್ರಾರಂಭವಾಗುತ್ತದೆ ಎಂದು ವಿವಿಧ ಆಕರ್ಷಕ ಸುಂಕದ ಯೋಜನೆಗಳನ್ನು ವಿವರಿಸಿದರು. ಇದರ ಜೊತೆಗೆ ಮನೆಗಳಿಗೆ ವೈರ್ಲೆಸ್ ಫೈಬರ್ ಸೇವೆಗಳ ಬಗ್ಗೆಯೂ ಮಾಹಿತಿ ನೀಡುತ್ತಾ ಗ್ರಾಮೀಣ ಯೋಜನೆ ಮಾಸಿಕ 249 ರೂ., ನಗರ ಯೋಜನೆ 299 ರೂ.ಗಳು ಇರುವುದಾಗಿ ತಿಳಿಸಿದರು.

ಈಗಾಗಲೇ ಬಿಎಸ್ಎನ್ಎಲ್ ಸಿಮ್ ಗಳನ್ನು ಹೊಂದಿ ಕಾರಣಾಂತರಗಳಿಂದ ಸ್ಥಗಿತಗೊಳಿಸಿರುವ ಗ್ರಾಹಕರು, ಉಪಯೋಗಿಸದೆ ಇರುವ ಗ್ರಾಹಕರು ಕೂಡಲೇ ಬಿಎಸ್ಎನ್ಎಲ್ ಸೇವೆ ಪಡೆಯಬಹುದಾಗಿದೆ. 4 ಜಿ ಸಿಮ್ ಅನ್ನು ಗ್ರಾಹಕರಿಗೆ ಉಚಿತವಾಗಿ ವಿತರಿಸಲಾಗುವುದು. ಹೊಸ ಗ್ರಾಹಕರು ಹತ್ತಿರದ ಸಿಎಸ್ಸಿ ಅಥವಾ ಚಿಲ್ಲರೆ ವ್ಯಾಪಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಪ್ರಸ್ತುತ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಪ್ರತಿ ತಿಂಗಳು 5 ಸಾವಿರ ಹೊಸ ಗ್ರಾಹಕರು ಬಿಎಸ್ಎನ್ಎಲ್ ಗೆ ಸೇರುತ್ತಿದ್ದಾರೆ. ಇತರೆ ಅಪರೇಟರ್ಗಳು ಸುಂಕವನ್ನು ಶೇ.25 ರಿಂದ 30ರಷ್ಟು ಹೆಚ್ಚಿಸಿದ್ದರೂ ಸಹ ಬಿಎಸ್ಎನ್ಎಲ್ ಮಾತ್ರ ಸುಂಕವನ್ನು ಹೆಚ್ಚಿಸಿಲ್ಲ. ಮುಂದೆಯೂ ಹೆಚ್ಚಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ತಿಳಿಸಿದರು.

ಡಿಸೆಂಬರ್ 24ರ ವೇಳೆಗೆ ಎಲ್ಲ 4ಜಿ ಸೈಟ್ ಗಳನ್ನು ಎರಡೂ ಜಿಲ್ಲೆಗಳಲ್ಲಿ 5ಜಿ ತಂತ್ರಜ್ಞಾನಕ್ಕೆ ಅಪ್ ಗ್ರೇಡ್ ಮಾಡಲಾಗುತ್ತದೆ. ಅದು ಸಾಫ್ಟ್ ವೇರ್ ಆಧಾರಿತವಾಗಿದೆ. ಇದೇ ಮೊದಲ ಬಾರಿಗೆ ಬಿಎಸ್ಎನ್ಎಲ್ 4ಜಿಗೆ ಮೇಕಿನ್ ಇಂಡಿಯಾ ಉಪಕರಣಗಳನ್ನು ಮಾತ್ರ ಬಳಸುತ್ತಿದೆ. ಇದಕ್ಕೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಹಾಯ ಮಾಡುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಎನ್‌ಎಲ್ ನ ಸಾರ್ವಜನಿಕ ವಲಯದ ಸಹಾಯಕ  ವ್ಯವಸ್ಥಾಪಕರಾದ ಮಹೇಶ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *