ಈ ಪೋಟೋ ನೋಡಿ 03-03-2019ರಂದು ಮೈತ್ರಿನ್ಯೂಸ್ ನಾಲ್ಕನೇ ವರ್ಷದ ವಾರ್ಷಿಕೋತ್ಸವದಲ್ಲಿ ನನ್ನ ಹೆಗಲ ಮೇಲೆ ಕೈ ಹಾಕಿ ನಿಂತಿರುವ ಕೇಬಿಯ ಪ್ರೀತಿಯನ್ನು ಎಂದಿಗೂ ಮರೆಯಲಾರದು, ಅದೇ ಕೊನೆ ಅವರ ಜೊತೆ ಪೋಟೋ ತೆಗೆಸಿಕೊಂಡಿದ್ದು, ಆ ನಂತರ ಎಲ್ಲಾ ನಡೆದದ್ದು ಕೆಟ್ಟ ಘಟನೆ, ಆ ನಂತರ ಕೇಬಿ ದೈಹಿಕವಾಗಿ ನಾನು ಕಳೆದುಕೊಂಡಿದ್ದರೂ ಮಾನಸ್ಸಿಕವಾಗಿ ನಮ್ಮೋಳಗೆ ಬುದ್ಧನಂತೆ ಬಕಾಲನಾಗಿ ಸಂಚರಿಸುತ್ತಿದ್ದಾರೆ. ಕೇಬಿಯ ನಂತರ ಡಾ.ಬಸವರಾಜು ಅವರು ಬುದ್ಧನ ತಾಯಿತನವನ್ನು ಕಟ್ಟಿಕೊಂಡು ಎಲ್ಲಾರನ್ನೂ ಎಳೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಾ ಕೇಬಿಯ ಇಲ್ಲದಿರುವಿಕೆಯನ್ನು ಮರೆಸುತ್ತಿದ್ದಾರೆ.
ಈಗ ಐದು ವರ್ಷಗಳ ನಂತರ ನನ್ನ ಹೆಗಲ ಮೇಲೆ ಕೈ ಹಾಕಿ ಪ್ರೀತಿ ತೋರಿಸಿದ ದಿನವೇ ಕೇಬಿಯ ‘ತೊಗಲ ಮಂಟಪ’ ಬಿಡುಗಡೆಯಾಗುತ್ತಿರುವುದು ಅದೇನು ಕಾಕತಾಳಿಯವೋ ತಿಳಿಯದು, ಕೇಬಿ ಇಲ್ಲದ ಐದು ವರ್ಷ ನಿಜಕ್ಕೂ ಒಂದು ಸಾಂಸ್ಕøತಿಕ ಲೋಕಕ್ಕೆ ತುಂಬಲಾರದ ನಷ್ಟವಂತೂ ಆಗಿದೆ.
ಕೇಬಿಯವರಿಗೆ ಕೆಲವು ಸಲ ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದು ತಿಳಿಯುತಿತ್ತೋ ಇಲ್ಲವೋ ಎಲ್ಲಿಗೋ ಹೊರಟವರು ಮತ್ತೆಲ್ಲಿಗೋ ಹೊರಟು ಬಿಡುತ್ತಿದ್ದರು. ತಮ್ಮ ಜೊತೆಯಿರುತ್ತಿದ್ದ ಶಿಷ್ಯರಿಗೆ ಕರೆ ಮಾಡಿಕೊಂಡು ಬಾರೋ ಇಂತಹ ಕಡೆ ಇದ್ದೇನೆ ಎಂದು ಕರೆಸಿಕೊಂಡು ಬಿಡುತ್ತಿದ್ದರು.
ಹಲವಾರು ಸಲ ನನಗೆ ನಡು ದಾರಿಯಲ್ಲೇ ಅವರ ಕಾರು ಸಿಕ್ಕಿ ಬಿಡುತ್ತಿತ್ತು, ಕೇಬಿಯವರ ಕಾರು ನಿಂತಿರುವುದನ್ನು ನೋಡಿ ಕಾರಿನಲ್ಲಿ ನೋಡಿದರೆ ಇರುತ್ತಿರಲಿಲ್ಲ, ಅದ್ಯಾವುದೋ ಮೂಲೆಯಲ್ಲಿ ಹಣ್ಣನ್ನೋ, ಸಿರಿಧಾನ್ಯದ ಅಂಗಡಿಯಲ್ಲೋ ನಿಂತು ಏನನ್ನಾದರು ಕೊಂಡುಕೊಳ್ಳುತ್ತಿರುತ್ತಿದ್ದರು, ನಾನು ಅವರಲ್ಲಿಗೆ ಹೋದ ಕೂಡಲೇ ಬಾರೊ ನಿನಗೆ ಏನು ಬೇಕೋ ಅನ್ನುತ್ತಿದ್ದವರು, ಕೈಯಲ್ಲಿರುವ ದುಡ್ಡನ್ನು ಜೋಬಿಗಿಟ್ಟು ಮುಂದಿನ ಸಂಚಿಕೆಗೆ ಬರಿತೀನಿ ಕಣೋ ಅನ್ನೋರು, ಅವರು ಒಮ್ಮೆ ಯಾವುದೋ ಊರಿಗೆ ಹೋಗಿದ್ದವರು ಬರುವಾಗ ಶೆಟ್ಟಿಹಳ್ಳಿ ರಸ್ತೆಯಲ್ಲಿ ಮನೆಗೆ ಹೋಗಲು ಬಂದವರು, ಮಾರುತಿನಗರದ ಸಮೀಪ ನಾನು ನಿಂತಿರುವುದನ್ನು ನೋಡಿ ಅವರ ಕಾರು ನಿಲ್ಲಿಸಿ, ಬಾರೋ ಎಂದು ಕರೆದು ಅಲ್ಲಿರುವ ಬಾರೊಂದಕ್ಕೆ ಯಾವುದೇ ಸಂಕೋಚವಿಲ್ಲದೆ ಸ್ಕಾಚ್‍ವೊಂದನ್ನು ತೆಗೆದುಕೊಂಡು ತಮ್ಮ ಕಾರಿನಲ್ಲಿಟ್ಟುಕೊಂಡು ಊರಿಗೆ ಹೋಗ ಬೇಕು ಕಣಯ್ಯ, ಅಲ್ಲಿ ಕೆಲವರು ನಾನು ಹೋಗುವುದನ್ನೆ ಕಾಯುತ್ತಿರುತ್ತಾರೆ, ಅವರೆಲ್ಲಾ ಹೊಲದ ಕೆಲಸ ಮಾಡ್ತಾರೆ, ಹೊಲದ ಕೆಲಸವಾದ ಮೇಲೆ ಅವರಿಗೆ ಸ್ವಲ್ಪ ಡ್ರಿಂಕ್ಸ್ ಕೊಟ್ರೆ ಬಹಳ ಖುಷಿ ಪಡ್ತಾರೆ ಅಂತ ಹೇಳಿದ್ರು.
ಇವರು ಇರುವಲ್ಲಿ ಶಿಷ್ಯಕೋಟಿ ಇರುಲೇ ಬೇಕಿತ್ತು, ಕೆಲವರು ಸಾಹಿತ್ಯದ ಬಗ್ಗೆ ಕೇಬಿಯೊಂದಿಗೆ ಮಾತನಾಡಿದರೆ, ಮತ್ತೆ ಕೆಲವರು ರಾಜಕೀಯದ ಬಗ್ಗೆ ಧೀರ್ಘವಾದ ಚರ್ಚೆಯನ್ನು ಮಾಡುತ್ತಿದ್ದರು. ಅವರು ಮನೆಯಲ್ಲಿ ಎಂದೂ ಕುಳಿತವರೆ ಅಲ್ಲ, ಕೊನೆಯ ಪಕ್ಷ ತಮ್ಮ ಊರಾದ ಕೆಂಕೆರೆ ಹೊಲಕ್ಕೆ ಹೋಗಿಯಾದರು ಬರುತ್ತಿದ್ದರು, ಆವರು ಈ ಸುತ್ತುವಿಕೆಯನ್ನು ಅದು ಹೇಗೆ ರೂಢಿಸಿಕೊಂಡರೋ ತಿಳಿಯದು, ಒಟ್ಟಿನಲ್ಲಿ ಅವರು ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕೂರದೆ ಸದಾ ಚಲನೆಯಲ್ಲೇ ಇರುತ್ತಿದ್ದವರು, ಅವರು ಯಾವುದೇ ಸಮಾರಂಭವಿರಲಿ, ಅಲ್ಲಿ ಬಹಳ ತಾತ್ವಿಕವಾದ ಮಾತುಗಳನ್ನಾಡಿ ಕೆಲವರನ್ನು ಚಿಂತೆಗೆ ಹಚ್ಚಿ ಬಿಡುತ್ತಿದ್ದರು, ಅವರು ಒಂದು ತರಹ ಅಯಸ್ಕಾಂತದಂತೆ ತಮ್ಮ ಸುತ್ತಲಿದ್ದವರನ್ನು ಆಕರ್ಷಿಸುತ್ತಿದ್ದರು, ಇವರು ಆ ಸುತ್ತಲಿರುವವರನ್ನು ದೂರ ತಳ್ಳಿದರೆ, ಅವರೆ ಇವರ ಸೆಳತಕ್ಕೆ-ಇವರ ಮೋಹಕ್ಕೆ ಸಿಕ್ಕು ಇವರಲ್ಲಿಗೆ ಬಂದು ನಿಂತು ಬಿಡುತ್ತಿದ್ದರು, ಇಲ್ಲ ಇವರೆ ಅವರಿರುವಲ್ಲಿಗೆ ಹೋಗಿ ಬಿಡುತ್ತಿದ್ದರು, ಏನೋ ಈಗ ಬಂದೆ, ನನ್ನಿಂದ ತೊಂದರೆ ಆಯಿತೇನೋ ಎಂಬ ನಗುತ್ತಲೇ ಅಲ್ಲಿ ಸೇರಿ ಬಿಡುತ್ತಿದ್ದರು.
ಬರೀ ಸೇರಿದ್ದರೆ ಇಲ್ಲ, ಅವರೊಂದು ತರಹ ಅಕ್ಟೋಪಾಸ್‍ನಂತೆ ಅಲ್ಲಿರುವವರನ್ನು ಸುತ್ತಿಕೊಳ್ಳುತ್ತಾ, ಹೊಸ ಒಂದು ಚರ್ಚೆಯನ್ನು ಹುಟ್ಟು ಹಾಕುತ್ತಿದ್ದರು. ತಮ್ಮ ಬಳಗದ ಶಿಷ್ಯರಲ್ಲಿ ಯಾರಾದೂ ಬಹಳ ದಿನ ಕಾಣದೆ, ಇವರ ಕಣ್ಣಿಗೆ ಬೀಳದೆ ಇದ್ದಾಗ ಉಳಿದವರಿಗೆ ಅವನು ಬದುಕಿದ್ದಾನೋ-ಸತ್ತಿದ್ದಾನೋ ಎಂದು ಕುಟುಕುತ್ತಿದ್ದರು, ಅದು ಚೇಳಿನ ಕುಟುಕು ತರವಿದ್ದರೂ ಅಲ್ಲಿ ವಿಷವಿರಲಿಲ್ಲ, ಆತ ಬಂದರೆ ಆತನಿಗೆ ಕಿಚಾಯಿಸುವ ಒಂದು ವಿಲೋಮಾ ಅವರದಾಗಿತ್ತು.
ಅವರ ಆಪ್ತ ಗೆಳೆಯ ವೈದ್ಯರುಗಳು ಕೇಬಿಗೆ ಹಲವಾರು ಸಲ ಈ ಸುತ್ತುವಿಕೆ ಮತ್ತು ಶಿಷ್ಯರೊಂದಿಗೆ ಕುಡಿಯುವಿಕೆಯನ್ನು ಎಚ್ಚರಿಸಿದರು, ಅವರು ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಲೇ ಇರಲಿಲ್ಲ, ಅಲ್ಲಿಯು ಅವರು ಹಾಸ್ಯವಾಗಿಯೋ ಅಥವಾ ಇಲ್ಲಯ್ಯ ಇನ್ನು ಮೇಲೆ ಅದನ್ನು ಬಿಟ್ಟು ಬಿಡುತ್ತೇನೆ ಎಂದು ತಮ್ಮ ತಲೆ ಮೇಲಿನ ಕನ್ನಡಕವನ್ನು ಕಣ್ಣಿಗೆ ಹಾಕಿಕೊಂಡು ಮೌನಕ್ಕೆ ಜಾರಿದಂತೆ ತೋರಿಸಿಕೊಳ್ಳುತ್ತಿದ್ದರು, ಹಾಗೆಯೆ ಮತ್ತೊಮ್ಮ ಆಯಿತಯ್ಯ, ಇನ್ನು ಮುಂದೆ ಹಾಗೆಲ್ಲಾ ಕುಡಿಯಲ್ಲ ಕಣಯ್ಯ, ನಿಮಗ್ಯಾಕ್ರೋ ಇಷ್ಟು ಭಯ ಅನ್ನೋರು.
ಅವರು ತಮ್ಮ ಕಾವ್ಯವನ್ನು ಖಂಡ್ಯಕಾವ್ಯದಲ್ಲೇ ಬರೆದಾಗ ಹಲವಾರು ಸಾಹಿತಿಗಳು ಕೇಬಿಯ ಕಾವ್ಯ ಅರ್ಥವಾಗುವುದಿಲ್ಲ, ತಮ್ಮ ಕಾವ್ಯದ ಜೊತೆಗೆ ಡಿಕ್ಸನರಿಯನ್ನು ಬರೆದರೆ ಒಳ್ಳೆಯದು ಎಂದು ಕುಹಕವಾಡಿದ್ದು ಉಂಟು, ಆದರೆ ಅವರು ಬರೆದಿರುವ ಕಾವ್ಯವು ಒಂದು ಪರಂಪರೆಯನ್ನು ಕಟ್ಟಿ ಕೊಟ್ಟಿರುವಂತಹವುದು, ಬಕಾಲ, ದಕ್ಲಕಥಾದೇವಿಕಾವ್ಯ, ಗಲ್ಲೆಬಾನಿ ಇವು ಸಾವಿರಾರು ವರ್ಷಗಳ ಒಂದು ಜನಾಂಗದ ಜೀವನ ಶೈಲಿ, ಪದ್ಧತಿ, ಪರಂಪರೆ, ಅವರ ಶೊಷಣೆ, ಹೆಣ್ಣಿನ ಸಂಕಷ್ಟಗಳನ್ನು ಹೇಳುವ ಒಂದು ಕಾವ್ಯವನ್ನು ಕೊಟ್ಟು ಹೋಗಿದ್ದಾರೆ, ಕನ್ನಡದ ಸಾಹಿತಿ ಒಬ್ಬರು ಹೇಳುವಂತೆ ಕೇಬಿಯವರ ಸಾಹಿತ್ಯವು ಇಂಗ್ಲೀಷನ ಕವಿ ಶೇಕ್ಸ್‍ಪಿಯರ್‍ಗೂ ಉತ್ತಮವಾದದ್ದು, ಅವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಕನ್ನಡ ಸಾಹಿತ್ಯಲೋಕ ವಿಫಲವಾಗಿದೆ, ಇದರಿಂದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಸಿಗಬೇಕಾದ ಪ್ರಶಸ್ತಿಯು ಸಿಕ್ಕಿಲ್ಲ ಎನ್ನುತ್ತಾರೆ.
ಈ ಹೊತ್ತಿಗೆ ಕೇಬಿ ನಿಧನರಾಗಿ ಸುಮಾರು ಐದು ವರ್ಷವಾದರು ಅವರ ನೆನಪಿನ ಕಾರ್ಯಕ್ರಮಗಳು, ಅವರ ಸಾಹಿತ್ಯದ ಬಗ್ಗೆ ಕಾರ್ಯಕ್ರಮಗಳು ನಡೆಯುತ್ತಲೇ ಇವೆ, ಇಷ್ಟೆಲ್ಲಾ ಕಾರ್ಯಕ್ರಮಗಳು ನಡೆಯಲು ಅವರ ಆಯಸ್ಕಾಂತದಂತಹ ಆಕರ್ಷಣೆ, ಅವರ ಮಾತಿನ ಮೋಡಿಯೆ ಕಾರಣವಲ್ಲದೆ, ಎಂತಹವರನ್ನು ಹೆಗಲ ಮೇಲೆ ಕೈ ಹಾಕಿ ಮಾತನಾಡಿಸುತ್ತಿದ್ದ ಪ್ರೀತಿ ಅವರನ್ನು ಮತ್ತೆ ಮತ್ತೆ ನೆನೆಯುವ ಕಾರ್ಯವನ್ನು ರಾಜ್ಯದ ಹಲವಾರು ಕಡೆ ಮಾಡುತ್ತಿದ್ದಾರೆ.
ಕೇಬಿ ಏನು ರಾಜಕಾರಣಿಯಾಗಲಿ, ಯುನಿರ್ವಸಿಟಿಯಲ್ಲಿದ್ದು ದೊಡ್ಡ ಶಿಷ್ಯ ಕೋಟಿಯನ್ನು ಪಡೆದವರಾಗಲಿ ಆಗಿರಲಿಲ್ಲ, ಆದರೂ ಅವರು ಪಾದರಸದಂತೆ ರಾಜ್ಯದ ಹಲವಾರು ಭಾಗಗಳಿಗೆ ಎಡ ತಾಕುತ್ತಿದದ್ದಲ್ಲದೆ, ಅವರ ವೇದಿಕೆಯ ಮೇಲಿನ ಮಾತುಗಳು ಹಲವರನ್ನು ಆಕರ್ಷಿಸುತ್ತಿದ್ದವು, ಮತ್ತೆ ಕೆಲವರನ್ನು ಇರಿಸು-ಮುರಿಸಿಗೆ ಈಡು ಮಾಡುತ್ತಿದ್ದವು, ಅವರು ಮೈಸೂರಿನಲ್ಲಿ ನಡೆದ ಒಳಮೀಸಲಾತಿಯ ಚರ್ಚೆಯ ಸಭೆಯಲ್ಲಿ ಒಳಮೀಸಲಾತಿ ಜಾರಿಯಾಗಲೇ ಬೇಕು, ಯಾರಿಗೆ ಮೀಸಲಾತಿಯ ಸವಲತ್ತು ಸಿಗದೆ ವಂಚಿತರಾಗಿದ್ದಾರೋ ಅಂತಹವರಿಗೂ ಸಿಗಬೇಕು, ರಾಜಕೀಯ, ಉದ್ಯೋಗ ಮೀಸಲಾತಿಯನ್ನು ಒಂದು ಜಾತಿ ಮಾತ್ರ ಹೆಚ್ಚು ಪಡೆದುಕೊಂಡಿದೆ ಎಂದು ಹೇಳಿ ಇಡೀ ರಾಜ್ಯದಲ್ಲಿ ಒಂದು ಚರ್ಚೆಯನ್ನು ಹುಟ್ಟು ಹಾಕಿದ್ದರು, ಒಳ ಮೀಸಲಾತಿಯ ಬಗ್ಗೆ ಈ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ದೊಡ್ಡ ಚರ್ಚೆ ನಡೆಯಿತು.
ಒಳಮೀಸಲಾತಿ ಜಾರಿಯಾಗಬೇಕು ಎಂಬ ಬಹು ದೊಡ್ಡ ಆಸೆ ಕೇಬಿಯವರದ್ದಾಗಿತ್ತು, ಇದಕ್ಕಾಗಿ ಅವರು ತುಮಕೂರಿನ ಕೆಲವರಿಗೆ ಹಲವರಿಂದ ಹಣಕಾಸು ನೆರವನ್ನು ಮಾಡಿದ್ದುಂಟು, ತಮಗೆ ಆಪ್ತರಾದ ಸಿದ್ದರಾಮಯ್ಯನವರೆ ಮುಖ್ಯಮಂತ್ರಿಯಾಗಿದ್ದರು ಒಳಮೀಸಲಾತಿಯನ್ನು ಜಾರಿಗೆ ತರಲು ಸಾಧ್ಯವಾಗದೆ ಇರುವುದಕ್ಕೆ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಕೆಲ ಜಾತಿಯ ರಾಜಕಾರಣಿಗಳು ತಮ್ಮ ಜಾತಿಗೆ ಈಗ ಸಿಗುತ್ತಿರುವ ರಾಜಕೀಯ ಸೌಲಭ್ಯ ಸಿಗವುದಿಲ್ಲ ಎಂಬ ಪೂರ್ವಗ್ರಹ ಪೀಡಿತರಾಗಿ ಅದನ್ನು ಜಾರಿಗೊಳಿಸದಂತೆ ಒತ್ತಡ ಹಾಕಿದ ಬಗ್ಗೆ ಕೇಬಿಯವರು ಆಗಾಗ ಹೇಳುತ್ತಿದ್ದರು.
ಕೇಬಿಗೆ ರಾಜಕೀಯದಲ್ಲಿ ಏನಾದರೂ ಆಗ ಬೇಕು ಎಂಬ ಒತ್ತಾಸೆ ಬಹಳ ಇದ್ದರೂ ತಮ್ಮ ಜನಾಂಗದವರೆ ಅವರಿಗೆ ಒಗ್ಗಟ್ಟು ಪ್ರದರ್ಶಿಸಿ ಆ ನಿಟ್ಟಿನಲ್ಲಿ ಕೇಬಿಯನ್ನು ಒಪ್ಪಿಕೊಳ್ಳಲು ಮನಸ್ಸು ಮಾಡಲಿಲ್ಲ, ಅಲ್ಲದೆ ತುಮಕೂರು ಜಿಲ್ಲೆಯನ್ನು ಪ್ರತಿನಿಧಿ ಎನ್ನಿಸಿಕೊಂಡಿರುವ ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರು ಕೇಬಿಯನ್ನು ರಾಜಕೀಯ ಸೌಲಭ್ಯ ನೀಡಲು ಒಪ್ಪದ ಕಾರಣ ಕೇಬಿಗೆ ವಿಧಾನ ಪರಿಷತ್ ಸದಸ್ಯರಾಗುವ ಅಥವಾ ರಾಜ್ಯಸಭಾ ಸದಸ್ಯರಾಗುವ ಅವಕಾಶ ತಪ್ಪಿ ಹೋಯಿತು ಎಂದು ಹೇಳಲಾಗುತ್ತಿದೆ, ಆದು ಸತ್ಯವಿರಬಹುದು.
ಈಗ ಕೇಬಿ ನಮ್ಮ ಮುಂದೆ ಇಲ್ಲ, ಕೇಬಿಯವರು ಇದ್ದಾಗ ಸಾಹಿತ್ಯದ ಹಲವಾರು ಕಾರ್ಯಕ್ರಮಗಳಿಗೆ ಅವರ ಸಲಹೆ, ಅವರ ಉಪಸ್ಥಿತಿ ಇರುತಿತ್ತು, ಈಗ ಅವರಿಲ್ಲದೆ ಹಲವಾರು ಬರಹಗಾರರಿಗೆ, ಸಾಹಿತಿಗಳಿಗೆ ಕೇಬಿಯ ಅನುಪಸ್ಥಿತಿ ಕಾಡುತ್ತಿದೆ.
ಕಳೆದ ಐದು ವರ್ಷದ ಹಿಂದೆ ಪತ್ರಿಕಾ ವಾರ್ಷಿಕೋತ್ಸವದಲ್ಲಿ ಕೇಬಿಯವರು ವಿಶೇಷಾಂಕ ಬಿಡುಗಡೆ ಮಾಡಿದರೆ, ಅದರ ಹಿಂದಿನ ವರ್ಷ 2017ರಲ್ಲಿ ಪತ್ರಿಕೆಯು ಏರ್ಪಡಿಸಿದ್ದ ಬುದ್ಧಪೂರ್ಣಿಮೆಯ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ್ದರು, ಅಲ್ಲದೆ ಕವಿಗೋಷ್ಟಿಗೆ ಬಂದವರಿಗೆ ಉಪ್ಪಿಟ್ಟು ಮತ್ತು ಕೇಸರಿ ಬಾತನ್ನು ಅವರೆ ಮಾಡಿಸಿಕೊಂಡು ಬಂದು ಬುದ್ಧನ ಬಗ್ಗೆ ತುಂಬಾ ಮಾರ್ಮಿಕವಾಗಿ ಮಾತನಾಡಿದ್ದರು. ಪತ್ರಿಕೆಯು ಕಳೆದ 10 ವರ್ಷಗಳ ಹಿಂದೆ ಬಿಡುಗಡೆಯಾದಾಗಲು ಅವರು ಉಪಸ್ಥಿತರಿದ್ದರು, ಇದಲ್ಲದೆ ಮೂರನೇ ವರ್ಷದ ಪತ್ರಿಕಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಅವರು ಪತ್ರಿಕಾ ರಂಗ ಒಂದು ಪಕ್ಷದ ಪರವಾಗಿ ನಿಂತಿರುವುದು ತುಂಬ ಅಪಾಯಕಾರಿ ಎಂದು ಹೇಳಿದ್ದರು.
ಪತ್ರಿಕೆಯ ವಾರ್ಷಿಕೋತ್ಸವ ಮಾಡಬೇಕೆಂದಾಗ ಅವರ ಸಲಹೆ-ಸಹಾಕಾರ ಎರಡು ಇರುತ್ತಿದ್ದವು, ಈಗ ವರ್ಷ ಅವರಿಲ್ಲದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ, ಅವರನ್ನು ಮರೆಯಬೇಕು ಅಂದುಕೊಳ್ಳುತ್ತಿರುವಾಗಲೆ ಒಂದಲ್ಲ ಒಂದು ಕಡೆ ಅವರ ನೆನಪಿನ ಕಾರ್ಯಕ್ರಮವನ್ನೋ, ಅವರ ಸಾಹಿತ್ಯದ ಕಾರ್ಯಕ್ರಮವನ್ನೋ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನೋ ಮಾಡುವ ಆಹ್ವಾನ ಪತ್ರಿಕೆ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡು ಕೇಬಿಯನ್ನು ಮತ್ತಷ್ಟು ಮತ್ತಷ್ಟು ನೆನಪಿಸುತ್ತವೆ.
ಕೇಬಿಯವರು ಒಂದಲ್ಲ ಒಂದು ರೀತಿಯಲ್ಲಿ ಅವರು ಚಲನೆಯಲ್ಲಿರುತ್ತಿದ್ದರು, ಈ ಚಲನೆಯ ಅವರಲ್ಲಿ ಇದುದ್ದರಿಂದಲೋ ಏನೋ ಅವರು “ಚಲನ” ಪ್ರಕಾಶನವನ್ನು ಸಹ ಹುಟ್ಟು ಹಾಕಿದ್ದರು. ಅವರಿದ್ದಾಗ ಅವರ ಜೊತೆ ದಿನಗಟ್ಟಲೆ ಇರುತ್ತಿದ್ದವರು, ಈಗ ಅವರ ಇಲ್ಲದಿರುವಿಕೆ ಕಾಡುತ್ತಲೂ ಇರಬಹುದು, ಕಾಡದೆ ಇರಲು ಬಹುದು, ಆದರೆ ತುಮಕೂರು ಮಾತ್ರ ಒಂದು “ಚಲನಶೀಲ” ವ್ಯಕ್ತಿಯನ್ನು ಕಳೆದುಕೊಂಡು ಈ ಹೊತ್ತಿನ ವಿದ್ಯಮಾನಗಳನ್ನು ಬಹಿರಂಗವಾಗಿ ಟೀಕಿಸುವ, ಅದರ ವಿಶ್ಲೇಷಣೆಯನ್ನು ತಮ್ಮ ಗುಂಪಿನ ಮಧ್ಯೆ ವಿರೋಧಿಸುವ ಅಥವಾ ಸಮರ್ಥಿಸುವ ಒಂದು ಗಟ್ಟಿ ಧ್ವನಿ ಇಲ್ಲವಾಗಿದ್ದು ನಿಜಕ್ಕೂ ಕೆಟ್ಟ ಘಟನೆ ನಡೆಯಿತು, ಇದು ಮತ್ಯಾರಿಗೂ ನಡೆವುದು ಬೇಡ.
- ವೆಂಕಟಾಚಲ.ಹೆಚ್.ವಿ.
ಸಂಪಾದಕರು, ಮೈತ್ರಿನ್ಯೂಸ್, ತುಮಕೂರು.