ಕ್ಯಾತ್ಸಂದ್ರ ಡಾ.ಪುನಿತ್ ಬಡಾವಣೆಗೆ ಬಸ್ ಸೇವೆ ಆರಂಭನಗರ ಸಾರಿಗೆ ಸೇವೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ

ತುಮಕೂರು: ನಗರದ ಬಸ್ ನಿಲ್ದಾಣದಿಂದ ಕ್ಯಾತ್ಸಂದ್ರದವರೆಗೆ ಮಾತ್ರ ಇದ್ದ ನಗರ ಸಾರಿಗೆ ಸೇವೆಯು ಅಲ್ಲಿನ ಡಾ.ಪುನಿತ್‍ರಾಜ್‍ಕುಮಾರ್ ಬಡಾವಣೆವರೆಗೂ ವಿಸ್ತರಣೆಯಾಗಿದೆ. ಈ ಬಡಾವಣೆಯಲ್ಲಿ ಆರಂಭವಾದ ನಗರ ಸಾರಿಗೆ ಬಸ್ ಸಂಚಾರ ಸೇವೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಶುಕ್ರವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, ತುಮಕೂರು ನಗರ ವಿಸ್ತಾರವಾಗಿ ಬೆಳೆಯುತ್ತಿದೆ. ಪೂರಕವಾಗಿ ನಾಗರೀಕರಿಗೆ ಸಾರ್ವಜನಿಕ ಸಂಚಾರ ಸೇವೆ ಒದಗಿಸಬೇಕು. ಕ್ಯಾತ್ಸಂದ್ರ ಸುತ್ತಮುತ್ತ ವಸತಿಪ್ರದೇಶ ಬೆಳೆಯುತ್ತಿದೆ. ನಾಗರೀಕರ ಬೇಡಿಕೆ ಹಿನ್ನೆಲೆಯಲ್ಲಿ ಡಾ.ಪುನಿತ್ ರಾಜ್‍ಕುಮಾರ್ ಬಡಾವಣೆವರೆಗೂ ಸಿಟಿ ಬಸ್ ಸೇವೆ ವಿಸ್ತರಿಸಲಾಗಿದೆ ಎಂದರು.

ಈ ಭಾಗದಲ್ಲಿ ಹಲವಾರು ವಿದ್ಯಾರ್ಥಿ ನಿಲಯಗಳಿದ್ದು ವಿದ್ಯಾರ್ಥಿಗಳು ಪ್ರತಿನಿತ್ಯ ಕಾಲೇಜಿಗೆ ಹೋಗಿಬರಲು ಬಸ್ ಅನುಕೂಲ ಇಲ್ಲದೆ ಅನಾನುಕೂಲವಾಗಿತ್ತು. ಜೊತೆಗೆ ಇಲ್ಲಿನ ನಾಗರೀಕರೂ ತುಮಕೂರಿಗೆ ಹೋಗಿ ಬರಲು ಬಸ್ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡು ನಗರ ಸಾರಿಗೆ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.

ಪ್ರತಿ ಅರ್ಧ ಗಂಟೆಗೊಮ್ಮೆ ತುಮಕೂರು ಬಸ್ ನಿಲ್ದಾಣಕ್ಕೆ ಹೋಗಿಬರುವ ಬಸ್ ವ್ಯವಸ್ಥೆ ಮಾಡುವಂತೆ ನಾಗರೀಕರು ಕೋರಿದರು. ತುಮಕೂರು-ದಾಬಸಪೇಟೆ ನಡುವೆ ಸಂಚರಿಸುವ ಗ್ರಾಮೀಣ ಸಾರಿಗೆ ಬಸ್‍ಗಳು ಹೆದ್ದಾರಿಯಲ್ಲಿ ಸಂಚರಿಸುವ ಬದಲು ಟೋಲ್‍ಗೇಟ್‍ವರೆಗೆ ಸರ್ವೀಸ್ ರಸ್ತೆಯಲ್ಲಿ ಹೋಗಿಬರಲು ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಇಲ್ಲಿನ ನಾಗರೀಕರಿಗೆ ಅನುಕೂಲವಾಗುತ್ತದೆ ಎಂದು ಸಾರಿಗೆ ಸಂಸ್ಥೆಗೆ ಮನವಿ ಮಾಡಿದರು.

ಡಾ.ಪುನಿತ್ ರಾಜ್‍ಕುಮಾರ್ ಬಡಾವಣೆಯಿಂದ ನಗರ ಸಾರಿಗೆ ಬಸ್ ಸೇವೆ ಆರಂಭವಾದ ಹಿನ್ನೆಲೆಯಲ್ಲಿ ನಾಗರೀಕರು ಬಸ್‍ಗೆ ಅಲಂಕರಿಸಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.

ಗೃಹ ಸಚಿವರ ವಿಶೇಷಾಧಿಕಾರಿ ಡಾ.ಸಿ.ನಾಗಣ್ಣ, ಸರ್ಕಲ್ ಇನ್ಸ್‍ಪೆಕ್ಟರ್ ರಾಘವೇಂದ್ರ, ಮುಖಂಡರಾದ ಡಾ.ಮೋಹನ್‍ಬಾಬು, ಡಾ.ಪುನಿತ್ ರಾಜ್‍ಕುಮಾರ್ ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರತಾಪ್ ಮದಕರಿ, ಕಾರ್ಯದರ್ಶಿ ಸಂಪತ್‍ಕುಮಾರ್, ಸಮಿತಿಯ ಪ್ರದೀಪ್‍ಕುಮಾರ್, ಆರ್.ಪ್ರಕಾಶ್ ಪಾಳೇಗಾರ್, ಗುರುರಾಜು, ಮೋಹನ್, ಪ್ರಸನ್ನಕುಮಾರ್, ಟಿ.ಮಹೇಶ್, ಸಂಜೀವಪ್ಪ, ಕಾಂತರಾಜು, ದೊಡ್ಡಹನುಮಯ್ಯ, ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *