ತುಮಕೂರು : ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯರಿಗೆ ಟಿಕೇಟ್ ನೀಡಬೇಕೆಂದು ಆಕಾಂಕ್ಷಿಗಳಾದ ವೈ.ಸಿ.ಸಿದ್ದರಾಮಯ್ಯ, ಡಾ.ಪರಮೇಶ್ ಹಾಗೂ ರೇಣುಕಯ್ಯ ಅವರುಗಳು ಪಕ್ಷದ ಹೈಕಮಾಂಡನ್ನು ಒತ್ತಾಯಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಲಕ್ಕಪ್ಪ ಅವರ ನಂತರ ಸುಮಾರು 37 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಾಸಕರಿಲ್ಲ. ಇದಕ್ಕೆ ಕಾರಣ ಪಕ್ಷ ಸ್ಥಳೀಯರಿಗೆ ಸ್ಪರ್ಧೆಗೆ ಅವಕಾಶ ನೀಡದೆ, ಹೊರಗಿನವರನ್ನು ತರುವುದರಿಂದ ಕಾರ್ಯಕರ್ತರು ಹಾಗೂ ಮತದಾರರು ಕಾಂಗ್ರೆಸ್ ಪಕ್ಷದಿಂದ ದೂರ ಸರಿದಿದ್ದಾರೆ. 2008ರಲ್ಲಿ ಹೈಕಮಾಂಡ್ ರೇಣುಕಾಪ್ರಸಾದ್ ಎಂಬ ಹೊರಗಿನ ವ್ಯಕ್ತಿಯನ್ನು ಕಣಕ್ಕೆ ಇಳಿಸಿ,ಕೇವಲ ಮೂರು ಸಾವಿರ ಮತಗಳಷ್ಟೇ ಪಡೆಯಲು ಸಾಧ್ಯವಾಯಿತು.ಹಾಗಾಗಿ ಸ್ಥಳೀಯರಿಗೆ,ಹತ್ತಾರು ವರ್ಷಗಳಿಂದ ಪಕ್ಷ ಕಟ್ಟಿದವರಿಗೆ ಟಿಕೇಟ್ ನೀಡುವುದರಿಂದ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ,ಎನ್.ಎಸ್.ಯು.ಐ ಪದಾಧಿಕಾರಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಾನು ಕಳೆದ 33 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ,ಗ್ರಾಮಪಂಚಾಯಿತಿ ಸದಸ್ಯ,ಅಧ್ಯಕ್ಷ,ತಾಲೂಕು ಪಂಚಾಯಿತಿ ಸದಸ್ಯ,ಎಪಿಎಂಸಿ ಸದಸ್ಯ, ಉಪಾಧ್ಯಕ್ಷ,ಅಧ್ಯಕ್ಷನಾಗಿ,ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡುತ್ತಾ,ಕೆಪಿಸಿಸಿ ಸದಸ್ಯನಾಗಿದ್ದೇನೆ.ಕಳೆದ 2008ರಿಂದಲೂ ಇದುವರೆಗೂ ನಡೆದ 4 ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದರೂ ಟಿಕೇಟ್ ನೀಡಿಲ್ಲ.ಆದಾಗ್ಯೂ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ದೊರೆಯುವಂತೆ ಮಾಡಿದ್ದೇವೆ.2008ರಲ್ಲಿ ಕೇವಲ ಮೂರು ಸಾವಿರ ಮತ ಪಡೆದಿದ್ದ ಕಾಂಗ್ರೆಸ್ 2013ರಲ್ಲಿ 10 ಸಾವಿರ,2018ರಲ್ಲಿ 49 ಸಾವಿರ ಮತಗಳನ್ನು ಪಡೆಯಿತು.ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು,ನಾಲ್ಕು ಜನ ಸ್ಥಳೀಯ ಆಕಾಂಕ್ಷಿಗಳಾದ ವೈ.ಸಿ.ಸಿದ್ದರಾಮಯ್ಯ,ಡಾ.ಪರಮೇಶ್,ರೇಣುಕಯ್ಯ ಹಾಗೂ ಮಾಜಿ ಶಾಸಕ ಲಕ್ಕಪ್ಪ ಅವರಲ್ಲಿ ಯಾರಿಗೆ ಟಿಕೇಟ್ ನೀಡಿದರೂ ಅವರನ್ನು ಗೆಲ್ಲಿಸಿಕೊಂಡು ಬರಲು ನಾವು ಸಿದ್ದರಿರುವುದಾಗಿ ತಿಳಿಸಿದರು.
ವೈ.ಸಿ.ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿದ ಇತರೆ ಆಕಾಂಕ್ಷಿಗಳಾದ ಡಾ.ಪರಮೇಶ್,ರೇಣುಕಯ್ಯ ಅವರುಗಳು,ನಮ್ಮನ್ನು ಹೊರತು ಪಡಿಸಿ,ಹೈಕಮಾಂಡ್ ಕ್ಷೇತ್ರದ ಜನರಿಗೆ ಪರಿಚಯವೇ ಇಲ್ಲದ ಹೊರಗಿನ ಆಕಾಂಕ್ಷಿಗಳಾದ ಧನಂಜಯ,ಜಗದೀಶ್,ವಿನಿತಾ,ವಿಜಯರಾಘವೇಂದ್ರ ಮತ್ತು ನಟರಾಜು ಎಂಬುವವರಿಗೆ ಟಿಕೇಟ್ ನೀಡಿದರೆ ಖಂಡಿತ ವಾಗಿಯೂ ಕಾರ್ಯಕರ್ತರು ಗೋ ಬ್ಯಾಕ್ ಚಳುವಳಿ ಹಮ್ಮಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.ಸ್ಥಳೀಯರನ್ನು ದಿಕ್ಕರಿಸಿ ಹೊರಗಿನವರಿಗೆ ಟಿಕೇಟ್ ನೀಡಿದರೆ ಪಕ್ಷದ ಸೋಲು ಕಟ್ಟಿಟ್ಟ ಬುತ್ತಿ. ಇದನ್ನು ಪಕ್ಷದ ಹೈಕಮಾಂಡ್ ಅರ್ಥ ಮಾಡಿಕೊಳ್ಳ ಬೇಕು ಎಂದರು.
ದೇಶದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ.ದಲಿತರು, ಹಿಂದುಳಿದ ವರ್ಗದವರು,ಅಲ್ಪಸಂಖ್ಯಾತರು ಹಾಗೆಯೇ ಮುಂದುವರೆದ ಜನಾಂಗಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿದೆ.ಸ್ಥಳೀಯ ಆಕಾಂಕ್ಷಿಗಳಲ್ಲಿ ವೈ.ಸಿ.ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ,ಡಾ.ಪರಮೇಶ್ ಒಕ್ಕಲಿಗ ಜನಾಂಗಕ್ಕೆ,ರೇಣುಕಯ್ಯ ಪ್ರವರ್ಗ 1ರ ಉಪ್ಪಾರ ಜಾತಿಗೆ ಸೇರಿದ್ದಾರೆ.ಮಾಜಿ ಶಾಸಕ ಲಕ್ಕಪ್ಪ ಕುರುಬ ಸಮುದಾಯಕ್ಕೆ ಸೇರಿದ್ದಾರೆ.ನಮ್ಮ ನಾಲ್ಕು ಜನರಲ್ಲಿ ಯಾರಿಗೆ ಟಿಕೇಟ್ ನೀಡಿದರೂ ಉಳಿದವರು ಒಗ್ಗೂಡಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ.ಇದು ಆಕಾಂಕ್ಷಿಗಳ ಆಶಯವಷ್ಟೇ ಅಲ್ಲ. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮನದಿಗಿಂತವೂ ಆಗಿದೆ.ಇದನ್ನು ಹೈಕಮಾಂಡ್ ಅರ್ಥ ಮಾಡಿಕೊಂಡು ಸ್ಥಳೀಯರಿಗೆ ಟಿಕೇಟ್ ನೀಡಿದರೆ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ. ಹಾಗೆಯೇ ರಾಜ್ಯದಲ್ಲಿಯೂ ಪಕ್ಷ ಬಹುಮತ ಪಡೆಯಲು ಬೆಂಬಲವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರಸನ್ನಕುಮಾರ್,ಹುಳಿಯಾರು ಪಟ್ಟಣಪಂಚಾಯಿತಿ ಸದಸ್ಯರಾದ ಸಿದ್ದಕ್ಕಿ, ಜುಬೇದ್,ಮಂಜುನಾಥ್, ಸಿದ್ದಲಿಂಗಮೂರ್ತಿ, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.