ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ಕರೆ

ತುಮಕೂರು: ಬಡವರು, ಅಶಕ್ತರ ಉದ್ಯೋಗ ಚಟುವಟಿಕೆಗಳಿಗೆ ಸಹಕಾರ ಸಂಘಗಳು ದಾರಿದೀಪವಾಗಿದ್ದು, ಈ ಸಂಘಗಳನ್ನು ಸದೃಢಗೊಳಿಸಬೇಕೆಂದು ಚಿಕ್ಕೇಗೌಡ ಕೊಟ್ನಳ್ಳಿ ಕರೆ ನೀಡಿದರು.

ಸಿದ್ಧಗಂಗಾ ಬಡಾವಣೆಯ ಶ್ರೀಕೃಷ್ಣ ಪತ್ತಿನ ಸಹಕಾರ ಸಂಘದ 26ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 25 ವರ್ಷಗಳ ಹಿಂದೆ ಸಣ್ಣದಾಗಿ ಆರಂಭವಾದ ಸೊಸೈಟಿ ಇಂದು ಸಾವಿರಾರು ಮಂದಿಯನ್ನು ಸದಸ್ಯರನ್ನಾಗಿಸಿಕೊಂಡಿದೆ. ಆರಂಭದಲ್ಲಿ ಸಾಲಕ್ಕೆ ಮಿತಿ ಹೇರಲಾಗಿತ್ತು. ಕಳೆದ ವರ್ಷದಿಂದ ಈ ಮಿತಿಯನ್ನು ಸಡಿಲಿಸಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲಾಗುತ್ತಿದೆ. ಇದರಿಂದ ಜನರಿಗೂ ಉಪಯೋಗ, ಸಂಘಕ್ಕೂ ಆದಾಯ ಬರುತ್ತದೆ ಎಂದರು.

ಸಹಕಾರ ಸಂಘಗಳು ಜನರ ಸಹಭಾಗಿತ್ವದ ನಡುವೆ ನಿಂತಿರುತ್ತದೆ. ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿಸಬೇಕು. ಅಲೆದಾಡಿಸಿಕೊಳ್ಳಬಾರದು. ಯಾವ ಸಂಘಗಳಲ್ಲಿ ಸಾಲ ಪಡೆದವರು ನಿಯಮಿತವಾಗಿ ವಾಪಸ್ ಮಾಡುತ್ತಾರೋ ಅಂತಹ ಸಂಘಗಳು ಸುಸ್ಥಿರವಾಗಿರುತ್ತವೆ. ನಮ್ಮ ಸಂಘದಲ್ಲಿ ಹಿರಿಯರಿಗೆ ಮತ್ತು ವಿಧವೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.

ಪ್ರತಿವರ್ಷ ಪ್ರತಿಭಾ ಪುರಸ್ಕಾರದ ಜೊತೆಗೆ ಸಾಮಾಜಿಕವಾಗಿ ಶ್ರಮಿಸಿರುವ ಹಾಗೂ ಸಂಘದ ಅಭಿವೃದ್ಧಿಗೆ ಪ್ರೋತ್ಸಾಹಿಸಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುತ್ತಾ ಬರಲಾಗಿದೆ. ಅದರಂತೆ ಈ ವರ್ಷವೂ ಅದನ್ನು ಮುಂದರೆಸಲಾಗಿದೆ ಎಂದರು.

ಸಮಾರಂಭದಲ್ಲಿ ಉಪಾಧ್ಯಕ್ಷ ಎಂ.ಎ.ಬೊಮ್ಮಯ್ಯ, ಬಿ.ವೀರಣ್ಣಗೌಡ, ಬಿ.ಈರಯ್ಯ, ಚಿಕ್ಕಪ್ಪಯ್ಯ, ಕೃಷ್ಣಕುಮಾರ್, ಹೆಚ್.ವಾಸುದೇವ್, ಎನ್.ಅಕ್ಕಮ್ಮ, ಟಿ.ಕೃಷ್ಣಪ್ಪ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಡಿ.ಈರಣ್ಣ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ಸಾ.ಚಿ.ರಾಜಕುಮಾರ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *