ತುಮಕೂರು: ಕ್ಯಾನ್ಸರ್ ಎಂಬುದು ಮಾರಕ ರೋಗವಲ್ಲ. ಮಾರ್ಗದರ್ಶನ ಮತ್ತು ಸೂಕ್ತ ಚಿಕಿತ್ಸೆ ಇದ್ದರೆ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು. ಗ್ರಾಮೀಣ ಭಾಗದ ಜನರಲ್ಲಿ ಕ್ಯಾನ್ಸರ್ ಎಂದರೆ ವಾಸಿ ಮಾಡಲು ಸಾಧ್ಯವಿಲ್ಲ ಎಂಬ ಭಯವಿದೆ. ಆ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಿದ್ದಾರ್ಥ ಅಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಆಯೋಜನ ಮಾಡಲಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಬಿ ಲಿಂಗೇಗೌಡ ಅವರು ಹೇಳಿದರು.
ನಗರದ ಅಗಳಕೊಟೆಯಲ್ಲಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಇಂದಿನಿಂದ (ಮೇ 2ರಿಂದ) 31 ರ ತನಕ ಹಮ್ಮಿಕೊಳ್ಳಲಾಗಿರುವ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಕ್ಯಾನ್ಸರ್ ಎಂಬುದು ಮಾರಕ ರೋಗವಲ್ಲ. ಸೂಕ್ತ ಮಾರ್ಗದರ್ಶನವಿದ್ದರೆ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು. ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕ್ಯಾನ್ಸರ್ ಎಂದರೆ ಭಯ ಪದಬೇಕಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿದ್ದು ನೂರರಲ್ಲಿ 90 ಶೇಕಡ ಗುಣಪಡಿಸಬಹುದು. ಅತ್ಯಾಧುನಿಕ ಚಿಕಿತ್ಸಾ ಮಾದರಿಯಿಂದ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬಹುದು ಎಂದು ಡಾ. ಕೆ.ಬಿ. ಲಿಂಗೇಗೌಡ ನುಡಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಜಿ.ಎನ್.ಪ್ರಭಾಕರ್ ಅವರು ಮಾತನಾಡಿ, ಕಾಲೇಜಿನಲ್ಲಿ ನೂತನವಾಗಿ ಕಾರ್ಯಾರಂಭವಾಗಿರುವ ಸೂಪರ್ ಸ್ಪೆಷಾಲಿಟಿಯ ಕ್ಯಾನ್ಸರ್ ವಿಭಾಗದಲ್ಲಿ ನುರಿತ ವೈದ್ಯರುಗಳ ತಂಡ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ರೀತಿಯ ಕ್ಯಾನ್ಸರ್‍ಗೆ ಚಿಕಿತ್ಸೆ ದೊರೆಯುತ್ತದೆ. ಪಡಿತರ ಚೀಟಿ ಹೊಂದಿರುವವರಿಗೆ 5 ಲಕ್ಷದ ವರೆಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಆಯುಷ್ಮಾನ್ ಭಾರತ್ ನಂತಹ ಸೌಲಭ್ಯಗಳೂ ಇದ್ದು, ಉಚಿತ ಕ್ಯಾನ್ಸರ್ ತಪಾಸಣ ಶಿಬಿರದ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಸ್ತ್ರೀಯರಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ರೋಗಗಳನ್ನು ಪತ್ತೆ ಹಚ್ಚಲು ವಿಶೇಷ ಸ್ತ್ರೀ ರೋಗ ವಿಭಾಗವಿದ್ದು ನೂತನ ವೈದ್ಯರುಗಳ ತಂಡವಿದೆ. ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಹಾಗೂ ಸುತ್ತಮುತ್ತಲಿನ ಜನರು ಕಾರ್ಯಕ್ರಮದ ಉಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ವಿಭಾಗದ ತಜ್ಞ ಡಾ. ಶರತ್ ಕುಮಾರ್, ಸರ್ಜಿಕಲ್ ಕ್ಯಾನ್ಸರ್ ತಜ್ಞೆ ಡಾ.ದಿವ್ಯಾ, ಸ್ತ್ರೀ ರೋಗ ತಜ್ಞೆ ಡಾ. ಸುವರ್ಣ ಗುಳೆದ್ ಇತರರು ಉಪಸ್ಥಿತರಿದ್ದರು.