ತುಮಕೂರು- ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಇಂದಿನಿಂದ ಆರಂಭವಾದ ಸಾಮಾನ್ಯ ಪ್ರವೇಶ (ಸಿಇಟಿ) ಪರೀಕ್ಷೆಗೆ ಬಂದ ಅಭ್ಯರ್ಥಿಗಳ ಕಿವಿಯೋಲೆಯನ್ನು ಬಿಚ್ಚಿಸಿ ಪರೀಕ್ಷೆಗೆ ಕಳಿಸಲಾಯಿತು.
ತುಮಕೂರು ನಗರ 18, ತಿಪಟೂರಿನ 4 ಹಾಗೂ ಸಿರಾ ನಗರದ 3 ಪರೀಕ್ಷಾ ಕೇಂದ್ರ ಸೇರಿ ಒಟ್ಟು 25 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆದಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ 11750 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದರು.

ನಗರದ ಸಿದ್ದಗಂಗಾ ಮಹಿಳಾ ಪ.ಪೂ. ಕಾಲೇಜು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಆಗಮಿಸಿ, ತಮ್ಮ ಪ್ರವೇಶ ಪತ್ರಗಳಲ್ಲಿದ್ದ ಕ್ಯೂ ಆರ್ ಕೋಡ್ ಮೂಲಕ ತಮ್ಮ ಮುಖ ಚಹರೆಯನ್ನು ಪರಿಶೀಲಿಸುವ ಕಾರ್ಯದಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದವು.
ಇಂದು ಮತ್ತ ನಾಳೆ ಎರಡು ದಿನಗಳ ಕಾಲ ಸಿಇಟಿ ಪರೀಕ್ಷೆ ನಡೆಯುತ್ತಿದ್ದು, ಇಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 12.30 ರಿಂದ 3.50ರ ವರೆಗೆ ರಾಸಾಯನ ಶಾಸ್ತ್ರ ಪರೀಕ್ಷೆಗಳು ನಡೆದವು.
ಏಪ್ರಿಲ್ 17ರಂದು 10.30 ರಿಂದ 11.50ರ ವರೆಗೆ ಗಣಿತ, ಮಧ್ಯಾಹ್ನ 12.30 ರಿಂದ 3.50 ರ ವರೆಗೆ ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಪರೀಕ್ಷೆಯಲ್ಲಿ ನಕಲು ತಡೆಯುವ ಸಲುವಾಗಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದ್ದು, ತುಂಬು ತೋಳಿನ ಶರ್ಟ್, ಜೇಬುಗಳಿರುವ ಪ್ಯಾಂಟ್, ಶೂ, ಮೊಬೈಲ್, ಪೆನ್‍ಡ್ರೈವ್ ಇತ್ಯಾದಿಗಳನ್ನು ನಿಷೇಧಿಸಲಾಗಿತ್ತು, ಇದರ ಜೊತೆಗೆ ಹೆಣ್ಣು ಮಕ್ಕಳು ಧರಿಸಿದ್ದ ಕಿವಿಯೋಲೆ, ಸರಗಳನ್ನು ಸಹ ಬಿಚ್ಚಿಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಯಿತು.
ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೆÇಲೀಸ್ ವ್ಯವಸ್ಥೆ ಸಹ ಮಾಡಲಾಗಿದ್ದು, ಸಿಸಿ ಕ್ಯಾಮೆರಾಗಳ ಕಣ್ಗಾವಲು ಇರುವುದು ಕಂಡು ಬಂದಿತು.