ಚಿಕ್ಕನಾಯಕನಹಳ್ಳಿ : ತುಮಕೂರಿನಲ್ಲಿ ನನಗೆ ಅನ್ಯಾಯ ಆಗಿದೆ. ಲಿಂಗಾಯತ ಟಿಕೆಟ್ ಕೊಡಿ ಅಂತಾ ನಾನು ಕೇಳಿಲ್ಲ. ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ನೊಣಂಬರಿಗೆ ಕೊಡಿ ಎಂದು ಕೇಳಿದ್ದೆ, ಕಾಂಗ್ರೆಸ್ ಪಕ್ಷದವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸಲಾರೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಣಂಬರಿಗೆ ತಪ್ಪಿಸಬೇಡಿ ಅಂತಾ ಕೇಳಿದ್ದೇವೆ. ಐದಾರು ಜಿಲ್ಲೆಯಲ್ಲಿ ನಮ್ಮ ಸಮುದಾಯದವರು ವೋಟ್ ಹಾಕಬೇಕಿದೆ. ನಂಗೆ ಎಂಪಿ ನಿಲ್ಲು ಅಂದೋರು ಯಡಿಯೂರಪ್ಪನವರೇ. ಎರಡು ಮೂರು ಸಾರಿ ನಾನು ಬೇಡ ಅಂದಾಗ ನಿಲ್ಲು ಎಂದವರು ಯಡಿಯೂರಪ್ಪ. ಇದು ಬಹಿರಂಗ ಆಗಬೇಕು ಎಂದು ಮಾಧುಸ್ವಾಮಿ ಹೇಳಿದರು.
ಲೋಕಸಭೆ ಚುನಾವಣೆ ಟಿಕೆಟ್ ತಪ್ಪಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಜೆ.ಸಿ. ಮಾಧುಸ್ವಾಮಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದರು, ಯಾರೋ ನೋಡಿ ಬಂದ ಹೆಣ್ಣನ್ನು ನಾನು ಮದುವೆ ಆಗಲ್ಲ ಎಂದು ಮಾಧುಸ್ವಾಮಿ ಮಾರ್ಮಿಕವಾಗಿ ಹೇಳಿದರು.
ನಾನು ಎರಡು ಮೂರು ವಿಷಯವನ್ನು ನಿಮ್ಮ ಬಳಿ ಹೇಳಿಕೊಳ್ಳುತ್ತಿದ್ದೇನೆ. ನಾನು ಕಾಂಗ್ರೆಸ್ ಸೇರಲಿದ್ದೇನೆ ಎಂದು ಎಲ್ಲೋ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಕಾಂಗ್ರೆಸ್ ನ ಬಿ ಫಾರಂ ಮಾಧುಸ್ವಾಮಿಗೆ ಸಿಗುತ್ತೆ ಎಂದು ಉಲ್ಲೇಖಿಸಿದ್ದಾರೆ. ಬಿ ಫಾರಂ ಬದಲಾಯಿಸಿ ಕಾಂಗ್ರೆಸ್ ಪಕ್ಷದವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸಲಾರೆ. ಬಿಜೆಪಿಯವರು ಕರೆದರೂ ಚುನಾವಣೆಗೆ ನಿಲ್ಲುವುದಿಲ್ಲ ಎಂದರು.
ತುಮಕೂರಿನಲ್ಲಿ ಬೆಳೆದವನಾಗಿ ಹೊರಗಿನವರಿಗೆ ಟಿಕೆಟ್ ಕೊಡುವುದಕ್ಕೆ ನನ್ನ ಒಪ್ಪಿಗೆ ಇಲ್ಲ. ನನಗೆ ಕೊಡಬೇಕು ಅಂತಲ್ಲ, ಜಿಲ್ಲೆಯ ಯಾರಿಗೆ ಕೊಟ್ಟರೂ ತೊಂದರೆ ಇರಲಿಲ್ಲ. ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮೇಲೆ ನನಗೆ ಯಾವುದೇ ಬೇಜಾರಿಲ್ಲ. ಅವರು ರಾಜ್ಯಸಭೆಗೆ ಹೋಗುತ್ತಾರೆ ಎಂದಾಗ ನಾನು ಸಂತೋಷಪಟ್ಟಿದ್ದೆ. ಆದರೆ, ಅವರು ಜಾತಿ ಇದೆ ಎಂಬ ಕಾರಣಕ್ಕೆ ಎಲ್ಲಾ ಕಡೆ ಹೋಗುತ್ತಿದ್ದರೆ ಸ್ಥಳೀಯರ ಸ್ಥಿತಿ ಏನು? ಎಂದು ಪ್ರಶ್ನಿಸಿದರು.