ತುಮಕೂರು- ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಸಚಿವರು ಸೇರಿದಂತೆ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಲ್ಲಿನ ಕ್ಯಾತ್ಸಂದ್ರ ಪೆÇಲೀಸ್ ಠಾಣೆ ಸರಹದ್ದಿನ ನಂದಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ತಡರಾತ್ರಿ ನಡೆದಿದೆ.
ರಾತ್ರಿ ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗದಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ತುಮಕೂರು ಜಿಲ್ಲೆಯ ಗಡಿಭಾಗವಾದ ನಂದಿಹಳ್ಳಿ ಬಳಿ ಗುಜರಾತ್‍ನಿಂದ ಬೆಂಗಳೂರಿಗೆ ಟೈಲ್ಸ್‍ಗಳನ್ನು ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಕಾರು ಅಪ್ಪಳಿಸಿದೆ.
ಕಾರು ಲಾರಿಗೆ ಅಪ್ಪಳಿಸಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಸಚಿವ ಮಧು ಬಂಗಾರಪ್ಪ ಸೇರಿದಂತೆ ಮೂವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಚಿವರ ಕಾರು ಅಪಘಾತಕ್ಕೀಡಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕ್ಯಾತ್ಸಂದ್ರ ಠಾಣೆ ಪೆÇಲೀಸರು ಸ್ಥಳಕ್ಕೆ ದೌಡಾಯಿಸಿ, ಸಚಿವರು ಬೆಂಗಳೂರಿಗೆ ತೆರಳಲು ಬದಲಿ ಕಾರಿನ ವ್ಯವಸ್ಥೆ ಮಾಡಿಕೊಟ್ಟರು. ನಂತರ ಸಚಿವರು ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತಮ್ಮ ಪ್ರಯಾಣವನ್ನು ಬೆಳೆಸಿದರು.
ಈ ಸಂಬಂಧ ಕ್ಯಾತ್ಸಂದ್ರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.