ತುಮಕೂರು:ರಾಜ್ಯ ಸರಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ನ್ಯಾ.ಕಾಂತರಾಜು ಅವರ ಸಮಿತಿಯಿಂದ ನಡೆಸಿರುವ ಸಾಮಾಜಿಕ ಮತ್ತು ಅರ್ಥಿಕ ಸಮೀಕ್ಷೆಯಲ್ಲಿ ಉಪ್ಪಾರ ಜನಾಂಗದ ಸಂಖ್ಯೆಯನ್ನು ಕಡಿಮೆ ನಮೂದಿಸಲಾಗಿದೆ.ಹಾಗಾಗಿ ಮರು ಸಮೀಕ್ಷೆ ನಡೆಸಿ,ಜನಾಂಗಕ್ಕೆ ನ್ಯಾಯ ಒದಗಿಸುವಂತೆ ಅಖಿಲ ಉಪ್ಪಾರ(ಸಗರವಂಶ) ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಸಿ.ಎಸ್. ಮಂಜುನಾಥ್ ಸರಕಾರವನ್ನು ಒತ್ತಾಯಿಸಿದರು.
ಭಗೀರಥ ಜಯಂತಿ ಅಂಗವಾಗಿ ಕರೆದಿದ್ದ ಉಪ್ಪಾರ ಸಂಘದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸರಕಾರದ ಜಾತಿಗಣತಿಯ ಸೋರಿಕೆಯಾದ ಮಾಹಿತಿಯಂತೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಮಾಹಿತಿಯಂತೆ ರಾಜ್ಯದಲ್ಲಿ ಉಪ್ಪಾರ ಜನಾಂಗದ ಜನಸಂಖ್ಯೆ 7.50 ಲಕ್ಷ ಎಂದು ತೋರಿಸಲಾಗಿದೆ.ರಾಜ್ಯದಲ್ಲಿ ಉಪ್ಪಾರ ಸಮುದಾಯ ಸುಮಾರು 35 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.ತುಮಕೂರು ಜಿಲ್ಲೆಯಲ್ಲಿಯೇ ಸುಮಾರು 1.50 ಲಕ್ಷ ಇದ್ದೇವೆ.ಹಾಗಾಗಿ ಮರು ಸಮೀಕ್ಷೆ ನಡೆಸಿ, ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಒತ್ತಾಯವಾಗಿದೆ ಎಂದರು.
ಇತ್ತೀಚಗೆ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಉಪ್ಪಾರ ಸಮಾಜದವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ನಮ್ಮ ಸಮುದಾಯದ ಮುಖಂಡರಾದ ಮಾಜಿ ಮಂತ್ರಿ ಹಾಗೂ ಹಾಲಿ ಶಾಸಕರಾದ ಪುಟ್ಟರಂಗಶೆಟ್ಟಿ ಮತ್ತು ನಮ್ಮ ಸಮುದಾಯದ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಂಪಿ ವಿವಿಯ ಹಿರಿಯ ಪ್ರಾಧ್ಯಾಪಕರಾದ ಕೆ.ಬಿ.ಮೈತ್ರಿ ಅವರ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಸುಮಾರು 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 42ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮುದಾಯ 12 ರಿಂದ 15 ಸಾವಿರ ಮತದಾರರನ್ನು ಹೊಂದಿದ್ದು, ನಿರ್ಣಾಯಕ ಪಾತ್ರ ವಹಿಸಲಿದೆ.ಕುಲಶಾಸ್ತ್ರಿಯ ಅಧ್ಯಯನ ನಡೆಸಿದ ಸಂದರ್ಭದಲ್ಲಿ ನಮ್ಮ ಜನಾಂಗ ರಾಜ್ಯದಲ್ಲಿ ಸುಮಾರು 35 ಲಕ್ಷ ದಷ್ಟಿದೆ.ಆದರೆ ಜಾತಿ ಜನಗಣಿತಿಯಲ್ಲಿ ಕೇವಲ 7.50 ಎಂದು ತೋರಿಸಲಾಗಿದೆ. ಸರಕಾರದ ಈಓ ನಡೆಯಿಂದ ಜನಾಂಗಕ್ಕೆ ದೊರೆಯುವ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಸೌಲಬ್ಯಗಳಲ್ಲಿ ಸಾಕಷ್ಟು ಕೊರತೆ ಕಾಣಲಿದೆ. ಹಾಗಾಗಿ ಇದನ್ನು ಮರು ಸಮೀಕ್ಷೆ ನಡೆಸಿ, ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಹಾಗೆಯೇ ರಾಜ್ಯ ಸರಕಾರದ ಬಳಿ ಇರುವ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಅಂಗೀಕರಿಸಿ, ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡ ಜಾತಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕೆಂದು ಮನವಿ ಮಾಡುವುದಾಗಿ ಸಿ.ಎಸ್. ಮಂಜುನಾಥ್ ತಿಳಿಸಿದರು.
ಪ್ರವರ್ಗ 1 ಮೀಸಲಾತಿ ಹೋರಾಟ ಸಮಿತಿಯ ತುಮಕೂರು ಜಿಲ್ಲಾಧ್ಯಕ್ಷ ರೇಣುಕಯ್ಯ ಮಾತನಾಡಿ,ಸ್ವಾತಂತ್ರ ಪೂರ್ವದಲ್ಲಿ ಉಪ್ಪು ತಯಾರು ಮಾಡಿ, ವ್ಯಾಪಾರ ಮಾಡುತ್ತಿದ್ದ ಸಮುದಾಯ ನಮ್ಮದು. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ನಂತರ ಬೇರೆ ಬೇರೆ ಕಸುಬಗಳನು ಮಾಡಿಕೊಂಡು ಬದುಕುತಿದ್ದೇವೆ.ಶೈಕ್ಷಣಿಕವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಹಿಂದೆ ಉಳಿದಿದೆ.ಒಂದು ವೇಳೆ ಸರಕಾರದ ಈಗಿನ ಅಂಕಿ ಅಂಶದಂತೆ ಉಪ್ಪಾರ ಸಮುದಾಯ 7.50ಲಕ್ಷ ಜನಸಂಖ್ಯೆಗೆ ಮೀಸಲಾತಿ ನಿಗಧಿಯಾದರೆ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಲಿದೆ. ಹಾಗಾಗಿ ಸರಕಾರ ಮರು ಸಮೀಕ್ಷೆ ನಡೆಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಉಪ್ಪಾರ ಸಮುದಾಯದ ಮುಖಂಡರಾದ ಲೋಕೇಶ್, ತಿಪ್ಪೇಸ್ವಾಮಿ, ದೊಡ್ಡ ಹನುಮೇಗೌಡ, ಮೂಡ್ಲಗಿರಿಯ್ಪ, ನಾಗರಾಜು, ಚನ್ನಿಗರಾಯಪ್ಪ, ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.