ಭಾರತ ಅಭಿವೃದ್ಧಿಯಲ್ಲಿ ಹಿಂದುಳಿಯಲು ಜಾತಿ ಪದ್ಧತಿಯೇ ಕಾರಣ- ಡಾ.ಯತೀಂದ್ರ ಸಿದ್ದರಾಮಯ್ಯ

ತುಮಕೂರು: ಭಾರತ ಅಭಿವೃದ್ಧಿಯಲ್ಲಿ ಹಿಂದುಳಿಯಲು ಜಾತಿ ಪದ್ಧತಿಯೇ ಕಾರಣ. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಮಗೆಲ್ಲ ಮೀಸಲಾತಿ ಎಂಬುದು ದೊರೆತಿದೆ. ಆದ್ದರಿಂದಲೇ ಹಿಂದುಳಿದವರು ಮತ್ತು ದಲಿತರು ಮೇಲೆ ಬರಲು ಸಾಧ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಸಮಾಜಿಕ ಶೈಕ್ಷಣಿಕ ಸಮೀಕ್ಷೆ-2025 : ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ? ವಿಚಾರಗೋಷ್ಠಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹುಟ್ಟಿನಿಂದಲೇ ಯೋಗ್ಯತೆ ಅಳೆಯುವ ಮತ್ತು ತಾರತಮ್ಯ ಮಾಡುವ ವ್ಯವಸ್ಥೆ ನಮ್ಮಲ್ಲಿದೆ. ಜಾತಿ ಹೋಗಲಾಡಿಸಲು ಮೀಸಲಾತಿ ಕೂಡ ಒಂದು ಕ್ರಮ. ಶೋಷಿತರಿಗೆ, ಹಿಂದುಳಿದವರಿಗೆ ಬಲ ತುಂಬಬೇಕು ಎಂದರೆ ಸಮೀಕ್ಷೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಗತ್ಯ. ಎಲ್ಲ ಸಮುದಾಯಗಳನ್ನು ಒಳಗೊಂಡ ಸಮೀಕ್ಷೆ ಇದಾಗಿದೆ. ಈ ಸಮೀಕ್ಷೆ ಕುರಿತಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಸಮೀಕ್ಷೆಯಲ್ಲಿ ಏನೇ ದೋಷ ಕಂಡು ಬಂದರೂ ಅದನ್ನು ಸರಿ‌ಮಾಡಿಕೊಂಡು ಮುಂದೆ ಹೋಗುವ ಕೆಲಸ ಮಾಡಲಾಗುತ್ತಿದೆ‌. ಇದನ್ನು ಹಿಂದುಳಿದ ವರ್ಗಗಳು ಅರ್ಥ ಮಾಡಿಕೊಳ್ಳಬೇಕು. ಬುದ್ಧ ಬಸವ, ಅಂಬೇಡ್ಕರ್ ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವವರು ಎಲ್ಲರೂ ಈ ಸಮೀಕ್ಷೆಯನ್ನು ಬೆಂಬಲಿಸಬೇಕು ಎಂದರು.

ನಮ್ಮವರನ್ನು ನಾವು ಗೌರವಿಸುವ ಕೆಲಸವನ್ನು ಮಾಡಬೇಕು‌. ಬಲಾಢ್ಯರು ಅವಿದ್ಯಾವಂತರಾಗಿದ್ದರೂ ಅವರನ್ನು ಗೌರವದಿಂದ ಕಾಣುತ್ತೇವೆ. ವಿದ್ಯಾವಂತ ಬಂದರೂ ಅವ ಬಲಾಢ್ಯ ಅಲ್ಲ ಎನ್ನುವ ಕಾರಣಕ್ಕೆ ಗೌರವ ಕೊಡುವುದಿಲ್ಲ. ಇದು ಬದಲಾಗಬೇಕು ಎಂದರು.

ಸಿದ್ದರಾಮಯ್ಯನವರು ಸಮೀಕ್ಷೆ ಎಂಬ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಎಲ್ಲರ ಸರ್ವತೋಮುಖ ಅಭಿವೃದ್ಧಿ ಬಯಸುವಂತಹ ಜನರ ಕೈಲಿ ಅಧಿಕಾರ ಇರಬೇಕು. ಅವರೊಂದಿಗೆ ಗಟ್ಟಿಯಾಗಿ ನಾವು ನಿಲ್ಲಲಿದ್ದೇವೆ ಎಂದು ಹೇಳಿದರು.

ಕರಾವಳಿಯಲ್ಲಿ ಭೂ ಸುಧಾರಣೆ ಫಲಾನುಭವಿಗಳು ಅವರೆಲ್ಲರೂ ಇಂದು ಹಿಂದುತ್ವ ಎಂದು ಕೇಸರಿ. ಗಾಂಧಿ ಹಿಂದುತ್ವವಾದಿಗಳು.. ನಾವು ಗೂಡ್ಸೆ ಹಿಂದುತ್ವಾದಿಗಳಲ್ಲ. ನಮ್ಮ ದೇಶಕ್ಕೆ ಅದು ಅಗತ್ಯವಿಲ್ಲ.

ಅಹಿಂದ ಹುಟ್ಟು ಹಾಕಿದ್ದೇ ಸಿದ್ದರಾಮಯ್ಯ ಮತ್ತು ಜಾಲಪ್ಪನವರು. ಅಹಿಂದಕ್ಕೆ ಹೆಚ್ಚು ಬಲ ತುಂಬಿದವರೇ ಸಿದ್ದರಾಮಯ್ಯ ನವರು. ಸಮಾಜದಲ್ಲಿ ದುರ್ಬಲರನ್ನೇ ಗುರಿಯಾಗಿಸಿ ಶೋಷಣೆ ಮಾಡಲಾಗುತ್ತದೆ. ಸಮಾನತೆ ಬರುವವರೆಗೂ ಮೀಸಲಾತಿ ಮುಂದುವರೆಯಬೇಕು ಎಂದರು.

ಅಹಿಂದ ಸಮುದಾಯದ ಜನ ಪ್ರತಿನಿಧಿಗಳು ಹೆಚ್ಚು ಹೆಚ್ಚು ಬರಬೇಕು. ನಾವು ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿಯಾಗಬೇಕು ಎಂದರಲ್ಲದೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಾಮಾನ್ಯ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಈ ಸಂದರ್ಭದಲ್ಲಿ ನುಡಿದರು.


ಜಾಗೃತ ಕರ್ನಾಟಕದ ಮುಖಂಡರಾದ ಡಾ.ಎಚ್.ವಿ.ವಾಸು ಅವರು ಮಾತನಾಡಿ,ಮೀಸಲಾತಿ ಕುರಿತು ಈ ದೇಶದಲ್ಲಿ ಬಹಳ ದೊಡ್ಡ ತಪ್ಪು ಅಭಿಪ್ರಾಯವಿದೆ‌. ಸಮಾಜದಲ್ಲಿ ಮಾತ್ರವಲ್ಲ ಸರ್ಕಾರದಲ್ಲೂ ಬೇರೆ ಬೇರೆ ರೀತಿಯ ಅಭಿವ್ಯಕ್ತಿ ಮೀಸಲಾತಿ ಕುರಿತಾಗಿದೆ. ಈ ದೇಶದಲ್ಲಿ ಎರಡು ಸಾವಿರ ವರ್ಷಗಳಿಂದ ಮೀಸಲಾತಿ ಇದೆ. ದೇವಸ್ಥಾನದ ಗರ್ಭಗುಡಿಯಿಂದಲೂ ಬಾಗಿಲ ವರೆಗೂ ಇದು ಅನ್ವಯಿಸುತ್ತಾ ಬಂದಿದೆ ಎಂದರು.

ವೈಕಂ ಸತ್ಯಾಗ್ರಹ ನಡೆದದ್ದು, ಈಳವ ಸಮುದಾಯಕ್ಕೆ ಶಿವನ ದೇವಸ್ಥಾನದ ರಸ್ತೆಗೆ ಪ್ರವೇಶಾವಕಾಶ ನೀಡಬೇಕು ಎಂದು. ದೇವಸ್ಥಾನದ ಪೂಜೆಗೆ ರೋಸ್ಟರ್ ಇರಲ್ಲ, ಎಕ್ಸಾಮ್ ಇರೋದಿಲ್ಲ ಇದು ಹುಟ್ಟಿನ ಆಧಾರದ ಮೇಲೆ ತೀರ್ಮಾನವಾಗುತ್ತಿದೆ. ಹುಟ್ಟಿದ ಕಾರಣಕ್ಕೆ ಅಲಿಖಿತ ನಿಯಮವಾಗಿ ಮೀಸಲಾತಿ ಜಾರಿಯಾಗಿದೆ. ಪಟೇಲ, ಕುಲಕರ್ಣಿ ಮೀಸಲಾತಿ ಇತ್ತು. ಈ ರೀತಿಯ ಮೀಸಲಾತಿ ಕಾರಣಕ್ಕೆ ಆ ಜಾತಿಗಳಿಗೆ ಬಂಡವಾಳ ಸಂಚಯವಾಗಿರುತ್ತೆ‌ ಎಂದು ಹೇಳಿದರು.

 ಒಂದು ಶಾಲೆಯಲ್ಲಿ ಎಲ್ಲಾ ಸಮಾಜದ ಮಕ್ಕಳು ಕಲಿಯದೇ ಇದ್ದರು ಅದು ಹಿಂದುಳಿದ ಶಿಕ್ಷಣದ ಸಂಕೇತ ಎಂದು ಕರೆಸಿಕೊಳ್ಳುತ್ತದೆ. ಎಲ್ಲ ಸಮುದಾಯಕ್ಕೆ ಸೇರಿದ ಮಕ್ಕಳು ಶಾಲೆಗೆ ಬಂದರೆ ಆ ಶಾಲೆ ಸಮೃದ್ಧವಾಗುತ್ತೆ‌. ಆಗ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ. ತಿಳುಳಿಕೆಯೂ ಹೆಚ್ಚಾಗುತ್ತೆ. ಆದರೆ ಇದಕ್ಕೆಲ್ಲ ಕೊಳ್ಳಿ ಇಟ್ಟದ್ದು ಮನುಸ್ಮೃತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಉತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸದವರನ್ನು ನೀವು ಶಿಕ್ಷರನ್ನಾಗಿ ನೀಮಿಸುತ್ತಿದ್ದೀರ. ಕುಂಬಾರರಂತಹ ಕೌಶಲ್ಯವನ್ನೂ ಜ್ಞಾನವೆಂದು ಪರಿಗಣಿಸಿ ಎಂದು ಜ್ಯೋತಿ ಬಾ ಫುಲೆ ೧೮೯೧ರಲ್ಲಿ ಬ್ರಿಟೀಷ್ ಸರ್ಕಾರಕ್ಕೆ ಮನವಿ ಕೊಟ್ಟರು.
ಮದ್ರಾಸ್ ಬ್ರಾಹ್ಮಣರ ವಿರುದ್ಧ ಮೈಸೂರು ಬ್ರಾಹ್ಮಣರು ಮೀಸಲಾತಿ ಹೋರಾಟವನ್ನು ಶುರು ಮಾಡಿದರು ಹೀಗೆ ಮೀಸಲಾತಿಗೆ ಎಲ್ಲರೂ ಫಲಾನುಭವಿಗಳೇ ಎಂದು ಹೇಳಿದರು.

ಮುಸ್ಲೀಮರಿಗೂ ಮೀಸಲಾತಿಗಾಗಿ ಶಿಫಾರಸ್ಸು ಮಾಡಿದ್ದು ಮತ್ತು ಹಿಂದುಳಿದ ಸಮುದಾಯಗಳಿಗಾಗಿ ಶಾಲೆಗಳು, ಹಾಸ್ಟೆಲ್‌ಗಳನ್ನು ಮಾಡುವಂತೆ ಶಿಫಾರಸ್ಸು ಮಾಡಿದ್ದು ಮಿಲ್ಲರ್ ಕಮಿಟಿ. ಅದನ್ನು ಜಾರಿ ಮಾಡಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್.
ಈ ಸಮಾಜ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕಾದರೆ ಶಿಕ್ಷಣ ಅಗತ್ಯ. ಎಲ್ಲರನ್ನೂ ಒಳಗೊಳ್ಳಲು ಮೀಸಲಾತಿಯನ್ನು ಕಲ್ಪಿಸಬೇಕು. ಎಲ್ಲರ ಪಾಲ್ಗೊಳ್ಳುವಿಕೆ‌ ಇಲ್ಲವಾದರೆ ರಾಜ್ಯ, ದೇಶ ಹಿಂದುಳಿಯುತ್ತದೆ. ಹಾಗಾಗಿ ಎಸ್ಸಿ, ಎಸ್ಟಿ ಎಂದ ಮಾತ್ರಕ್ಕೆ ನಾವು ಅಂಜಿಕೆ ಪಡುವುದನ್ನು ನಿಲ್ಲಿಸಬೇಕು. ನಮ್ಮ ಪ್ರತಿಭೆಯನ್ನು ಈ ದೇಶದ ಏಳಿಗೆಗೆ ಸಹಕಾರಿ ಎಂದು ಹೆಮ್ಮೆ ಪಡಬೇಕು ಎಂದರು.

ಆರ್ಗನೈಸರ್ ಎಂಬ ಆರ್‌ಎಸ್‌ಎಸ್ ಪತ್ರಿಕೆ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಯಾಕೆಂದರೆ ಈಗಾಗಲೇ ದೇಶದಲ್ಲಿ ಮನುಸ್ಮೃತಿ ಜಾರಿಯಲ್ಲಿದೆ. ಸಂವಿಧಾನದಲ್ಲಿ‌ ಮನುಸ್ಮೃತಿಯ ಅಂಶಗಳಿಲ್ಲ ಎಂದು ಹೇಳಿಕೊಂಡಿತ್ತು. ಆದರೆ ಸಿದ್ದರಾಮಯ್ಯ ನವರ ಸರ್ಕಾರ ಎಷ್ಟೇ ಸವಾಲುಗಳು ಎದುರಾದರೂ ಸಂವಿಧಾನ ಜಾರಿಮಾಡಲು ಹೊರಟಿದೆ ಎಂದರು.


ಕಾರ್ಯಕ್ರಮದಲ್ಲಿ ಜಾಗೃತ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಆದಂ ಖಾನ್, ಚಂದನ್ ಡಿ. ಎನ್, ಕಿಶೋರ್, ನವೀನ್ ಪೂಜಾರಹಳ್ಳಿ, ದಯಾನಂದ್,ಟೂಡಾ ಶಶಿಧ‌ರ್,  ಕಾಂಗ್ರೆಸ್ ಮುಖಂಡ ಹೆತ್ತೇನಹಳ್ಳಿ ಮಂಜುನಾಥ್, , ಮಧುಗಿರಿ ಕೆಡಿಪಿ ಸಭೆ ಸದಸ್ಯೆ  ಜಯಲಕ್ಷ್ಮಿಜೆ.ಕೆ, ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷ ಧನಿಯಕುಮಾ‌ರ್, ತುಮಕೂರು ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕ ಜೆ. ಕುಮಾರ್,   ಮೈಲಪ್ಪ,  ಡಿ. ಟಿ. ವೆಂಕಟೇಶ್, ಮೊಹಮ್ಮದ್ ಜಿಯಾವುಲ್ಲಾ, ಟಿ. ಆರ್ ಸುರೇಶ್, ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್, ಕರ್ನಾಟಕ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ. ಎನ್ ಮಧುಕರ್ ಇನ್ನಿತರರು ಇದ್ದರು

Leave a Reply

Your email address will not be published. Required fields are marked *