ಜಾತೀಯತೆ ಮೀರುವುದಕ್ಕೆ ಸಾಧ್ಯವಾಗಿಲ್ಲ: ಡಾ. ಪ್ರಶಾಂತ್ ನಾಯಕ

ತುಮಕೂರು: ಯಾವ ಜಾತೀಯತೆಯನ್ನು ಮೀರಬೇಕು ಎಂದು ಡಾ. ಅಂಬೇಡ್ಕರ್ ಅವರು ಆಶಿಸಿದ್ದರೋ, ಆ ಜಾತೀಯತೆಯನ್ನು ಮೀರುವುದಕ್ಕೆ ನಮ್ಮಿಂದ ಸಾಧ್ಯವಾಗಿಲ್ಲ. ಜಾತಿ ನಿರ್ಮೂಲನೆ ಆಗುವ ಬದಲು ಅಹಂಕಾರವಾಗಿ ಮಾರ್ಪಟ್ಟಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಹಿರಿಯ ಕನ್ನಡ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತ್ ನಾಯಕ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಭಾರತದ ಸ್ವಾತಂತ್ರ್ಯಕ್ಕೆ ಅರ್ಥ ಬರಬೇಕಾದರೆ ಜಾತಿಪದ್ಧತಿ ನಿರ್ಮೂಲನೆ ಆಗಬೇಕೆಂದು ಅಂಬೇಡ್ಕರ್ ಬಯಸಿದ್ದರು. ಆದರೆ ಅದು ಆಗಿಲ್ಲ. ಜಾತಿ ಅಸ್ಮಿತೆ ಹೆಚ್ಚಾಗುತ್ತಲೇ ಇದೆ. ಮಾನವೀಯತೆ ಮಾರೆಯಾಗುತ್ತಿದೆ ಎಂದು ವಿಷಾದಿಸಿದರು.

ಎಲ್ಲ ಸಮಸ್ಯೆಗಳ ಮೂಲ ಜಾತಿವ್ಯವಸ್ಥೆಯಲ್ಲಿದೆ. ಅದು ಅಕ್ಟೋಪಸ್‍ನಂತೆ ಇಡೀ ಸಮಾಜದಲ್ಲಿ ವ್ಯಾಪಿಸಿಕೊಂಡಿದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತರ್ಜಾತೀಯ ವಿವಾಹ ಆದೆವು ಎನ್ನುವವರಿಗೂ ಜಾತಿವ್ಯವಸ್ಥೆಯಿಂದ ಹೊರಬರಲು ಆಗುತ್ತಿಲ್ಲ ಎಂದರು.

ಬುದ್ಧ ಆರಂಭಿಸಿದ ಪ್ರಶ್ನಿಸುವ ಪರಂಪರೆಯನ್ನು ಅಂಬೇಡ್ಕರ್ ಮುಂದುವರಿಸಿದರು. ಆದರೆ ಅದನ್ನು ಸಮಪರ್ಥವಾಗಿ ನಾವು ಮುಂದುವರಿಸಿಲ್ಲ. ಆತ್ಮಗೌರವ ಮಾರಿಕೊಂಡು ಇನ್ನೊಬ್ಬರಿಗೆ ಗೌರವ ತೋರುವುದು ಹೇಡಿತನ ಮತ್ತು ದೈನ್ಯತೆ ಎಂದು ಅಂಬೇಡ್ಕರ್ ಭಾವಿಸಿದ್ದರು ಎಂದರು.

ಬುದ್ಧ, ವಚನಕಾರರು ಹಾಗೂ ಅಂಬೇಡ್ಕರ್ ತಮ್ಮ ಬದುಕನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡವರು. ವೈಚಾರಿಕತೆ ನಮ್ಮ ಪ್ರಮುಖ ಸಾಧನವಾಗಬೇಕು. ಅಂಬೇಡ್ಕರ್ ಎಳೆದುತಂದ ವೈಚಾರಿಕತೆಯ ರಥವನ್ನು ಮುಂದಕ್ಕೆ ಎಳೆದುಕೊಂಡು ಹೋಗಬೇಕೇ ಹೊರತು ಮತ್ತೆ ಹಿಂದಕ್ಕೆ ಒಯ್ಯುವ ಕೆಲಸ ಆಗಬಾರದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಡಾ. ಬಿ. ಆರ್. ಅಂಬೇಡ್ಕರ್ ಸಾರ್ವಕಾಲಿಕ ಗೌರವಕ್ಕೆ ಅರ್ಹರು. ಶೈಕ್ಷಣಿಕವಾಗಿ ಅವರಷ್ಟು ಔನ್ನತ್ಯಕ್ಕೆ ಏರಿದ ಇನ್ನೊಬ್ಬರನ್ನು ಪ್ರಪಂಚ ಕಂಡಿಲ್ಲ ಎಂದರು.

ಅಂಬೇಡ್ಕರ್ ಯಾವುದೇ ನಿರ್ದಿಷ್ಟ ಜಾತಿಗಳ ಪರ ಅಥವಾ ವಿರೋಧಿಗಳು ಆಗಿರಲಿಲ್ಲ. ಅವರು ಎಲ್ಲರನ್ನೂ ಸಮಾನರನ್ನಾಗಿ ಕಂಡರು. ಎಲ್ಲರಿಗೂ ಗೌರವ ನೀಡಿದರು. ಇಂದಿನ ತಲೆಮಾರಿಗೆ ಅಂಬೇಡ್ಕರ್ ಆದರ್ಶವಾಗಬೇಕು ಎಂದರು.

ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು. ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಕೇಶವ ಸ್ವಾಗತಿಸಿದರು. ಸಹಪ್ರಾಧ್ಯಾಪಕ ಡಾ. ಎಂ. ಮುನಿರಾಜು ವಂದಿಸಿದರು. ಸಹಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿದರು. ಕೌತಮಾರನಹಳ್ಳಿ ಕಾಂತರಾಜು ಬಳಗದವರು ಭೀಮಗೀತೆಗಳನ್ನು ಪ್ರಸ್ತುತಪಡಿಸಿದರು.

Leave a Reply

Your email address will not be published. Required fields are marked *