ತುಮಕೂರು : ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಜಿಲ್ಲೆಯ ಪಾವಗಡ ತಾಲ್ಲೂಕು ವೈ.ಎನ್. ಹೊಸಕೋಟೆಯಲ್ಲಿ ಗುರುವಾರ ಮೇವು ಬ್ಯಾಂಕ್ ಪ್ರಾರಂಭಿಸಲಾಗಿದ್ದು, ಮಳೆ ಬರುವವರೆಗು ಮೇವು ವಿತರಣೆ ಮಾಡಲಾಗುವುದು. ರೈತರು ಆತಂಕ ಪಡಬಾರದು ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು.
ವೈ.ಎನ್. ಹೊಸಕೋಟೆ ಗ್ರಾಮದ ಉಣ್ಣೆ ಮತ್ತು ರೇಷ್ಮೆ ನೇಕಾರರ ಸಹಕಾರ ಸಂಘದ ಆವರಣದಲ್ಲಿ ಮೇವು ಬ್ಯಾಂಕ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ಪಾವಗಡ ತಾಲ್ಲೂಕಿನಲ್ಲಿ ನಾಗಲಮಡಿಕೆ ಸೇರಿ 2 ಮೇವು ಬ್ಯಾಂಕುಗಳನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ರೈತರ ಬೇಡಿಕೆಯಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮೇವು ಬ್ಯಾಂಕ್ ಪ್ರಾರಂಭಿಸಲು ನಿರ್ದೇಶನ ನೀಡಿರುವನ್ವಯ ಈ ಮೇವು ಬ್ಯಾಂಕನ್ನು ಪ್ರಾರಂಭಿಸಲಾಗಿದೆ. ಎಲ್ಲಾ ಜಾನುವಾರುಗಳಿಗೆ ಸಾಕಾಗುವಷ್ಟು ಮೇವನ್ನು ತರಿಸಲಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಶಾಂತಿಯುತವಾಗಿ ಮೇವನ್ನು ಪಡೆಯಬೇಕು. ಪ್ರತಿ ಕೆ.ಜಿ. ಮೇವಿಗೆ 2 ರೂ.ನಂತೆ ಒಂದು ಜಾನುವಾರಿಗೆ ದಿನಕ್ಕೆ 6 ಕೆ.ಜಿ.ಯಂತೆ 1 ವಾರಕ್ಕಾಗುವಷ್ಟು ಮೇವನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಜಾನುವಾರುಗಳ ಮೇವಿಗೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ಚುನಾವಣೆ ನಡುವೆಯೂ ನಾಗಲಮಡಿಕೆಯಲ್ಲಿ ಮೇವು ಬ್ಯಾಂಕನ್ನು ಪ್ರಾರಂಭಿಸಲಾಗಿದ್ದು, ಜಿಲ್ಲೆಯಲ್ಲಿಯೇ ಮೊದಲ ಮೇವು ಬ್ಯಾಂಕ್ ಇದಾಗಿದೆ ಎಂದರಲ್ಲದೆ ಕುರಿ-ಮೇಕೆಗಳಿಗೆ ರೈತರಿಂದ ಮೇವಿನ ಬೇಡಿಕೆ ಬಂದರೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ರೈತರು ಪಶು ಸಂಗೋಪನಾ ಇಲಾಖೆಯಿಂದ ಪಡೆದಿರುವ ಮೇವು ವಿತರಣಾ ಕಾರ್ಡನ್ನು ಹಾಜರುಪಡಿಸಿ ತಮ್ಮ ಜಾನುವಾರುಗಳಿಗೆ ಮೇವನ್ನು ಪಡೆಯಬಹುದು. ಪಶುವೈದ್ಯ ಇಲಾಖೆಯು ಮೇವಿನ ಗುಣಮಟ್ಟ ಪರಿಶೀಲಿಸಿದ ನಂತರವೇ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಳಪೆ ಗುಣಮಟ್ಟದ ಮೇವನ್ನು ವಿತರಣೆ ಮಾಡುವುದಿಲ್ಲ. ಜಾನುವಾರು ಮೇವು ಕಳಪೆ ಗುಣಮಟ್ಟದಿಂದ ಕೂಡಿದ್ದಲ್ಲಿ ಸರಬರಾಜುದಾರರಿಗೆ ಹಿಂದಿರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾವಗಡ ತಾಲೂಕು ತಹಶೀಲ್ದಾರ್ ಸಂತೋಷ್, ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ|| ಗಿರೀಶ್‍ಬಾಬು ರೆಡ್ಡಿ, ಸಹಾಯಕ ನಿರ್ದೇಶಕ ಡಾ|| ಹೊರಕೇರಪ್ಪ, ಕಂದಾಯ ಇಲಾಖೆ ಸಿಬ್ಬಂದಿ ಸೇರಿದಂತೆ ಮತ್ತಿತರರಿದ್ದರು.