ಸಡಗರದಿಂದ ಬಕ್ರೀದ್ ಹಬ್ಬ ಆಚರಣೆ

ತುಮಕೂರು, ಮುಸ್ಲಿಂ ಬಾಂಧವರ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲೆಯ ಕುಣಿಗಲ್, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಮಧುಗಿರಿ, ಸಿರಾ, ಪಾವಗಡ ಹಾಗೂ ತುಮಕೂರು ತಾಲ್ಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ, ಹೊಸ ಉಡುಪುಗಳನ್ನು ಧರಿಸಿ ಆಯಾ ತಾಲ್ಲೂಕು ಕೇಂದ್ರಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 9.30ಕ್ಕೆ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಂತರ ಮಕ್ಕಾ ಮಸೀದಿ, ಈದ್ಗಾ ಮೊಹಲ್ಲಾ ಪಕ್ಕದಲ್ಲಿರುವ ಕೌಸರ್ ಮಸೀದಿ ಸೇರಿದಂತೆ ನಗರದ ವಿವಿಧ ಮಸೀದಿಗಳಲ್ಲೂ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.

ಈದ್ಗಾ ಮೈದಾನಕ್ಕೆ ಕೆಪಿಸಿಸಿಯ ಮುರುಳೀಧರ ಹಾಲಪ್ಪ, ಅಡಿಷನಲ್ ಎಸ್ಪಿಗಳಾದ ವಿ. ಮರಿಯಪ್ಪ, ಅಬ್ದುಲ್ ಖಾದರ್, ಡಿವೈಎಸ್ಪಿ ಚಂದ್ರಶೇಖರ್ ಅವರು ಭೇಟಿ ನೀಡಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.

ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕ. ಬಡವರಿಗೆ, ನಿರ್ಗತಿಕರಿಗೆ ದಾನ, ಧರ್ಮ ಮಾಡಲು ಅವಕಾಶ ಮಾಡಿಕೊಡುವುದೇ ಬಕ್ರೀದ್ ಹಬ್ಬದ ವಿಶೇಷತೆ. ಎಲ್ಲರೂ ಕೂಡಿ ಸಮಾನತೆಯಿಂದ ಬಾಳಲು, ಶಾಂತಿ ಸೌಹಾರ್ದತೆಯ ಪ್ರತೀಕವಾಗಿದೆ ಈ ಬಕ್ರೀದ್ ಹಬ್ಬ ಎಂದರು.

ಬಕ್ರೀದ್ ಹಬ್ಬವು ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡಲಿ, ಎಲ್ಲರೂ ಕೂಡಿ ಬಾಳುವಂತಾಗಲಿ, ಉತ್ತಮ ಮಳೆ, ಬೆಳೆಯಾಗಿ ದೇಶ ಸಮೃದ್ಧಿಯಾಗಲಿ ಎಂದು ಆಶಿಸಿದರು.

ನಮ್ಮಲ್ಲಿರುವ ಅಸೂಯೆ, ದ್ವೇಷವನ್ನು ತೆಗೆದು ಹಾಕಬೇಕು. ಬಕ್ರೀದ್ ತ್ಯಾಗ ಬಲಿದಾನದ ಸಂಕೇತ ಎಂದು ಹೇಳುವ ಮೂಲಕ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.

ಮುರುಳೀಧರ ಹಾಲಪ್ಪ ಮಾತನಾಡಿ, ತುಮಕೂರು ಜಿಲ್ಲೆ ನಾಡಿನಾದ್ಯಂತ ಸಾಮರಸ್ಯಕ್ಕೆ ಹೆಸರಾಗಿದೆ. ಹಿಂದೂ-ಮುಸ್ಲಿಂ ಬಾಂಧವರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ಮುಸ್ಲಿಂ ಬಾಂಧವರು ಶಿಕ್ಷಣಕ್ಕೆ ಒತ್ತು ನೀಡಿ ಪ್ರಗತಿ ಹೊಂದಬೇಕು ಎಂದು ಹೇಳಿದರು.

ಲಾಲ್ ಈದ್ಗಾದಲ್ಲೂ ಸಾಮೂಹಿಕ ಪ್ರಾರ್ಥನೆ

ನಗರದ ಮೆಳೇಕೋಟೆ ಸಮೀಪ ಇರುವ ಲಾಲ್ ಈದ್ಗಾ ಮೈದಾನದಲ್ಲಿ ಮಾಜಿ ಶಾಸಕ ಡಾ. ರಫೀಕ್ ಅಹಮದ್ ಸೇರಿದಂತೆ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಂತರ ಮಾತನಾಡಿದ ಮಾಜಿ ಶಾಸಕ ಡಾ. ರಫೀಕ್ ಅಹಮದ್ ಅವರು, ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಹಿಂದೂ, ಕ್ರೈಸ್ತ, ಮುಸ್ಲಿಂ ಎಲ್ಲರೂ ಒಗ್ಗಟ್ಟಾಗಿ ದೇಶದ ಐಕ್ಯತೆಗಾಗಿ ಸಂಕಲ್ಪ ಮಾಡಿ ದುಡಿಯೋಣ, ಒಗ್ಗಟ್ಟಾಗಿ ಇರೋಣ ಎಂದು ಕರೆ ನೀಡಿದರು.

ನಾಡಿನಾದ್ಯಂತ ಮುಸ್ಲಿಂ ಬಾಂಧವರ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಎಲ್ಲ ಮುಸಲ್ಮಾನ್ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರುತ್ತೇನೆ ಎಂದರು.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಸೇರಿದಂತೆ ನಗರದ ವಿವಿಧೆಡೆ ಬಿಗಿ ಪೆÇಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *