ತುಮಕೂರು: ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿಗಣತಿ ಮಾಡಲು ನಿರ್ಧರಿಸುವುದು ಸ್ವಾಗತಾರ್ಹ, ಈ ಮೂಲಕ ಶೋಷಣೆಗೊಳಗಾಗಿರುವ ಅನೇಕ ಜಾತಿಗಳಿಗೆ ಸಂವಿಧಾನಾತ್ಮಕ ಅನುಕೂಲಗಳು ದೊರೆಯುತ್ತವೆ ಎಂದು ಮಾಜಿ ಶಾಸಕ, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಮುಖಂಡ ನೆ.ಲ.ನರೇಂದ್ರಬಾಬು ಅಭಿಪ್ರಾಯಪಟ್ಟರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿಸಿರುವ ಜಾತಿಗಣತಿ ವೈಜ್ಞಾನಿಕವಾಗಿಲ್ಲ ಎಂದು ಅವರ ಸಚಿವರೇ ಆಕ್ಷೇಪ ಮಾಡಿದ್ದಾರೆ. 165 ಕೋಟಿ ರೂ. ಖರ್ಚು ಮಾಡಿ ಸಿದ್ಧಪಡಿಸಲಾಗಿರುವ ಕಾಂತರಾಜು ವರದಿ ಈಗ ಜಯಪ್ರಕಾಶ್ ಹೆಗಡೆಯಾಗಿದೆ ಎಂದರು.
1931ರ ನಂತರ ದೇಶದಲ್ಲಿ ಜಾತಿಗಣತಿ ನಡೆದಿರಲಿಲ್ಲ, ಜನಗಣತಿ ಮಾತ್ರ ನಡೆದಿತ್ತು. ಇದೀಗ ಸಾಮಾಜಿಕ ಅವಶ್ಯಕತೆಯ ನೈಜ ದತ್ತಾಂಶಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸತತವಾಗಿ ಐವತ್ತು ವರ್ಷಕ್ಕೂ ಹೆಚ್ಚು ಕಾಲ ಕೇಂದ್ರದಲ್ಲಿ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ನ್ಯಾಯ ಒದಗಿಸುವ ಪ್ರಯತ್ನ ಮಾಡಲಿಲ್ಲ. ಒಂದು ಕುಟುಂಬದ ನೇತೃತ್ವಕ್ಕೆ ಅಧಿಕಾರ ಬಿಟ್ಟುಕೊಟ್ಟಿದ್ದು ಕಾಂಗ್ರೆಸ್. ದೇಶ ಮೊದಲ ಬಾರಿಗೆ ಒಬಿಸಿ ಹಿನ್ನೆಲೆಯ ಪ್ರಧಾನಿ ಆಳ್ವಿಕೆ ಕಂಡಿದ್ದು ಬಿಜೆಪಿಯಿಂದ. ಎಲ್ಲಾ ವರ್ಗಗಳ ಜನರು ಮೆಚ್ಚುವ ನಾಯಕರಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗುತ್ತಿಲ್ಲ ಎಂದು ನರೇಂದ್ರಬಾಬು ಟೀಕಿಸಿದರು.
ಜಾತಿಗಣತಿಯ ನೆಪದಲ್ಲಿ ಹಿಂದುಳಿದ ವರ್ಗಗಳನ್ನು ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ವಿಫಲ ಪ್ರಯತ್ನ ನಡೆಸಿದ್ದಾರೆ. ಪ್ರಧಾನಿ ಮೋದಿಯವರ ಜಾತಿಗಣತಿ ನಡೆಸುವ ನಿರ್ಧಾರ ಕಾಂಗ್ರೆಸ್ ಬುಡ ಅಲ್ಲಾಡಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ಹೆಸರಿನಲ್ಲಿ ಹತ್ತು ವರ್ಷ ಕಾಲಹರಣ ಮಾಡಿದ್ದು ಮಾತ್ರವಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಗೊಂದಲದ ಗೂಡಾಗಿದೆ. ಪ್ರವರ್ಗ 1ರಲ್ಲಿದ್ದ ಅತಿ ಹಿಂದುಳಿದ ಜಾತಿಗಳಿಗಿದ್ದ ಆರ್ಥಿಕ ಮಾನದಂಡವನ್ನು ಕಿತ್ತುಹಾಕಿ ಅನ್ಯಾಯ ಮಾಡಲಾಗಿದೆ. ನೂರಾರು ಸಣ್ಣ ಜಾತಿಯವರು ತಮ್ಮ ಸಂಖ್ಯೆಯ ಬಗ್ಗೆ ತಕರಾರು ಎತ್ತಿದ್ದಾರೆ. ಕಾಂಗ್ರೆಸ್‍ನ ಅನೇಕ ನಾಯಕರು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಹಿಂದುಳಿದ ವರ್ಗಗಳ ನಾಯಕರಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಈ ವರದಿ ಹಳೆಯದಾಗಿದೆ ಎಂದು ಟೀಕಿಸಿದ್ದಾರೆ ಎಂದು ನರೇಂದ್ರಬಾಬು ಹೇಳಿದರು.
ಮುಖ್ಯಮಂತ್ರಿ ಸಿದ್ದಾರಾಮಯ್ಯ ಜಾತಿಗಣತಿಯನ್ನು ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಅತಿಯಾದ ರಾಜಕೀಯದಿಂದಾಗಿ ಗೊಂದಲದ ಗೂಡಾಗಿರುವ ಕರ್ನಾಟಕದ ಜಾತಿಗಣತಿ ವರದಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರದ ಜಾತಿಗಣತಿ ವರದಿ ಬರಲಿದೆ. ಗೊಂದಲದ, ಅವೈಜ್ಞಾನಿಕ ವರದಿಗೆ ಪರ್ಯಾಯದ ದಾರಿಯನ್ನು ತೋರಿಸಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು. ಹಿಂದುಳಿದ ವರ್ಗಗಳ ಎಲ್ಲಾ ರೀತಿಯ ಸಾಮಾಜಿಕ ನ್ಯಾಯದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಒದಗಿಸಲು ಬಿಜೆಪಿ ಬದ್ಧವಾಗಿದೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್‍ಗೌಡ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮುಖಂಡರಾದ ಶ್ರೀನಿವಾಸ್, ಜೆ.ಜಗದೀಶ್, ಹನುಮಂತರಾಜು, ಚಂದ್ರಬಾಬು, ಮರಿತಿಮ್ಮಯ್ಯ, ಚೆನ್ನಕೇಶವ, ವೆಂಕಟೇಶ್ ಭಾಗವಹಿಸಿದ್ದರು.