ತುಮಕೂರು : ಹಿಂದುಳಿದ ವರ್ಗದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸದ ಕೇಂದ್ರ ಸರ್ಕಾರವು ಮತ್ತು ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಪ್ರಾಯೋಜಿತ ಹುನ್ನಾರ ನಡೆಸಿವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆರೋಪಿಸಿದರು.
ಅವರಿಂದು ಗುಂಚಿ ಚೌಕದ ಟಿಎಪಿಸಿಎಂಸಿ ಕಟ್ಟಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಜ್ಜನ, ಸರಳ ಪಾರದರ್ಶಕ ಆಡಳಿತ ನಡೆಸುತ್ತಿರುವ ದಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳಿಂದ ಜನರ ಮನ್ನಣೆ ಗಳಿಸಿರುವ ಹಿನ್ನಲೆಯಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಇರುವುದರಿಂದ ಅವರಿಗೆ ಮಸಿ ಬಳಿಯುವ ಹುನ್ನಾರದಿಂದ ವಿರೋಧ ಪಕ್ಷಗಳು ಸಿಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಯೇತರ ಸರ್ಕಾರಗಳನ್ನು ಅಧಿಕಾರದಿಂದ ಕೆಳಗಿಳಿಸಲು ದಾಳಿ ಮತ್ತು ತನಿಖೆಯಂತಹ ಬೆದರಿಕೆಯನ್ನು ಕೇಂದ್ರ ಸರ್ಕಾರ ಒಡ್ಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಆತಿವೃಷ್ಟಿಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಸದನದಲ್ಲಿ ಗಂಭೀರವಾಗಿ ಚರ್ಚಿಸುವ ಬದಲು ವಿರೋಧ ಪಕ್ಷಗಳು ಇಲ್ಲಸಲ್ಲದ ಪ್ರಕರಣಗಳ ಪ್ರಸ್ತಾಪ ಮಾಡಿ ಸದನದಲ್ಲಿ ಗೊಂದಲ ಸೃಷ್ಟಿಸುವುದು ಖಂಡನೀಯ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣದ ವಹಿವಾಟು ನಡೆದಿರುವುದು, ಸಾರ್ವಜನಿಕರ ಹಣ ದುರುಪಯೋಗವಾಗಿದೆ ಎಂದ ಅವರು, ಹಣ ದುರುಪಯೋವಾಗಿರುವ ಬೆಳವಣಿಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದ್ದು, ಸಿಬಿಐ ತನಿಖೆಗೂ ವಹಿಸಿದೆ. ಈ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಿ, ಶಿಕ್ಷೆಗೆ ಗುರಿಪಡಿಸುವ ಮೂಲಕ ಸಾರ್ವಜನಿಕ ಆಶಯಕ್ಕೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಇಷ್ಟೆಲ್ಲಾ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದರೂ ವಿರೋಧ ಪಕ್ಷಗಳು ಪ್ರತಿ ನಿತ್ಯ ಇಲ್ಲಸಲ್ಲದ ಟೀಕೆ ಟಿಪ್ಪಣಿ, ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣಕ್ಕೆ ಸಂಬ0ಧಿಸಿದ0ತೆ ಮಾತನಾಡಿದ ಸಚಿವರು, ಈ ವಿಚಾರದಲ್ಲಿ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಈ ಪ್ರಕರಣವನ್ನು ಮುಂದಿಟ್ಟುಕೊ0ಡು ಪಾದಾಯಾತ್ರೆ ನಡೆಸಲು ಚಿಂತನೆ ಮಾಡಿರುವುದು ಒಳ್ಳೆಯದಲ್ಲ ಎಂದರು.
ಈ ಪ್ರಕರಣಕ್ಕೆ ಸಂಬ0ಧಿಸಿದ0ತೆ ವಿರೋಧ ಪಕ್ಷಗಳ ಅನೇಕರು ಫಲಾನುಭವಿಗಳಾಗಿದ್ದು ತಾವು ಪಡೆದಿರುವ ನಿವೇಶನಗಳನ್ನು ವಾಪಸ್ ಕೊಟ್ಟು ನಂತರ ಆರೋಪ ಮಾಡಲಿ. ಈ ಪ್ರಕರಣಕ್ಕೆ ಸಂಬ0ಧಿಸಿದ0ತೆ ಸಾಕ್ಷಾಧಾರಗಳಿದ್ದು ಈ ಬಗ್ಗೆ ಈಗಲೆ ವಿವರಗಳನ್ನು ನೀಡುವುದಿಲ್ಲ ಎಂದರು.
2011ರ ಮಾರ್ಚ್17 ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸದನದಲ್ಲಿ ಮಾಹಿತಿ ನೀಡಿದ್ದರು, ಯಾರ ಕಾಲದಲ್ಲಿ ಯರಿಗೆ ನಿವೇಶನ ಪಡೆದಿದ್ದಾರೆ ಎಂಬ ಸಮಗ್ರ ಮಾಹಿತಿ ನೀಡಿದ್ದಾರೆ, ನಿವೇಶನ ಪಡೆದಿರುವ ಎಲ್ಲರ ವಿರುದ್ಧ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ದೇವರಾಜುಅರಸು, ಎಸ್.ಬಂಗಾರಪ್ಪ, ಎನ್.ಧರ್ಮಸಿಂಗ್ ಇವರ ನಂತರ ಸಿದ್ದರಾಮಯ್ಯನವರು ಅಹಿಂದ ವರ್ಗದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಇದುವರೆವಿಗೂ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಗುರಿಯಾಗಿಟ್ಟುಕೊಂಡು ಹಿಂದುಳಿದ ವರ್ಗದವರ ಸರ್ಕಾರಗಳನ್ನು ಉರುಳಿಸಿ ಅವರು ಅಧಿಕಾರಕ್ಕೆ ಬರಲು ಹುನ್ನಾರ ಮಾಡುತ್ತಿದ್ದಾರೆ ಎಂದ ಸಚಿವರು, ವಿರೋಧ ಪಕ್ಷಗಳು ಮುಖ್ಯಮಂತ್ರಿಗಳ ವಿರುದ್ಧ ಪಾದಯಾತ್ರೆ ಮಾಡಲು ಹೊರಟರೆ ತುಮಕೂರು ಜಿಲ್ಲೆಯ ಅಹಿಂದ ವರ್ಗದ ಮುಖಂಡರು ಪಕ್ಷಾತೀತವಾಗಿ ವಿರೋಧ ಪಕ್ಷಗಳ ವಿರುದ್ಧ ಪಾದಯಾತ್ರೆ ಖಂಡಿಸಿ ತೀವ್ರತರವಾದ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.