ಮಾತೃ ಹೃದಯ ಹೊಂದಿದ್ದ ಬಹುಮುಖ ವ್ಯಕ್ತಿತ್ವದ ಚಲುವರಾಜು

ತುಮಕೂರು:ಬಹುಮುಖ ವ್ಯಕ್ತಿತ್ವದ ಚಲುವರಾಜು ಪದವಿ ಪಡೆಯದಿದ್ದರೂ,ಜೀವನಾನುಭವದ ಮೂಲಕ ಮೇಧಾವಿಗಳನ್ನು ಮೀರಿಸುವಷ್ಟು ವಾಕ್ಚಾತುರ್ಯ,ವಿದ್ವತ್ ಸಂಪಾದಿಸಿಕೊಂಡಿದ್ದ ವ್ಯಕ್ತಿಯಾಗಿದ್ದರು ಎಂದು ಹಿರಿಯ ಹರಿಕಥಾ ವಿದ್ವಾನ್, ಕಲಾಶ್ರೀ ಡಾ.ಲಕ್ಷ್ಮಣದಾಸ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಚಲುವರಾಜು ಗೆಳೆಯರ ಬಳಗದಿಂದ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕಿರು ಉದ್ಯಮಿಯಾಗಿ,ಕಲಾವಿದನಾಗಿ,ರಾಜಕಾರಣಿಯಾಗಿ, ಹೋರಾಟಗಾರನಾಗಿ,ಆಟೋ ಚಾಲಕರ ಸಂಘಟನೆಯ ಮುಖಂಡರಾಗಿ,ಒಳ್ಳೆಯ ಕೌಟುಂಬಿಕ ವ್ಯಕ್ತಿಯಾಗಿ,ಹೀಗೆ ಹತ್ತು ಹಲವು ಮುಖಗಳನ್ನು ಹೊಂದಿದ್ದ ಚಲುವರಾಜು, ನಮ್ಮಂತಹ ಅನೇಕರಿಗೆ ಆಶ್ಚರ್ಯ ಹುಟ್ಟಿಸುವಂತಹ ಗುಣಗಳನ್ನು ಹೊಂದಿದ್ದ ವ್ಯಕ್ತಿ ಎಂದರು.

ಹುಟ್ಟಿದ ವ್ಯಕ್ತಿ ಒಂದು ದಿನ ಸಾಯಲೇಬೇಕು.ಆದರೆ ಬದುಕಿರುವಷ್ಟು ದಿನ ಇತರರಿಗೆ ನೆರವಾಗುವ ಮೂಲಕ ಮಾತೃಹೃದಯ ಹೊಂದಿದ್ದ ವ್ಯಕ್ತಿ.ಸಹಾಯ ಕೇಳಿಬಂದ ಎಲ್ಲರಿಗೂ ತನ್ನ ಕೈಲಾದಷ್ಟು ಸಹಕಾರ ನೀಡುವ ಮೂಲಕ ಜನಾನುರಾಗಿಯಾಗಿದ್ದ ಬದುಕಿದ ವ್ಯಕ್ತಿ.ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಶ್ರದ್ದಾಂಜಲಿ ಸಲ್ಲಿಸಿದರು.

ಸಿಪಿಐ(ಎಂ) ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್ ಮಾತನಾಡಿ,ಎಡ ಚಳವಳಿಗಳು ಸೇರಿದಂತೆ ಎಲ್ಲ ರೀತಿಯ ಚಳವಳಿಗಳಿಗೆ ತನ್ನ ಕೈಲಾದಷ್ಟು ಸಹಾಯ,ಸಹಕಾರ ನೀಡುತಿದ್ದ ವ್ಯಕ್ತಿ ಚಲುವರಾಜು,ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿ ಅವರ ಕಷ್ಟ ಸುಖಃಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದರು.ರಾಜಕೀಯವಾಗಿ ಜನತಾದಳ ಸೇರಿದರೂ ವಿಶ್ವಾಸಕ್ಕೆ ಕೊರತೆ ಇರಲಿಲ್ಲ.ನಮ್ಮ ಪ್ರತಿ ಕಾರ್ಯಕ್ರಮದ ಬಗ್ಗೆ ಸಲಹೆ,ಸೂಚನೆಗಳು,ಶುಭಾಷಯಗಳು,ಅಭಿನಂದನೆಗಳನ್ನು ಹಂಚಿಕೊಳ್ಳು ತಿದ್ದರು.ಹೃದಯ ಸಂಬಂಧಿ ಕಾಯಿಲೆ ಇದ್ದರು,ಅದನ್ನು ಲಕ್ಕಿಸದೆ ಸದಾ ನಗುಮುಖದಿಂದ ಬದುಕುತ್ತಾ ಕೊನೆಯ ದಿನದವರೆಗೂ ಸಮಾಜಮುಖಿಯಾಗಿ ಬದುಕಿದವರು.ಅವರ ಕುಟುಂಬದಂತೆ ನಾವು ಕೂಡ ದುಃಖದಲ್ಲಿ ಸಮಾನ ಭಾಗಿಗಳು ಎಂದರು.

ಕಲಾವಿದ ಕುತುಬುದ್ದೀನ್ ಮಾತನಾಡಿ,ತಾವು ಬದುಕಿದ್ದಾಗಲೇ,ತಮ್ಮ ಸಾವನ್ನು ಸಂಭ್ರಮಿಸಿದ ವ್ಯಕ್ತಿ ಯಾರಾದರೂ ಇದ್ದರೆ ಅದು ಚಲುವರಾಜು,ನನ್ನ ಜೊತೆ ಹಲವು ಸಿನಿಮಾಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ಯಾವ ಪಾತ್ರ ನೀಡಿದರೂ ಪರಕಾಯಪ್ರವೇಶ ಮಾಡುವಷ್ಟು ನಟ ಅವರಲ್ಲಿ ಜಾಗೃತವಾಗಿದ್ದ.ಅವರ ಸಾವು ನಮ್ಮಂತವರಿಗೆ ತುಂಬಲಾರದ ನಷ್ಟ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ,ಕಾಂತರಾಜು ಕೌತಮಾರನಹಳ್ಳಿ, ಸಿದ್ದರಾಜು ಸ್ವಾಂದೇನಹಳ್ಳಿ, ಶಿವಕುಮಾರ್ ತಿಮ್ಮಲಾಪುರ, ವಿಜ್ಞಾನ ಕೇಂದ್ರದ ರವೀಶ್, ಸಿಐಟಿಯುನ ಎನ್.ಕೆ.ಸುಬ್ರಮಣ್ಯ ಸೇರಿದಂತೆ ಹಲವರು ಭಾಗವಹಿಸಿ, ನುಡಿನಮನ ಸಲ್ಲಿಸಿದರು.

Leave a Reply

Your email address will not be published. Required fields are marked *