ತುಮಕೂರು : ಅಬ್ಬಾ ಪಾದರಸದಂತೆ ಮಾತನಾಡುವವರಿದ್ದಾರೆ ಅಂತ ಕೇಳಿದ್ದೇ, ನೋಡಿರಲಿಲ್ಲ, 25 ವರ್ಷಗಳ ಹಿಂದೆ ಸಿಕ್ಕಿದ್ದ ಅವರು ಮತ್ತೆ ಸಿಕ್ಕಿದರು, ಒಂದು ಗಂಟೆಯಲ್ಲಿ ನೂರಾರು ಕತೆಗಳನ್ನು ಹೇಳಿದರು.
ಅವರು ಆ ಕತೆಗಳನ್ನೆಲ್ಲಾ ಹೇಗೆ ಹೇಳಿದರು ಅಂದ್ರೆ ಆ ದೃಶ್ಯಗಳು, ಘಟನೆಗಳನ್ನು ಅವರಿಗೆ 60 ವರ್ಷವಾದರೂ ಅದು ಹೇಗೆ ತಮ್ಮ ನೆನಪಿನಂಗಳದಲ್ಲಿ ಇಟ್ಟುಕೊಂಡಿದ್ದಾರೆ ಎಂಬುದೇ ನನಗೆ ವಿಸ್ಮಯ, ಅವರ ಎತ್ತರ, ಮಾತು, ನಡಿಗೆ ಎಲ್ಲಾ ಅವರಿಗೆ ಸಾಟಿ, ಅವರ ಮಾತು ಪುಲ್ ನಾಟಿ.
ಅವರು ನನಗೆ ಮತ್ತೆ ಸಿಗದಿದ್ದರೆ ಒಬ್ಬ ಒಳ್ಳೆಯ ಕತೆಗಾರನನ್ನು ಕಳೆದುಕೊಳ್ಳುತ್ತಿದ್ದೆ, ಅವರ ಎದೆಗೂಡಿನಲ್ಲಿ ನೂರಾರು ಕತೆಗಳಿವೆ, ಅವರ ಜೊತೆ ಮುಂದೆ ಹಲವಾರು ದಿನ ಇದ್ದು, ಅವರ ಕತೆಗಳನ್ನೆಲ್ಲಾ ರೆಕಾರ್ಡ್ ಮಾಡಬೇಕೆಂಬುದು ನನ್ನ ಮಹಾದಾಸೆ, ಆಸೆ ಈಡೇರಲಿ ಎಂಬುದು ಆವರಾಸೆ ಇರಲಿ.
ಈ ಚಿತ್ರ 30ನವೆಂಬರ್ , 2023ರಂದು ತೆಗೆದದ್ದು, ಈ ಚಿತ್ರದಲ್ಲಿ ನಾನು, ಡಾ.ರವಿವರು, ಮಧ್ಯದಲ್ಲಿ ಇರುವವರು ಅವರ ತಂದೆ ಚಿಕ್ಕರಾಮಯ್ಯ ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆಂದು ಡಾ.ರವಿ ಕೋಡಿಹಳ್ಳಿ ಹೇಳಿದರು, ಈ ಕತೆ ಬರೆದು ಡಿ.4 ರ ಬೆಳಿಗ್ಗೆ 8.5 ಕ್ಕೆ ಹಾಕಿದೆ, ಆ ಕಡೆಯಿಂದ ಡಾ.ರವಿ ಕೋಡಿಹಳ್ಳಿಯವರು ಅಪ್ಪ ಇಂದು ರಾತ್ರಿ ಬೆಳಗಿನ ಜಾವ ಹೃದಯಾಘಾತದಿಂದ ನಿಧನವಾದರು ಎಂದು ಹೇಳಿದರು. ತುಂಬಾ ನೋವಾಯಿತು.
ಆ ವ್ಯಕ್ತಿ ಯಾರು, ಎಲ್ಲಿಯವರು ಎಂಬುದು ತಿಳಿಯಬೇಕಲ್ಲ, ಅವರೇ ಡಾ||ರವಿ ಕೋಡಿಹಳ್ಳಿ, ಚಿಕ್ಕಬಳ್ಳಪುರದವರು, ಇವರ ಮನೆ ಗೋಪಾಲಕೃಷ್ಣ ದೇವಾಸ್ಥಾನದ ಬಳಿ ಇದೆ, ಡಾ||ರವಿ ಕೋಡಿಹಳ್ಳಿಯವರು ನಮ್ಮ ಅಣ್ಣ ಡಾ|| ರಂಗಸ್ವಾಮಿಯ ಗೆಳೆಯರು.
ನಾನು ತುಮಕೂರಿನ ಸದಾಶಿವ ನಗರದಲ್ಲಿದ್ದಾಗ ದಿಢೀರನೇ ಪ್ರತ್ಯಕ್ಷವಾಗಿ ಬಿಟ್ಟರು, ನಮ್ಮಣ್ಣ ಜೋರಾಗಿ ನಗುತ್ತಾ ಓ ಏನಪ್ಪ ಬಳ್ಳಾರಿ ದೆವ್ವ ಅಂತ ನಕ್ಕರು, ನಮ್ಮಣ್ಣ ಡ್ಯೂಟಿಗೆ ಹೋದಮೇಲೆ ನಾವಿಬ್ಬರೇ ಇಡೀ ತುಮಕೂರನ್ನು ಕಾಲು ನಡಿಗೆಯಲ್ಲಿ ನಡೆದೆವು, ಸಿಕ್ಕಿದೆಲ್ಲಾ ತಿಂದೆವು, ಆಗ ನಾನಿನ್ನೂ ಪದವಿ ಓದುತ್ತಿದ್ದ ಹುಡುಗನ್ನಲ್ಲವೇ, ಏನಾಬೇಕಾದರೂ ತಿನ್ನು ಅಂದ್ರೆ ಬಿಡುತ್ತೀವಾ? ಬರಗಾಲದಲ್ಲಿ ಬಣವೆ ಹುಲ್ಲು ಸಿಕ್ಕಂತೆ ತುಮಕೂರಿನ ಎಲ್ಲಾ ಗಲ್ಲಿಗಳಲ್ಲಿ ಏನೇನು ಸಿಗುತ್ತೋ ಅದೆಲ್ಲಾ ತಿನ್ನೋದು ಡಾ||ರವಿ ಕೋಡಿಹಳ್ಳಿಯವರು ಹೇಳುವ ಕತೆಗಳನ್ನು ಕೇಳುತ್ತಾ ನಗೋದು.
ಮನೆಗೆ ಬಂದ ಮೇಲೆ ಚಿಕನ್, ಮಟನ್, ಹಂದಿ ಬಾಡು ಏನೆಲ್ಲಾ ಬೇಕೋ ಅದೆಲ್ಲಾ ಮಾಡೋದು, ಅವರು ಡ್ರಿಂಕ್ಸ್ ತಂದು ಕುಡಿಯೋರು, ನಾನು ಕೊಕೋ ಕೋಲಾ ಕುಡಿಯೋದು, ಹೀಗೆ ನಾಲ್ಕೈದು ದಿನವಾದ ಮೇಲೆ ನಮ್ಮಣ್ಣ ಕಾಲೇಜಿಗೆ ಹೋಗದೆ ಇವನ ಜೊತೆ ಅಂಡೆಲೆಯುತ್ತಿದ್ದೀಯ ಹೋಗು ಕಾಲೇಜಿಗೆ ಅಂದ್ರು, ಬಾರೋ ನೀನು ನನ್ನ ಜೊತೆ ಅಂತ ಡಾ||ರವಿಯವರನ್ನು ಜೊತೇಲಿ ಕರ್ಕಂಡು ಹೋದ್ರು, ಅವತ್ತಿನ ಮಧ್ಯಾಹ್ನಕ್ಕೆ ಅವರು ಒಂದ್ಹತ್ತು ಇಂಗ್ಲೆಂಡ್ ನಾಣ್ಯಗಳನ್ನು ನನ್ನ ಕೈಗಿತ್ತು, ನೂರು ರೂಪಾಯಿಯನ್ನೂ ಕೊಟ್ಟು ಹೋದರು.
ಆ ನಂತರ ಆಗಾಗ್ಗೆ ಪೋನ್ ಬಿಟ್ಟರೆ ಮುಖಾಮುಖಿ ಸಿಕ್ಕಿರಲಿಲ್ಲ, ನಮ್ಮಣ್ಣ ಚಿಕ್ಕಬಳ್ಳಾಪುರ ಡಿಹೆಚ್‍ಓ ಆಗಿದ್ದರೂ ಹೋಗಲು ಆಗಿರಲಿಲ್ಲ. ಮೊನ್ನೆ ಡಾ||ರವಿ ಕೋಡಿಹಳ್ಳಿಯವರ ತಂದೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ ಎಂದು ತಿಳಿದ ಮೇಲೆ ಚಿಕ್ಕಬಳ್ಳಾಪುರಕ್ಕೆ ಹೋದೆ.
ಡಾ||ರವಿ ಕೋಡಿಹಳ್ಳಿ ಅವರು ನವೆಂಬರ್ 30ರ ಬೆಳಿಗ್ಗೆ 6.15ರಿಂದ 8ಗಂಟೆಯ ತನಕ ಮಾತ್ರ ನನ್ನ ಜೊತೆ ಇದ್ದದ್ದು, ಅಷ್ಟರೊಳಗೆ ನಮ್ಮಣ್ಣ ಬಳ್ಳಾರಿಗೆ ಬಂದು ಮೆಸ್ ಊಟಕ್ಕಾಗಿ ನಡೆದ ಸಣ್ಣ ತಿಕ್ಕಾಟ ಅವರನ್ನು ಜೀವನ ಪೂರ್ತಿ ಗೆಳೆಯರಾಗಿರುವಂತೆ ಮಾಡಿದ್ದು, ನಮ್ಮಣ್ಣನ ಕೆಲ ಮ್ಯಾನರಿಸಂ, ಲವ್ ಸ್ಟೋರಿ, ಬಳ್ಳಾರಿ ಗುಡ್ಡದ ಮೇಲೆ ಚೇಳುಗಳ ಮಧ್ಯೆ ಬೆಳದಿಂಗಳ ರಾತ್ರಿಯಲ್ಲಿ ಕರಿ ಕಂಬಳಿ ಹೊದ್ದಕೊಂಡು ಕಳೆದದ್ದು, ಕಂಬಳಿ ಹೊದ್ದುಕೊಂಡು ಹಾಸ್ಟಲ್‍ಗೆ ಬರುವಾಗ ಕರಡಿ ಬಂದವು ಎಂದು ಹಾಸ್ಟಲ್ ಹುಡುಗರು ಕೂಗಿದ್ದು ಎಲ್ಲಾದನ್ನೂ ಒಂದೇ ಸಮನೇ ಒದರಿದರು.
ಈ ಮಧ್ಯೆ ಅವರ ತಂದೆಯ ಬಗ್ಗೆ ಹೇಳಿದರು, ಅವರಮ್ಮ ಹೋದ ಮೇಲೆ ಮನೆಯನ್ನು ನೀಟಾಗಿ ಇಟ್ಟುಕೊಳ್ಳುವವರು ಇಲ್ಲದೆ ಇರುವುದನ್ನು ಎಷ್ಟು ಚೆನ್ನಾಗಿ ಹೇಳಿದರು ಎಂದರೆ ಅದನ್ನು ನನ್ನ ಕೈಯಲ್ಲಿ ವರ್ಣಿಸಲು ಸಾಧ್ಯವಿಲ್ಲ, ಆ ನಂತರ ಅವರ ಸಂಸಾರದಲ್ಲಿ ಎದ್ದ ಬಿರುಗಾಳಿ, ಸಂಕಟಗಳನ್ನು ಹಂಚಿಕೊಂಡರು, ಆ ನಂತರ ಅಲ್ಲೊಂದು ಛತ್ರದ ಬಗ್ಗೆ ಅವರ ತಾತಂದಿರು ಕಟ್ಟಿಸಿದ ಬಗ್ಗೆ ಹೇಳಿದರು.
ತದ ನಂತರ ತಮ್ಮ ದ್ವಿಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರದ ಸಣ್ಣ ಮಾರುಕಟ್ಟೆ, ಅಲ್ಲಲ್ಲಿ ಇದ್ದ ಮಿಲ್ಟ್ರಿ ಹೋಟಲ್, ಬಾರ್‍ಗಳ ಕತೆ, ಕೋವಿಡ್ ಸಂದರ್ಭದಲ್ಲಿ ಜನ ಹೇಗೆ ಜೀವಂತವಾಗಿ ಬದುಕುತ್ತಿದ್ದಾರೆ ಎಂಬುದನ್ನು ನೋಡಲು ಅವರು ಬೀದಿ, ಮಾರುಕಟ್ಟೆಗಳಲ್ಲಿ ತಿರುಗುತ್ತಿದ್ದನ್ನು ಕಣ್ಣಿಗೆ ಕಟ್ಟುವಂತೆ ಹೇಳಿದರು.
ಈ ಮಧ್ಯೆ ಕೆ.ಟಿ.ವೆಂಕಟೇಶ ಎನ್ನುವವರು ಎದುರಿಗೆ ಸಿಕ್ಕರು ಅವರು ನನ್ನನ್ನು ನೋಡಿದವರೇ ಅರೇ ಡಾ||ರಂಗಸ್ವಾಮಿ ಕದಾ ಅಂದರು, ಆಗ ರವಿಯವರು ಕಾದ್ರ ಆತನ ತಂಬುಡು ಅಂದ್ರು, ಕೆ.ಟಿ.ವೆಂಕಟೇಶ್ ನನ್ನ ಮೇಲೆ ಕೆಳಗೆ ನೋಡಿ ಜೆರಾಕ್ಸ್ ಹಂಗೆ ಇದ್ದೀರ ಎಂದಾಗ ಡಾ||ರವಿಯವರು ಬಿದ್ದು ಬಿದ್ದು ನಕ್ಕರು.
ಕೆ.ಟಿ.ವೆಂಕಟೇಶ್ ಹುಟ್ಟಿದ ಕೂಡಲೇ ಅವರ ತಂದೆ ಮರಣ ಹೊಂದಿದರೂ ಅವರ ತಾಯಿ ಎದೆಗುಂದದೆ ಐದು ಮಕ್ಕಳನ್ನು ಸಾಕಿ ಸಲಹಿ ಎಲ್ಲರನ್ನೂ ನೌಕರಿಗೆ ಸೇರಿಸಿದ್ದು, ಒಬ್ಬರು ಆಕಾಶವಾಣಿಯಲ್ಲ ಕೆ.ಟಿ. ಕೃಷ್ಣಕಾಂತ್ ಎಂಬುವವರು ವಾರ್ತೆಗಳನ್ನು ಓದುತ್ತಿದ್ದರಲ್ಲ ಅವರೇ ಈ ಕೆ.ಟಿ.ವೆಂಕಟೇಶ ಅವರ ಅಣ್ಣ ಎಂದು ಹೇಳಿ, ಇನ್ನೊಮ್ಮೆ ಬಾ ಇವರು ಅದ್ಭುತವಾದ ತೋಟ ಮಾಡಿದ್ದಾರೆ ಹೋಗೋಣ ಎಂದು ತಮ್ಮ ಗಾಡಿಯನ್ನು ಚಿಕ್ಕ ಮಾರುಕಟ್ಟೆ ಕಡೆ ತಿರುಗಿಸಿದರು.
ನಂತರ ಅವರ ಮನೆಗೆ ಹೋಗಿ ಅವರ ತಂದೆ ಜೊತೆ ಪೋಟೋ ತೆಗೆಸಿಕೊಂಡು, ಅವರ ಮನೆಯಲ್ಲಿ ಹಾಕಿರುವ ಎಲ್ಲಾ ಪೋಟೋಗಳನ್ನು ನಾನು ನಾನು ಕ್ಲಿಕ್ಕಿಸಿಕೊಂಡೆ, ಅವರ ಮನೆಯೊಂದೆ ಸ್ವಾಂತತ್ರ್ಯಕ್ಕಾಗಿ ಹೋರಾಡಿದವರ ಮನೆಯಂತೆ ಕಂಡಿತು.
ಅಂದು ಕನಕ ಜಯಂತಿ, ಅವರ ಮನೆಯಲ್ಲಿದ್ದ ಕನಕದಾಸರ ಪೋಟೋಗೆ ನಮಿಸಲಾಯಿತು, ಅವರ ತಂದೆ ಬಿದ್ದು ಕಾಲು ಮುರಿದುಕೊಂಡಿರುವುದು, ಅವರನ್ನು ನೋಡಿಕೊಳ್ಳಲು ಅವರು ಇಬ್ಬರು ಆಯಾಗಳನ್ನು ಇಟ್ಟಿರುವುದು, ಅವರ ತಂದೆಯ ಹಠಮಾರಿತನ ಎಲ್ಲಾವನ್ನು ಒಂದು ಸಿನಿಮಾ ಕತೆಯಂತೆ ಹೇಳುತ್ತಾ ನನ್ನನ್ನು ಮಂತ್ರಮುಗ್ಧರನ್ನಾಗಿ ಮಾಡಿಬಿಟ್ಟರು, ಅವರ ತಾಯಿಯನ್ನು ಬಹಳ ನೆನಸಿಕೊಂಡು ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲದಿದ್ದರೆ ಮನೆ ಹೇಗಿರುತ್ತೆ ನೋಡು, ಅಮ್ಮ ಇದ್ದಾಗ ಮನೆ ಎಷ್ಟು ಚೆಂದ ಇರುತಿತ್ತು ಎಂದು ಪದೇ ಪದೇ ಹೇಳಿದ್ದು ನನ್ನನ್ನು ಅಮ್ಮ ಎಂಬುವವರು ಈ ಜಗತ್ತಿನಲ್ಲಿ ಎಷ್ಟು ಪ್ರಸ್ತುತ ಅನ್ನಿಸಿತು.
ಅಲ್ಲೊಂದು ಹೋಟೆಲ್‍ನಲ್ಲಿ ಬಿಸಿ ಬಿಸಿ ಕಾಫಿ ಹೀರುವಾಗಲೂ ಕತೆಗಳನ್ನು ಹೇಳುತ್ತಿದ್ದರು, ನನಗೆ ಪೇಸ್ಟ್, ಬ್ರಸ್ ತೆಗೆದುಕೊಳ್ಳಲು ಬಸ್ಟಾಂಡ್ ಅಂಗಡಿಗೆ ಹೋದಾಗ ಅಂಗಡಿಯವ ನಮ್ಮಸ್ಕಾರಮ್ಮನ್ನ ಅಂತ ತೆಲುಗಿನಲ್ಲಿ ಮಾತನಾಡಿಸಿದರು, ಅವರು ಗಾಡಿಯಲ್ಲಿ ಬರುತ್ತಿರುವಾಗಲೇ ಹಲವಾರು ಜನ ನಮಸ್ಕಾರ ಹಾಕಿದರು, ಇಲ್ಲಿ ಹಿಂಗೆ ಕಣೋ ತೆಲುಗು ಜಾಸ್ತಿ ಮಾತಾನಾಡೋದು ಎಂದು ನಾನು ಉಳಿದುಕೊಂಡಿದ್ದ ಕಡೆ ನನ್ನ ಇಳಿಸಿ ಹೋಗುವ ಮುನ್ನ ಟಾಲ್ ಮ್ಯಾನ್ ಸ್ಮಾಲ್ ಮ್ಯಾನ್ ಪಕ್ಕ ನಿಂತು ಪೋಟೋಗೆ ಪೋಜ್ ಕೊಟ್ಟು ಟಾಟಾ ಕಣೋ ಮಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕೆಂದು ಹೊರಟೇ ಬಿಟ್ಟರು.
ಡಾ||ರವಿ ಕೋಡಿಹಳ್ಳಿ ಒಬ್ಬ ಹರಿದಾಡುವ ಎನ್‍ಸೈಕ್ಲೋಪಿಡಿಯಾ, ಅವರು ಇಂಗ್ಲೆಂಡ್ ಹೋಗಿದ್ದು,ಹಾಗೂ ರಾಜ್ಯದ ಹಲವಾರು ಕಡೆ ಸುತ್ತುತಲೇ ಇರುವವರು, ಅವರ ಜೊತೆ ನಾಲ್ಕೈದು ದಿನ ಕಳೆದು ಒಂದು ಡಾಕ್ಯುಮೆಂಟರಿ ಮಾಡಬೇಕೆಂದುಕೊಂಡಿದ್ದೇನೆ, ಈ ತಿಂಗಳು ಅವರು ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಲಿದ್ದಾರೆ, ಆ ನಂತರ 4 ದಿನ ಅವರ ಜೊತೆ ಕಾಲ ಕಳೆಯುವ ಸುವರ್ಣ ಬರಲಿ.
ಈ ಕತೆ ಬರೆದು ಮುಗಿಸುವುದರೊಳಗೆ ಡಾ.ರವಿ ಕೋಡಿಹಳ್ಳಿಯವರ ತಂದೆ ಚಿಕ್ಕರಾಮಯ್ಯ ನಿಧನ ಹೊಂದಿದ ಸುದ್ದಿ ಬಂತು,ನನಗೆ ತುಂಬಾ ನೋವಾಯಿತು.ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ
ಅವರ ಆತ್ಮಕ್ಕೆ ಶಾಂತಿ ಸಿಗಲಿ. .
-ವೆಂಕಟಾಚಲ.ಹೆಚ್.ವಿ.