ತುಮಕೂರು: ಬೆಳಗಿನ ಚುಮು ಚುಮು ಚಳಿಯಲ್ಲಿ, ತಮಗೆ ನೀಡಿದ ಬಿಳಿ ಹಾಳೆಯ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಮೂಡಿಸುತ್ತಿದ್ದ ಮುಗ್ಧ ಮನಸ್ಸಿನ ಮಕ್ಕಳು ಕಾಣಿಸಿದ್ದು, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ.
ಶಾಲಾ ಸಮವಸ್ತ್ರ ಧರಿಸಿ, ಆವರಣದ ಹುಲ್ಲು ಹಾಸಿನ ಮೇಲೆ ಕುಳಿತು ಮಕ್ಕಳು ಚಿತ್ರ ಬಿಡಿಸುತ್ತಿದ್ದರೆ, ಆಕಾಶದ ನಕ್ಷತ್ರಗಳೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಸಕ್ಕರೆಯ ಮನಸ್ಸಿನ ಅಕ್ಕರೆಯ ಮಕ್ಕಳು ಚಿಲಿಪಿಲಿ ಗುಟ್ಟುತ್ತಾ ಉತ್ಸುಕರಾಗಿ ತಮಗೇ ನೀಡಿದ್ದ ವಿಷಯದ ಕುರಿತಾದ ಚಿತ್ರಗಳನ್ನು ಬಿಡಿಸಿದರು.
ಶಿಕ್ಷಣ ಭೀಷ್ಮ ಡಾ. ಹೆಚ್ ಎಂ. ಗಂಗಾಧರಯ್ಯನವರ ಸ್ಮರಣಾರ್ಥವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ತುಮಕೂರಿನ ರವೀಂದ್ರ ಕಲಾನಿಕೇತನ ಪ್ರಾಂಶುಪಾಲರಾದ ಕೆ ಸಿ ಎಸ್ ಪ್ರಸನ್ನ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ಚಿತ್ರಕಾರನು ತನ್ನ ಕಲಾಕೃತಿಯ ಗುರುತಿಗೆ ಒಂದು ಗುರುತನ್ನು ಇಟ್ಟುಕೊಂಡಿರುತ್ತಾನೆ. ಅದೇ ರೀತಿ ನನ್ನ ಕಲಾಕೃತಿಯ ಗುರುತು ಮೀನಾಗಿದೆ.
ಸಿದ್ಧಾರ್ಥ ಸಂಸ್ಥೆ ಇಂದು ದೊಡ್ದ ಆಲದ ಮರವಾಗಿ ಬೆಳೆದು ನಿಂತಿದೆ. ಆ ಆಲದ ಮರದ ಕೆಳಗೆ ಇಂದು ನಾವಿದ್ದೇವೆ ಎಂದರು. ಪ್ರತಿಯೊಬ್ಬ ಮಗುವೂ ತನ್ನ ಕಲಾಕೃತಿಯನ್ನು ಪೇಪರ್ ಅಥವಾ ಬೇರೆ ಮಾಧ್ಯಮದ ಮೂಲಕ ಚುರುಕಾಗಿ ಚೆಂದವಾಗಿ ಬಿಡಿಸುತ್ತದೆ. ಪ್ರತಿಯೊಂದು ಮಗುವಲ್ಲೂ ವಿಶೇಷವಾದ ಕಲೆ ಅಡಗಿರುತ್ತದೆ. ಕೆಲವು ಬಾರಿ ಮಕ್ಕಳು ಬಿಡಿಸಿದ ಕಲಾಕೃತಿಗಳಿಂದ ನಾವೂ ಕಲಿಯುತ್ತೇವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಕನ್ನಿಕಾಪರಮೇಶ್ವರಿ ಮಾತನಾಡಿ, ಪ್ರತೀ ವರ್ಷ ಈ ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಾ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಮಕ್ಕಳು ಆಗಮಿಸುತ್ತಿದ್ದಾರೆ. ಇಂದು 5000 ಸಾವಿರ ಮಕ್ಕಳು ಆಗಮಿಸಿರುವುದು ಹೆಚ್ಚು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಕೆ ಬಿ ಲಿಂಗೇಗೌಡ, ಅವರು ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್ರೀ ಸಿದ್ಧಾರ್ಥ ತಾಂತ್ತಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ್ ಅವರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಆನಂದಿಸಲು ಸಿಗುವ ಇಂತಹ ಸಂದರ್ಭಗಳು ಸದಾ ಹರ್ಷ ತರುವಂಥದ್ದು ಎಂದರು.
ಕಾರ್ಯಕ್ರಮದಲ್ಲಿ ನಗರದ 50ಕ್ಕೂ ಹೆಚ್ಚು ಶಾಲೆಗಳಿಂದ ಸುಮಾರು 5 ಸಾವಿರ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.
ಶ್ರೀ ಸಿದ್ಧಾರ್ಥ ತಾಂತ್ತಿಕ ಮಹಾವಿದ್ಯಾಲಯದ ಐಎಸ್ಇ ವಿಭಾಗದ ಮುಖ್ಯಸ್ಥರಾದ ಮತ್ತು ಕಾರ್ಯಕ್ರಮದ ಮುಖ್ಯ ಸಂಯೋಜಕರು ಡಾ. ಹೆಚ್ ಎಸ್ ಅನ್ನಪೂರ್ಣ, ಡೀನ್ (ಅಕಾಡೆಮಿಕ್) ಡಾ. ರೇಣುಕಲತಾ ಎಸ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮತ್ತೊಂದು ವಿಶೇಷತೆ ಎಂದರೆ ಶಿಕ್ಷಣ ಭೀಷ್ಮ ದಿವಂಗತ ಎಚ್ ಎಮ್ ಗಂಗಾಧರಯ್ಯನವರ ಭಾವಚಿತ್ರ ಚಿತ್ರಕಲಾವಿದ ನರಸಿಂಹಯ್ಯನವರ ಕುಂಚದಲ್ಲಿ ಅರಳಿತ್ತು.