ಮಕ್ಕಳು ಸಾಧನೆ ಜೊತೆ ಜವಾಬ್ದಾರಿಯನ್ನೂ ಮರೆಯಬಾರದು-ಟಿ.ಬಿ.ಜಯಚಂದ್ರ ಸಲಹೆ

ತುಮಕೂರು: ಮಕ್ಕಳು ಪ್ರತಿಭಾ ಸಾಧನೆಯ ಜೊತೆಗೆ ಕೊನೆಗಾಲದಲ್ಲಿ ತಂದೆತಾಯಿಯ ಯೋಗಕ್ಷೇಮದ ಬಗ್ಗೆಯೂ ಕಾಳಜಿ ವಹಿಸಬೇಕು. ಉತ್ತಮ ಶಿಕ್ಷಣ ಪಡೆದು ವಿದೇಶಗಳಲ್ಲಿ ಉನ್ನತ ಸ್ಥಾನ ಪಡೆಯುವ ಮಕ್ಕಳು ನಂತರ ಹೆತ್ತವರನ್ನೇ ಮರೆಯುವ ಅಮಾನವೀಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮಾಜಿ ಸಚಿವ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ ಹಾಗು ವೂಡೇ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಅವರು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು, ಅವರ ಭವಿಷ್ಯ ಉಜ್ವಲವಾಗಲು ತಂದೆತಾಯಿ ಎಷ್ಟೆಲ್ಲಾ ಶ್ರಮಪಡುತ್ತಾರೆ ಎಂಬುದು ಮಕ್ಕಳಿಗೂ ಗೊತ್ತು. ಹಾಗೇ ಮಕ್ಕಳು ಬದುಕು ರೂಪಿಸಿಕೊಂಡ ನಂತರ ಹೆತ್ತವರ ತ್ಯಾಗವನ್ನು ಮರೆಯಬಾರದು, ಅವರು ಕೊನೆಗಾಲದಲ್ಲಿ ನೆಮ್ಮದಿಯಾಗಿ ಬಾಳುವಂತೆ ನೋಡಿಕೊಳ್ಳುವುದು ನಿಮ್ಮದೇ ಜವಾಬ್ದಾರಿ ಎಂದರು.

ಸಮಾಜದ ಒಳಿತಿಗಾಗಿ ಅನೇಕರು ಸಹಾಯ ಮಾಡುತ್ತಾರೆ. ಈ ಭವನದಲ್ಲಿ ನಾವೆಲ್ಲಾ ಇದ್ದೇವೆಂದರೆ ಅದಕ್ಕೆ ದಿ.ರಂಗಣ್ಣನವರು ದಾನವಾಗಿ ನೀಡಿದ ಈ ಜಾಗ ಕಾರಣ ಅವರನ್ನು ಸ್ಮರಿಸಬೇಕು. ಹಾಗೇ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಮಾಡುತ್ತಾ ಮಕ್ಕಳ ಶಿಕ್ಷಣಕ್ಕೆ ಎಲ್ಲಾರೀತಿಯಲ್ಲೂ ಸಹಾಯ, ಸಹಕಾರ ಮಾಡುತ್ತಾ ಬಂದಿರುವ ವೂಡೇ ಕುಟಂಬದವರ ಸೇವೆಯನ್ನು ಸದಾ ಸ್ಮರಿಸಬೇಕು. ತಾವು ಮುಂದೆ ಸಮಾಜಕ್ಕೆ ಕೊಡುಗೆ ನೀಡಲು ಇವರೆಲ್ಲಾ ಪ್ರೇರಣೆ ಆಗಬೇಕು ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.

ಸಾಹಿತಿ ಪ್ರೊ. ಕೃಷ್ಣೇಗೌಡರು ಮಾತನಾಡಿ, ಈಗಿನ ಮಕ್ಕಳು ನೂರಕ್ಕೆ ನೂರು ಅಂಕ ಪಡೆಯುವಷ್ಟು ಬುದ್ಧಿವಂತರಾಗಿದ್ದಾರೆ. ಮುಂದೆ ಇಂತಹವರ ಪ್ರಮಾಣ ಹೆಚ್ಚಾಗಿ ಸ್ಪರ್ಧೆಯೂ ಹೆಚ್ಚುತ್ತದೆ. ಆಗ ಕೇವಲ ಬುದ್ಧಿವಂತಿಕೆಯು ಸವಾಲು ಎದುರಿಸಲು ಸಾಕಾಗುವುದಿಲ್ಲ. ಮೇಧಾವಿಗಳಾಗಬೇಕು. ಆಗ ಕಲಿಕೆಗಿಂಥಾ ಗ್ರಹಿಕೆ ಮುಖ್ಯವಾಗುತ್ತದೆ. ಮಕ್ಕಳು ಜಾಗತಿಕ ಮಟ್ಟದ ಸ್ಪರ್ಧೆಗಳಿಗೆ ಸಜ್ಜಾಗಬೇಕು ಎಂದರು.

ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಬೇಕು ಎನ್ನುವುದಿತ್ತು. ನಂತರ ಅಕ್ಷರಸ್ಥರಾದರೆ ಸಾಲದು ಪದವಿಧರರಾಗಬೇಕು ಎನ್ನುವ ಹಂತಕ್ಕೆ ಹೋಯಿತು. ನಂತರ ಅದರಲ್ಲಿ ಅತ್ಯಧಿಕ ಅಂಕ ಪಡೆದು ಬುದ್ಧಿವಂತಿಕೆ ಸಾಬೀತು ಮಾಡಬೇಕಾಗಿತ್ತು. ಇನ್ನು ಮುಂದೆ ಜಗತ್ತಿನ ಸವಾಲುಗಳನ್ನು ಎದುರಿಸುವ ಮೇಧಾವಿತನ ಬೆಳೆಸಿಕೊಳ್ಳಬೇಕಾಗುತ್ತದೆ. ಇದು ಶಿಕ್ಷಣದ ಬದಲಾವಣೆಯ ಕ್ರಾಂತಿ ಎಂದು ಹೇಳಿದರು.

ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎನ್ನುವುದು ಸುಳ್ಳು. ಕೆಲಸ ಮಾಡುವವರಿಗೆ ಕೆಲಸ ಇದ್ದೇಇದೆ. ಕೆಲಸವಿಲ್ಲ ಎನ್ನುವುದು ಮೈಗಳ್ಳರು ಹೇಳುವ ಮಾತು. ಯಾರೇ ಆಗಲಿ ಬುದ್ಧಿ ಬಳಿಸಿ ಇಲ್ಲವೆ ದೇಹ ದಂಡಿಸಿ ಕೆಲಸ ಮಾಡಬೇಕು, ಎರಡೂ ಬಳಸದವರು ಬದುಕಿದ್ದೂ ಆತ್ಮಹತ್ಯೆ ಮಾಡಿಕೊಂಡಂತೆ. ದೇಶದಲ್ಲಿ ಈಗ ಅಭಿವೃದ್ಧಿಯ ರೋಗ ಅಂಟಿಕೊಂಡಿದೆ. ಅಭಿವೃದ್ಧಿ ಎಂದರೆ ರಸ್ತೆ ಅಗಲ, ದೊಡ್ಡ ಕಟ್ಟಡಗಳ ನಿರ್ಮಾಣ ಅಲ್ಲ, ಅಭಿವೃದ್ಧಿ ಎಂದರೆ ಸೌಕರ್ಯಗಳ ಜೊತೆಗೆ ಸಮಾಜಲ್ಲಿ ಪ್ರಬುದ್ಧರಾಗಬೇಕು. ನಮ್ಮ ಜನರಿಗೆ ದುಡಿಯುವುದನ್ನು ಮುಖ್ಯವಾಗಿ ಕಲಿಸಿಕೊಡಬೇಕು. ಕೆಲಸ ಮಾಡುವವನ ಕಾವಲಿಗೆ ಒಬ್ಬ, ಅವನ ಕಾವಲಿಗೆ ಅವನ ಮೇಲೊಬ್ಬ ಅಧಿಕಾರಿ ನೇಮಕ ಮಾಡುವುದು ದುರಾದೃಷ್ಟವೇ ಸರಿ ಎಂದು ಪ್ರೊ.ಕೃಷ್ಣೇಗೌಡ ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಡಾಕ್ಟರ್, ಎಂಜಿನಿಯರಿಂಗ್‍ನಂತಹ ಕೋರ್ಸ್‍ಗಳ ಬಗ್ಗೆಯೇ ಯೋಚಿಸದೆ ಬೇರೆ ಕ್ಷೇತ್ರಗಳಲ್ಲಿಯೂ ವಿಫಲವಾದ ಅವಕಾಶಗಳಿವೆ. ಅಂತಹ ಕೋರ್ಸ್‍ಗಳ ಬಗ್ಗೆ ಸಾಧಕರು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಪ್ರತಿಭಾವಂತಾ ಮಕ್ಕಳಿಗೆ ಪುರಸ್ಕಾರ ನೀಡುವುದು ಒಳ್ಳೆಯ ಸಂಪ್ರದಾಯ. ಇದರಿಂದ ಬೇರೆ ಮಕ್ಕಳೂ ಸಾಧನೆ ಮಾಡಲು ಉತ್ತೇಜಿಸಿದಂತಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಕೆಎಎಸ್, ಐಎಎಸ್, ಐಪಿಎಸ್ ಸಾಧಕರನ್ನು ಆಹ್ವಾನಿಸಿ ಅವರ ಸಾಧನೆಯ ಅನುಭವ ಹಂಚಿಕೊಂಡರೆ ಮಕ್ಕಳಿಗೆ ಪ್ರೇರಣೆ ದೊರೆಯುತ್ತದೆ ಎಂದು ಸಲಹೆ ಮಾಡಿದರು.

ಮಹಿಳಾ ಠಾಣೆಯ ವೃತ್ತ ನಿರೀಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ವಂಚನೆಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ಅಂತರ್ಜಾಲವನ್ನು ತಮ್ಮ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬೇಕು, ಅದು ಮಾರಕವಾಗಬಾರದು. ವಿಶೇಷವಾಗಿ ಹೆಣ್ಣುಮಕ್ಕಳು ಜಾಲತಾಣದಲ್ಲಿ ಅಪರಿಚಿತರೊಂದಿಗೆ ಸ್ನೇಹ ಗಳಿಸಬಾರದು, ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು ಎಂದು ಹೇಳಿದರು.

ವೂಡೇ ಪ್ರತಿಷ್ಠಾನದ ಗೌರವಾಧ್ಯಕ್ಷ ಡಬ್ಲ್ಯೂ.ಪಿ. ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ತ್ಯಾಮಗೊಂಡ್ಲು ಮಠದ ಶೇಷಾಚಲ ಅವಧೂತ ಸ್ವಾಮೀಜಿ, ಗೃಹ ಸಚಿವರ ವಿಶೇಷಾಧಿಕಾರಿ ಡಾ.ಸಿ.ನಾಗಣ್ಣ, ಕುಂಚಿಟಿಗ ಒಕ್ಕಲಿಗ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಕೆ.ಶ್ರೀಧರ್, ಉಪಾಧ್ಯಕ್ಷ ಕೆ.ಅಶೋಕ್‍ಕುಮಾರ್, ಕಾರ್ಯದರ್ಶಿ ಎಸ್.ಸತೀಶ್, ಜಂಟಿ ಕಾರ್ಯದರ್ಶಿ ಸಿ.ಬಸವರಾಜು, ಖಜಾಂಚಿ ಬಿ.ಪ್ರಕಾಶ್, ಮುಖಂಡರಾದ ದೊಡ್ಡಲಿಂಗಪ್ಪ, ಎಲ್.ಲಿಂಗಣ್ಣ, ಆಡಳಿತ ಮಂಡಳಿ ಸದಸ್ಯರಾದ ಸುನಂದ ಪಿ.ಕುಮಾರ್, ಎಲ್.ದೇವರಾಜು, ಎಸ್.ಉದಯಕುಮಾರ್, ಎಂ.ವಿ.ಹನುಮಂತಪ್ಪ, ಜಗದೀಶ್‍ಗೌಡ, ಎಸ್.ಕೆ.ನಾಗರಾಜು, ಹೆಚ್.ಎಸ್.ಪ್ರಕಾಶ್, ಮುಕುಂದಪ್ಪ, ಡಿ.ಶಶಿಕುಮಾರ್, ಈರನಾಗಪ್ಪ, ಡಿ.ರಾಜಶೇಖರ್, ಎ.ಎಲ್.ಜಗನ್ನಾಥ್, ಬಿ.ಆರ್.ಮಂಜುನಾಥ್, ಬಿ.ಆರ್.ಸಿದ್ಧಲಿಂಗಪ್ಪ ಮೊದಲಾದವರು ಭಾಗವಹಿಸಿದ್ದರು.

ಎಸ್‍ಎಸ್‍ಎಲ್‍ಸಿ ಮತ್ತು ಪಿಯೂಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು. ಅಲ್ಲದೆ, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *