ತುಮಕೂರು: ತರಗತಿಗಳಲ್ಲಿ ತಂತ್ರಜ್ಞಾನದ ಮೇಲಿನ ಅವಲಂಬನೆ ಪುಸ್ತಕಕ್ಕಿಂತಲೂ ಹೆಚ್ಚಾಗಿರುವುದು ವಿಪರ್ಯಾಸ. ವಿದ್ಯಾರ್ಥಿಗಳಲ್ಲಿ ಚರ್ಚಾ ವಲಯವನ್ನು ವೃದ್ಧಿಸಿ, ಶಿಕ್ಷಣ ಸಮಾನತೆಯನ್ನು ಕಲಿಸಬೇಕಾದ ತರಗತಿಗಳು ಮನುಷ್ಯತ್ವವಿಲ್ಲದ ಮಾನವರನ್ನು ಸೃಷ್ಟಿಸುತ್ತಿರುವುದು ಈ ಯುಗದ ದುರಂತ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜು ಗುರುವಾರ ಆಯೋಜಿಸಿದ್ದ ‘ಕಲಾಸಿರಿ-2024’ ಕಾಲೇಜು ವಾರ್ಷಿಕೋತ್ಸವ ಹಾಗೂ ಜಾನಪದ ಕಲಾಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಮನುಷ್ಯ ಸಂಬಂಧ ಕುಸಿಯುತ್ತಿದೆ. ಮುಖ್ಯವಾಗಿ ಶಿಕ್ಷಕರು-ವಿದ್ಯಾರ್ಥಿಗಳ ನಡುವಿನ ಸಂಬಂಧ ಕುಸಿದಿದೆ. ಶಿಕ್ಷಣದ ಮಹತ್ವ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಯಬೇಕಾದ ಪರಿಸ್ಥಿತಿಯುಂಟಾಗಿದೆ. ಮಾನವಿಕ ಮುಖಗಳನ್ನು ತಿಳಿಯಬೇಕಾದ ಯುವಪೀಳಿಗೆ ಲಾಭಕೋರ ಮನಸ್ಥಿತಿಯಿಂದ ಮೌಲ್ಯಗಳನ್ನು ಪಲ್ಲಟಗೊಳಿಸಿ ವಿಕೃತಿ ಮೆರೆಯುತ್ತಿದ್ದಾರೆ ಎಂದರು.
ಯಂತ್ರಕ್ಕೆ ಮನುಷ್ಯತ್ವವನ್ನು ಕೊಡುವ ಶಿಕ್ಷಣ ನಮ್ಮದಾಗಬೇಕು. ಮಾನವನನ್ನು ಯಂತ್ರವಾಗಿ ಮಾಡುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಾಶವಾಗುತ್ತಿದೆ. ಭಾರತದಲ್ಲಿ ಮಾನವಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕೇವಲ ಶೇ.5 ರಷ್ಟಿದೆ. ನಮ್ಮ ಶಿಕ್ಷಣ ಎಲ್ಲಿಯವರೆಗೆ ಜ್ಞಾನಮುಖಿ, ಉದ್ಯೋಗಮುಖಿ ಎಂಬುದನ್ನು ತಿಳಿಯಬೇಕು. ಶೈಕ್ಷಣಿಕ ವಿಭಾಗೀಕರಣವನ್ನು ವಿದ್ಯಾರ್ಥಿಗಳಲ್ಲಿ ಕಲಿಸಬೇಕು ಎಂದರು.
ವಿವೇಕರಹಿತ ಶಿಕ್ಷಣ ಪ್ರಯೋಗಗಳಾದ ರಾಷ್ಟ್ರೀಯ ಶಿಕ್ಷಣ ನೀತಿ, ರಾಜ್ಯ ಶಿಕ್ಷಣ ನೀತಿಗಳು ವಿದ್ಯಾರ್ಥಿಗಳನ್ನು ಪ್ರಯೋಗದ ವಸ್ತುಗಳಾಗಿ ಬಳಸಿಕೊಳ್ಳುತ್ತಿವೆ. ಶೈಕ್ಷಣಿಕ ಅಸಮಾನತೆಯನ್ನು ನೀಗುವ ಶಿಕ್ಷಣ ನೀತಿ ತರಲು ಯಾವ ಸರ್ಕಾರದಿಂದಲೂ ಸಾಧ್ಯವಾಗಲಿಲ್ಲ. ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕೆಂಬ ನಿಯಮ ಮಾಡಿದರೆ ನ್ಯಾಯಾಲಯಗಳ ಮೆಟ್ಟಿಲೇರುವ ಶಾಲಾ ಕಾಲೇಜುಗಳಿಗೆ ಮನ್ನಣೆ ಕೊಡುವ ದುಷ್ಟ ಮನಸ್ಥಿತಿಯವರು ಸೃಷ್ಟಿಯಾಗಿದ್ದಾರೆ ಎಂದರು.
ಜಾತಿ, ಧರ್ಮ, ಲಿಂಗ, ವರ್ಗ, ವರ್ಣಗಳ ತಾರತಮ್ಯವನ್ನು ಹೋಗಲಾಡಿಸಿ ಆತ್ಮಸ್ಥೈರ್ಯ ಕೊಡುವ, ಸೌಹಾರ್ದತೆಯನ್ನು ಸಾರುವ, ಶೈಕ್ಷಣಿಕ ಬಿಕ್ಕಟ್ಟುಗಳನ್ನು ಬಗೆಹರಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು. ವಿದ್ಯಾವಂತರು ಹೆಚ್ಚಾದಂತೆ ಜಾತಿವಾದಿಗಳು ಬೆಳೆಯುತ್ತಿದ್ದಾರೆ. ಸಮಾನತೆಯ ಮುಖವಾಡಗಳನ್ನು ಧರಿಸಿ ಅಸಮಾನತೆಯ ನೆರಳಡಿ ಬದುಕುತ್ತಿರುವ ಅವಿವೇಕಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಶಿಸ್ತುಬದ್ಧ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಹೊರಬರಬೇಕು. ಸ್ಥಾನದಿಂದ ಬರುವ ಗೌರವ ಅಲ್ಪಾವಧಿ. ವ್ಯಕ್ತಿತ್ವದಿಂದ ಬರುವ ಗೌರವ, ಸಿಗುವ ಮನ್ನಣೆ ಶಾಶ್ವತ ಎಂದರು.
ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಪ್ರಾಸ್ತಾವಿಕನುಡಿಗಳನ್ನಾಡಿ ಸ್ವಾಗತಿಸಿದರು.
ಸಾಮಾಜಿಕ ಚಿಂತಕ ಹಾಗೂ ಜನಪರ ಹೋರಾಟಗಾರ ಕೆ. ದೊರೈರಾಜು ಹಾಗೂ ಕೈಗಾರಿಕೋದ್ಯಮಿ ಎಚ್. ಜಿ. ಚಂದ್ರಶೇಖರ್ ಅವರಿಗೆ ವಿವಿ ಕಲಾ ಕಾಲೇಜಿನ ವಾರ್ಷಿಕ ‘ಕಲಾಸಿರಿ-2024’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಲನಚಿತ್ರ ನಟ ಕುಮಾರ್ ಗೋವಿಂದ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್ ‘ಕಲಾಸಿರಿ-2024’ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಮಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್. ಕೆ. ಕಲಾಸಿರಿ ಸಾಂಸ್ಕøತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಸೋಲಿಗರ ಬಸವರಾಜು ಮತ್ತು ಸಂಗಡಿಗರಿಂದ ಸೋಲಿಗರ ಪುಷ್ಪಮಾಲೆ ಕಲಾ ತಂಡ-ಕಲಾ ಪ್ರದರ್ಶನ, ಪ್ರದೀಪ್ ಎಸ್. ಮತ್ತು ಸಂಗಡಿಗರಿಂದ ಜಾನಪದ ಮೇಳ, ತಿಪ್ಪೇಸ್ವಾಮಿ ಮತ್ತು ಸಂಗಡಿಗರಿಂದ ಬೇಡರ ಪಡೆ ನೃತ್ಯ, ನಿಸರ್ಗ ಗೋವಿಂದರಾಜ್ ಅವರಿಂದ ಬಯಲು ಸೀಮೆಯ ಛಾಯಾಚಿತ್ರ ಪ್ರದರ್ಶನ, ದಿಬ್ಬೂರು ಮಂಜಣ್ಣ ಮತ್ತು ಸಂಗಡಿಗರಿಂದ ಡಾ. ರಾಜ್ ಕುಮಾರ್ ಗೀತಗಾಯನ, ವಿದ್ವಾನ್ ನಾಗರಾಜ್ ಕೆ. ಅವರಿಂದ ಭರಟನಾಟ್ಯ, ರುದ್ರೇಶ್ ಮತ್ತು ಸಂಗಡಿಗರಿಂದ ವೀರಗಾಸೆ, ಶಶಿಕುಮಾರ್ ಮತ್ತು ಸಂಗಡಿಗರಿಂದ ಕಂಸಾಳೆ ಪ್ರದರ್ಶನ ಹಬ್ಬದ ವಾತಾವರಣ ಸೃಷ್ಟಿಮಾಡಿದವು.
ವಿವಿ ಕಲಾ ಕಾಲೇಜಿನ ಸಾಂಸ್ಕøತಿಕ ಸಮಿತಿಯ ಸಂಯೋಜಕ ಡಾ. ರವಿ ಸಿ. ಎಂ., ಕಲಾಸಿರಿ ವಾರ್ಷಿಕೋತ್ಸವದ ಸಮಿತಿಯ ಡಾ. ಗುಂಡೇಗೌಡ, ಡಾ. ಶಿವಣ್ಣ ಬೆಳವಾಡಿ, ಡಾ. ಆರ್. ಸುದೀಪ್ ಕುಮಾರ್ ಉಪಸ್ಥಿತರಿದ್ದರು.