ಬಿ.ಹೆಚ್.ರಸ್ತೆಯ ಪುಟ್‍ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ

ತುಮಕೂರು- ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಆಯುಕ್ತೆ ಬಿ.ವಿ. ಅಶ್ವಿಜ ಅವರ ಆದೇಶದ ಮೇರೆಗೆ ಸೇಫ್ ಫುಟ್‍ಪಾತ್ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಬಿ.ಹೆಚ್. ರಸ್ತೆಯ ಫುಟ್‍ಪಾತ್ ಮೇಲೆ ಅತ್ರಿಕಮಣ ಮಾಡಿ ಇಟ್ಟುಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

ನಗರದ ಬಿ.ಹೆಚ್. ರಸ್ತೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಆರ್‍ಟಿಓ ಕಚೇರಿ ವರೆಗೆ ಫುಟ್‍ಪಾತ್ (ಪಾದಚಾರಿ ಮಾರ್ಗ)ನ್ನು ವ್ಯಾಪಾರ ನಿಷೇಧ ವಲಯ ಎಂದು ಘೋಷಿಸಲಾಗಿದೆ. ಆದರೂ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪಾಲಿಕೆ ವತಿಯಿಂದ ಇಂದು ಕೈಗೊಳ್ಳುವ ಮೂಲಕ ಸೇಫ್ ಫುಟ್‍ಪಾತ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಉಪ ಆಯುಕ್ತ ಗಿರೀಶ್ ಹಾಗೂ ಕಾರ್ಯಪಾಲಕ ಇಂಜಿನಿಯರ್ ವಿನಯಕುಮಾರ್ ಅವರ ನೇತೃತ್ವದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಆರ್‍ಟಿಓ ಕಚೇರಿ ವರೆಗೆ ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ನಂತರ ಮಾತನಾಡಿದ ಆಯುಕ್ತೆ ಅಶ್ವಿಜ ಅವರು, ತುಮಕೂರು ಮಹಾನಗರ ಪಾಲಿಕೆಯಿಂದ ವಿನೂತನವಾಗಿ ಸೇಫ್ ಫುಟ್‍ಪಾತ್ ಅಭಿಯಾನವನ್ನು ಕೈಗೊಳ್ಳಲಾಗಿದ್ದು. ಈ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. ಪಾದಚಾರಿಗಳು ನಡೆದುಕೊಂಡು ಹೋಗಬೇಕಾದರೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ ಎಂದರು.

ಇಂದು ಬಿ.ಹೆಚ್. ರಸ್ತೆಯಿಂದ ಈ ಅಭಿಯಾನ ಕೈಗೊಳ್ಳಲಾಗಿದ್ದು, ಪ್ರತಿನಿತ್ಯವೂ ಒಂದೊಂದು ರಸ್ತೆಯಲ್ಲಿ ಫುಟ್‍ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಲಿದೆ. ಎಂ.ಜಿ. ರಸ್ತೆ, ಅಶೋಕ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅನಧಿಕೃತ ಫುಟ್‍ಪಾತ್ ಅಂಗಡಿಗಳ ತೆರವುಗೊಳಿಸಲಾಗುವುದು ಎಂದರು.

ಬಿ.ಹೆಚ್. ರೋಡ್‍ನಲ್ಲಿರುವ ಫುಟ್‍ಪಾತ್ ಅಂಗಡಿಗಳಿಗೆ ದೋಬಿಘಾಟ್‍ನಲ್ಲಿ ವೆಂಡಿಂಗ್ ಹಂಚಿಕೆ ಮಾಡಲಾಗಿದೆ. ಅವರು ಅಲ್ಲಿಯೇ ಅಂಗಡಿಗಳನ್ನು ನಡೆಸಬೇಕು. ಆದರೆ ಈ ಹಿಂದೆ ಅಲ್ಲಿಗೆ ಹೋಗಿದ್ದವರು ಮತ್ತೆ ವಾಪಸ್ ಬಿ.ಹೆಚ್. ರಸ್ತೆ ಬಂದಿದ್ದಾರೆ. ಇದರಿಂದ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಇದನ್ನು ಮನಗಂಡು ಈ ಅಭಿಯಾನದ ಮೂಲಕ ತೆರವುಗೊಳಿಸಲಾಗುತ್ತಿದೆ ಎಂದರು.
ಉಪ ಆಯುಕ್ತ (ಆಡಳಿತ) ಗಿರೀಶ್ ಮಾತನಾಡಿ, ಬಿ.ಹೆಚ್. ರಸ್ತೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಆರ್‍ಟಿಓ ಕಚೇರಿ ವರೆಗೆ ಫುಟ್‍ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ಮಾರ್ಗವನ್ನು ವ್ಯಾಪಾರ ನಿಷೇಧ ವಲಯ ಎಂದು ಘೋಷಿಸಲಾಗಿದೆ ಎಂದರು.

ಈಗಾಗಲೇ ಪಾಲಿಕೆ ವತಿಯಿಂದ ದೋಬಿಘಾಟ್ ಬಳಿ ಪುಟ್‍ಪಾತ್ ವೆಂಡಿಂಗ್ ಹಂಚಿಕೆ ಮಾಡಲಾಗಿದೆ. ಈ ವೆಂಡಿಂಗ್ ಅಂಗಡಿಗಳಲ್ಲೇ ವ್ಯಾಪಾರ ಮಾಡಬೇಕು. ಆದರೆ ಫುಟ್‍ಪಾತ್ ವ್ಯಾಪಾರಿಗಳು ಅನಧಿಕೃತವಾಗಿ ಪಾದಚಾರಿ ಮಾರ್ಗಗಳಲ್ಲಿ ಅಂಗಡಿಗಳನ್ನು ತೆರೆದು ತೊಂದರೆ ನೀಡುತ್ತಿದ್ದಾರೆ. ಅಲ್ಲದೆ ಅಂಗಡಿಗಳನ್ನು ಅಲ್ಲಿಯೇ ಬಿಟ್ಟು ಅದಕ್ಕೆ ಕವರ್ ಹಾಕಿ ಮುಚ್ಚುತ್ತಾರೆ. ಇದರಿಂದ ಮಳೆ ಬಂದಾಗ ಕವರ್ ಮೇಲೆ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹಾಗಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.

Leave a Reply

Your email address will not be published. Required fields are marked *