ಮುಖ್ಯಮಂತ್ರಿಗಳ ಜಿಲ್ಲೆ ಭೇಟಿ: ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ

ತುಮಕೂರು : ಪ್ರಸಕ್ತ ಮಾಹೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ತುಮಕೂರು ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಂದು ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ವಿತರಿಸಲು ಯೋಜಿಸಿರುವ ಸವಲತ್ತುಗಳು ಹಾಗೂ ಉದ್ಘಾಟನೆಗೆ ಸಿದ್ಧವಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿದರು.

  ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ವಿವಿಧ ಇಲಾಖೆಗಳ ಉದ್ಘಾಟನೆಗೆ ಸಿದ್ಧವಿರುವ ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖಾ ಮುಖ್ಯಸ್ಥರು ಖುದ್ದು ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿ  ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದರು. 

ಸವಲತ್ತುಗಳ ವಿತರಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ಫಲಾನುಭವಿಗಳ ಆಯ್ಕೆ ತ್ವರಿತಗತಿಯಲ್ಲಿ ಆಗಬೇಕು. ಫಲಾನುಭವಿ ಆಯ್ಕೆಗೆ ಸಂಬಂಧಿಸಿದಂತೆ ಕಡತಗಳು ಶಾಸಕರು ಅಥವಾ ಸಿಇಓ ಅಥವಾ ಜಿಲ್ಲಾಧಿಕಾರಿಗಳ ಬಳಿ ವಿಲೇವಾರಿಗೆ ಬಾಕಿ ಇದ್ದಲ್ಲಿ ಇಲಾಖಾ ಮುಖ್ಯಸ್ಥರು ಖುದ್ದು ನಿಗಾವಹಿಸಿ  ಕಡತಗಳ ವಿಲೇವಾರಿ ಮಾಡಬೇಕು.  ಜನವರಿ 15ರೊಳಗಾಗಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು ಎಂದು ತಿಳಿಸಿದರು. 

ಲ್ಯಾಪ್‍ಟಾಪ್ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಮಿಕರ ಮಕ್ಕಳಿಗೆ ಗುರುತಿನಚೀಟಿಯನ್ನು  ಕಡ್ಡಾಯವಾಗಿ ನೀಡುವಂತೆ ಮತ್ತು ಲ್ಯಾಪ್‍ಟಾಪ್ ಸಂಗ್ರಹ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮಧುಗಿರಿ ಹಾಗೂ ತುಮಕೂರು ಉಪವಿಭಾಗದ ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದರು. 

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಇಲಾಖೆಗಳ ಮಳಿಗೆಗಳ ಪ್ರದರ್ಶನ ಮಾಹಿತಿ  ಒದಗಿಸುವಂತೆ ಮತ್ತು ರೂಟ್ ಮ್ಯಾಪ್‍ಅನ್ನು ಸಿದ್ಧಪಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಓ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಸೇರಿದಂತೆ ವಿವಿಧ ಇಲಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *