ತುಮಕೂರು : ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಪ್ರಮುಖ ಯೋಜನೆಯಾದ ಸಮಗ್ರ ನಗರ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್(ICMCCC-Integrated City Management Command and Control Centre)ಗೆ ಪ್ರಥಮ ಪ್ರಶಸ್ತಿ ಲಭಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಅಶ್ವಿಜ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ.
ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದಿಂದ ಆಯೋಜಿತ ಮಾರ್ಚ್ 19 ರಿಂದ 21ರವದರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ದೇಶದ 100 ಸ್ಮಾರ್ಟ್ ಸಿಟಿ ಭಾಗವಹಿಸಿದ್ದ 10ನೇ ಸ್ಮಾರ್ಟ್ ಸಿಟೀಸ್ ಇಂಡಿಯಾ-2025 ಮತ್ತು 32ನೇ ಕನ್ವರ್‍ಜೆನ್ಸ್ ಇಂಡಿಯಾ 2025 ಎಕ್ಸ್ಪೋ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ತುಮಕೂರು ನಗರವು ಕರ್ನಾಟಕದ ಸ್ಮಾರ್ಟ್ ಸಿಟಿಗಳಲ್ಲಿ ಐಸಿಎಂಸಿಸಿಯನ್ನು ಸ್ಥಾಪಿಸಿ ಕಾರ್ಯಾರಂಭ ಮಾಡಿದ ಪ್ರಥಮ ಸ್ಮಾರ್ಟ್ ನಗರವಾಗಿದ್ದು, ಇ-ಆಡಳಿತದ ಗುರಿಯೊಂದಿಗೆ ನಗರದ ಕಾರ್ಯಾಚರಣೆಗಳು, ಸಂಚಾರ ನಿಯಮ ಉಲ್ಲಂಘನೆಗಾಗಿ ಇ-ಚಲನಿಂಗ್ ವ್ಯವಸ್ಥೆ, ಘನ ತ್ಯಾಜ್ಯ ಸಂಗ್ರಹಣಾ ವಾಹನಗಳ ಸಮರ್ಥ ಸ್ಥಳ ಟ್ರ್ಯಾಕಿಂಗ್ ವ್ಯವಸ್ಥೆಯಿಂದ ಪರಿಣಾಮಕಾರಿ ಕಸ ಸಂಗ್ರಹಣೆ, ದಿನದ 24 ಗಂಟೆಗಳಲ್ಲಿ ನಗರದ ನಿಗಾವಣೆಗಾಗಿ ಮೊಬೈಲ್ ಕಣ್ಗಾವಲು ವಾಹನಗಳು (MSVಗಳು), ಸಾರ್ವಜನಿಕ ಪ್ರಕಟಣೆಗಳು/ಎಚ್ಚರಿಕೆಗಳಿಗಾಗಿ ಸಾರ್ವಜನಿಕ ವಿಳಾಸ ವ್ಯವಸ್ಥೆ (PAS) ಜೊತೆಗೆ ಡ್ಯಾಶ್ ಬೋರ್ಡ್ ಕ್ಯಾಮೆರಾಗಳು ಮತ್ತು Pan Tilt Zoom (PTZ) ಕ್ಯಾಮೆರಾಗಳು ತ್ವರಿತ ಸೇವೆಗಳನ್ನು ಹತೋಟಿಗೆ ತಂದಿವೆ.
ಐಸಿಎಂಸಿಸಿ ಕೇಂದ್ರವು ತುರ್ತು ಪ್ರತಿಕ್ರಿಯೆ ವ್ಯವಸ್ಥೆ, ಚುರುಕು ಸಂದೇಶ ರವಾನೆ, ವ್ಯತ್ಯಯಗೊಳಿಸಬಹುದಾದ ಸಂದೇಶ ರವಾನೆ ವ್ಯವಸ್ಥೆ, ಸಾರ್ವಜನಿಕ ಪ್ರಕಟಣೆಗಳು, ಪರಿಸರ ಮೇಲ್ವಿಚಾರಣಾ ವ್ಯವಸ್ಥೆಯನ್ನು ತುಮಕೂರು ಒನ್ ವ್ಯವಸ್ಥೆಯೊಂದಿಗೆ ಪೂರೈಸುತ್ತದೆ. ಅಲ್ಲದೆ ನಗರದ ಆಡಳಿತ ಕಚೇರಿ/ಪ್ರಾಧಿಕಾರಗಳಿಗೆ ಅವುಗಳ ದೈನಂದಿನ ಕಾರ್ಯಚಟುವಟಿಕೆಗಳ ಸಮಯದಲ್ಲಿ ಹಾಗೂ ತುರ್ತು ಸಂದರ್ಭಗಳಲ್ಲಿ ಬೆಂಬಲ ವ್ಯವಸ್ಥೆಯಾಗಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಐಸಿಎಂಸಿಸಿ ವ್ಯವಸ್ಥೆಯಡಿ ವಿಶೇಷವಾಗಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಗರದಾದ್ಯಂತ ನಿಗಾವಹಿಸಲಾಗುತ್ತಿದೆ.
ಐಸಿಎಂಸಿಸಿ ವ್ಯವಸ್ಥೆಯಿಂದ ಇತ್ತೀಚೆಗೆ ನಗರದ ಪ್ರಮುಖ ವೃತ್ತದಲ್ಲಿ ರಾತ್ರಿ ವೇಳೆಯಲ್ಲಿ ಬಸ್‍ಗಾಗಿ ಕಾಯ್ದು ಕುಳಿತಿದ್ದ ದಂಪತಿಗಳೊಂದಿಗೆ ಮತ್ತೊಬ್ಬ ವ್ಯಕ್ತಿ ಅನುಚಿತವಾಗಿ ವರ್ತಿಸುತ್ತಿರುವುದನ್ನು ಸಿಸಿಟಿವಿ ಮೂಲಕ ಗಮನಿಸಿದ ಕೂಡಲೇ ಅವರಿಗೆ ಸಾರ್ವಜನಿಕ ಪ್ರಕಟಣೆ ಮೂಲಕ ಯಾವುದೇ ತುರ್ತು ಸಂದರ್ಭ ಎದುರಾಗಿದ್ದಲ್ಲಿ ಎಸ್‍ಓಎಸ್ ಬಟನ್ ಒತ್ತುವಂತೆ ಸೂಚನೆ ನೀಡಿ ಅವರಿಗೆ ನಗರವು ಸರಕ್ಷಿತವಾಗಿದೆ ಎಂದು ಮನದಟ್ಟು ಮಾಡಿದ ಘಟನೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇತ್ತೀಚೆಗೆ ನಗರದ ಶಿರಾಗೇಟ್ ರಸ್ತೆಯಲ್ಲಿ ಅನಾರೋಗ್ಯ ಪೀಡಿತ ದಾರಿಹೋಕರೊಬ್ಬರು ಅಸ್ವಸ್ಥರಾಗಿ ನರಳಾಡುತ್ತಿರುವುದನ್ನು ಸಿಸಿಟಿವಿ ಸರ್ವೆಲೆನ್ಸ್ ಮೂಲಕ ಗಮನಿಸಿದ ಐಸಿಎಂಸಿಸಿ ಸಿಬ್ಬಂದಿ ಆರೋಗ್ಯ ಇಲಾಖೆಯ 108 ಆಂಬುಲೆನ್ಸ್‍ಗೆ ಮಾಹಿತಿ ನೀಡಿ ಕೂಡಲೇ ಸ್ಥಳಕ್ಕೆ ಕಳುಹಿಸುವ ಮೂಲಕ ಅಗತ್ಯ ತುರ್ತು ಚಿಕಿತ್ಸೆಗೆ ನೆರವಾಗಿರುವುದು, ಮರಳೂರು ದಿಣ್ಣೆಯಲ್ಲಿ ಕೌಟುಂಬಿಕ ಕಲಹದಿಂದ ಗೃಹಿಣಿಯೊಬ್ಬರು ಎಸ್‍ಓಎಸ್ ಪ್ಯಾನಿಕ್ ಬಟನ್ ಮೂಲಕ ಐಸಿಎಂಸಿಸಿಯನ್ನು ಸಂಪರ್ಕಿಸಿ ಸೂಕ್ತ ರಕ್ಷಣೆ ಕೋರಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸುರಕ್ಷತೆಗೆ ಧಾವಿಸಿರುವುದನ್ನು ಉದಾಹರಿಸಬಹುದು.
ಪ್ರಶಸ್ತಿ ಸ್ವೀಕಾರ :-
ನಗರದಲ್ಲಿ ತನ್ನ ಕಾರ್ಯಾಚರಣೆಗಳೊಂದಿಗೆ ವಾಸ್ತವಿಕವಾಗಿ ನಗರವನ್ನು ‘ಸ್ಮಾರ್ಟ್” ಆಗುವಂತೆ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ಅನುಷ್ಟಾನಗೊಳಿಸಿರುವ ನಗರದ ಸುರಕ್ಷತೆ ಮತ್ತು ಭದ್ರತೆಗೆ ವಿವಿಧ ರೀತಿಯಲ್ಲಿ ಕಾರ್ಯಾಚರಣೆಗೊಳಿಸುತ್ತಿರುವ ಐಸಿಎಂಸಿಸಿಗೆ ಪ್ರಥಮ ಪ್ರಶಸ್ತಿ ಲಭಿಸಿದ್ದು ಮಾರ್ಚ್ 21ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿಜ ಬಿ.ವಿ. ಪ್ರಶಸ್ತಿ ಸ್ವೀಕರಿಸಿದ್ದಾರೆ.
ಪ್ರಶಸ್ತಿ ಪಡೆದ ಬಿ.ವಿ.ಅಶ್ವಿಜ ಅವರು ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಅಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು, ನಗರದ ನಾಗರೀಕರು, ಸಿಬ್ಬಂದಿ ವರ್ಗದವರಿಗೆ ಮತ್ತು ನಗರದ ಸುವ್ಯವಸ್ಥೆಗೆ ಸಹಕರಿಸುತ್ತಿರುವ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.