ಕಾಂಗ್ರೆಸ್ ಕಚೇರಿಯಲ್ಲಿ ಜವಹರಲಾಲ್ ನೆಹರು ಪುಣ್ಯ ಸ್ಮರಣೆ

ತುಮಕೂರು:ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಚಾಚಾ ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾಂಗ್ರೆಸ್ ಮುಖಂಡರು ಗೌರವ ಸಮರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಶ್ರೀಮಂತ ಮನೆತನದಲ್ಲಿ ಹುಟ್ಟಿ,ಲಂಡನ್‍ನಲ್ಲಿ ವಿದ್ಯಾಭ್ಯಾಸ ಮಾಡಿ,ಪ್ರಪಂಚದ ಹಲವು ಭಾಷೆಗಳ ಪರಿಚಯವಿದ್ದ ನೆಹರು,ತಮ್ಮ ಹಲವಾರು ಯೋಜನೆಗಳ ಮೂಲಕ ಅಧುನಿಕ ಭಾರತವನ್ನು ಸದೃಢವಾಗಿ ಕಟ್ಟಿದ ಮಹನೀಯರು ಎಂದರು.

ದೇಶಕ್ಕೆ ಸ್ವಾತಂತ್ರ ಲಭಿಸಿದಾಗ ಒಂದು ಗುಂಡು ಸೂಜಿಗೂ ವಿದೇಶದ ಮೇಲೆ ಅವಲಂಬಿತವಾಗಬೇಕಿದ್ದ ಭಾರತವನ್ನು ಕೃಷಿ, ಕೈಗಾರಿಕೆ,ವಿಜ್ಞಾನ, ತಂತ್ರಜ್ಞಾನದ ಮೂಲಕ ಬಲಿಷ್ಠವಾಗಿ ಕಟ್ಟಲು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು, ಜನರಿಗೆ ಅನ್ನ,ಬಟ್ಟೆ, ಇರಲು ಸೂರು ನೀಡುವ ಮಹತ್ವದ ಯೋಜನೆಗಳನ್ನು ರೂಪಿಸಿದ ನೆಹರು,ಅಲಿಪ್ತ ನೀತಿಗಳ ಮೂಲಕ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಬಲಿಷ್ಠ ರಾಷ್ಟ್ರಗಳು,ಸಣ್ಣ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸಂತಹ ವಾತಾವರಣ ಸೃಷ್ಟಿಸಿದ್ದರು.ಈ ದೇಶದಲ್ಲಿ ಜಮೀನುದಾರರಿಗೆ, ತೆರಿಗೆ ಕಟ್ಟುವವರಿಗೆ ಪದವಿಧರರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು,ಅಂಬೇಡ್ಕರ್ ಅವರ ಕೊರಿಕೆಯಂತೆ ಎಲ್ಲಾ ಜನಸಾಮಾನ್ಯರಿಗೂ ವಿಸ್ತರಿಸಿದವರು ನೆಹರು. ಇವರಿಗೆ ಮಕ್ಕಳು ಮತ್ತು ಗುಲಾಬಿ ಎಂದರೆ ಅಚ್ಚುಮೆಚ್ಚು.ಹಾಗಾಗಿಯೇ ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾ ಗುತ್ತದೆ.ಇಂತಹ ದೂರದೃಷ್ಟಿ ಇಟ್ಟುಕೊಂಡು ದೇಶಕ್ಕೆ ಭದ್ರ ಬುನಾದಿ ಹಾಕಿದ ನೆಹರು ಅವರನ್ನು ಕೆಲವರು ಬಾಯಿ ಚಪಲ ತೀರಿಸಿಕೊಳ್ಳಲು ಟೀಕಿಸುತ್ತಾರೆ.ಅಂತಹವರು ಒಮ್ಮೆ ನೆಹರು ಅವರ ಮನೆತನ,ಅವರ ವಿದ್ವತ್ ಎಲ್ಲವನ್ನು ಅರಿತು ಮಾತನಾಡಲಿ, ಕೇವಲ ಆಂಧ ಭಕ್ತರ ಬಾಯಲ್ಲಿ ವಿಶ್ವಗುರು ಆಗುವುದಲ್ಲ,ಜನಸಾಮಾನ್ಯರ ಬಾಯಲ್ಲಿ ವಿಶ್ವಗುರು ಆಗಿದ್ದವರು ನೆಹರು ಎಂದು ಚಂದ್ರಶೇಖರಗೌಡ ನುಡಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮುಖಂಡ ಷಣ್ಮುಖಪ್ಪ ಮಾತನಾಡಿ,ಇಂದು ಭಾರತ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಮಾನವ ಸಂಪನ್ಮೂಲವನ್ನು ಪಡೆದಿದ್ದರೆ ಅದಕ್ಕೆ ನೆಹರು ಅವರು ರೂಪಿಸಿದ ಯೋಜನೆಗಳ ಕಾರಣ,ಹತ್ತಾರು ಐಐಟಿಗಳು,ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೂಲಕ ಜನರಿಗೆ ಜಗತ್ತಿನ ಜ್ಞಾನ ದೊರೆಯುವಂತೆ ಮಾಡಿದರು.ಇದರ ಫಲವಾಗಿ ಇಂದು ಇಡೀ ವಿಶ್ವದಲ್ಲಿಯೇ ಭಾರತದ ಡಾಕ್ಟರ್ಸ್, ಇಂಜಿನಿಯರ್ಸ್‍ಗಳನ್ನು ಕಾಣಬಹುದು.ಕೈಗಾರಿಕೆಗಳ ಮೂಲಕ ದುಡಿಯುವ ವರ್ಗಕ್ಕೆ ಉದ್ಯೋಗ ನೀಡಿದ ನೆಹರು, ಭಾರತವನ್ನು ಜಗತ್ತಿನಲ್ಲಿಯೇ ಅಭಿವೃದ್ದಿಶೀಲ ರಾಷ್ಟ್ರವಾಗಿ ರೂಪಿಸಿದ್ದರು ಎಂದರು.
ಮುಖಂಡ ನಟರಾಜಶೆಟ್ಟಿ ಮಾತನಾಡಿ,ಚಾಚಾ ನೆಹರು ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಶಾಲೆಗಳಲ್ಲಿ ಮಕ್ಕಳಿಗೆ ವೇಷ, ಭುಷಣ ಸ್ಪರ್ಧೆಗಳಲ್ಲಿ ಹೆಚ್ಚು ಜನರು ನೆಹರು ಅವರ ವೇಷ ಧರಿಸುತಿದ್ದ ಕಾಲವೊಂದಿತ್ತು. ತಮಗೆ ಪ್ರಿತಾರ್ಜಿತವಾಗಿ ಬಂದ ಅಂದೇ ನೂರಾರು ಕೋಟಿ ಬೆಲೆ ಬಾಳುವ ತ್ರಿಮೂರ್ತಿ ಭವನವನ್ನು ಸರಕಾರಕ್ಕೆ ದಾನ ನೀಡಿ, ಜನಸಾಮಾನ್ಯರಂತೆ ಬದುಕಿದ ನೆಹರು, ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್, ಮಹೇಶ್,ಮುಖಂಡರಾದ ಸಿಮೆಂಟ್ ಮಂಜುನಾಥ್, ಕೆಂಪರಾಜು,ಸಂಜೀವಕುಮಾರ್, ಸುಜಾತ, ನಾಗಮಣಿ, ಮುಬೀನ,ಶಿವಾಜಿ, ನ್ಯಾತೇಗೌಡ,ಕೆಂಪಣ್ಣ,ಶ್ರೀನಿವಾಸ್ ಆದಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *