ತುಮಕೂರು: ಚಲನಚಿತ್ರ ಒಂದು ಪ್ರಬಲ ಮಾಧ್ಯಮವಾಗಿದ್ದು, ಆ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಶಾಂತಿ, ಸೌಹಾರ್ಧ ವಾತಾವರಣ ನಿರ್ಮಾಣ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಹಾಲಪ್ಪ ಪ್ರತಿಷ್ಠಾನ ನಗರದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಮಾಡಲು ಮುಂದಾಗಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸೆಂಟ್‍ಮೇರಿಸ್ ಶಾಲೆಯ ಮಕ್ಕಳಿಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಕಿರು ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಕೆಲ ಚಿತ್ರಗಳ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಮಕ್ಕಳಲ್ಲಿ ಚಿಕ್ಕಂದಿನದಲ್ಲಿಯೇ ಉದಾತ್ತ ಗುಣಗಳನ್ನು ಬೆಳೆಸುವುದರಿಂದ ಅವರನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸಬಹುದು. ಹಾಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಶಾಂತಿ, ಸೌಹಾರ್ಧ, ಪರಿಸರ ಹಾಗು ಶಿಕ್ಷಣ ವ್ಯವಸ್ಥೆ ಕುರಿತು ತಯಾರಿಸಿರುವ ಇಂಡೋನೇಷಿಯಾ, ಸೌತಕೋರಿಯ ದೇಶಗಳ ಕಿರುಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಸಿನಿಮಾ ನೀಡಿ, ಒಳ್ಳೆಯ ವಿಮರ್ಶೆ ಬರೆದುಕೊಡುವ ಮೂವರು ಮಕ್ಕಳಿಗೆ ಹಾಲಪ್ಪ ಪೌಂಡೇಷನ್ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದರು.

ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳೆವಣಿಗೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ನಗರದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಈ ರೀತಿಯ ಕಿರು ಚಿತ್ರಗಳನ್ನು ಪ್ರದರ್ಶಿಸಲು ಹಾಲಪ್ಪ ಪ್ರತಿಷ್ಠಾನ ಮುಂದಾಗಿದೆ. ಇರಾನ್, ಜಪಾನ್, ರಷ್ಯದಂತಹ ದೇಶಗಳಲ್ಲಿ ತಯಾರಾದ ಪ್ರಮುಖ ವಿಚಾರಗಳನ್ನು ಒಳಗೊಂಡ ವಿಚಾರಗಳ ಕಿರುಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಸಿದ್ದಗೊಳಿಸಲಾಗಿದೆ.

ತುಮಕೂರು ಜಿಲ್ಲಾ ಪಂಚಾಯಿತಿ ಮೂಲಕ ಕೈಗಾರಿಕೆಗಳ ಸಿ.ಎಸ್.ಆರ್. ನಿಧಿಯನ್ನು ಬಳಕೆ ಮಾಡಿಕೊಂಡು ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಿಯಾಯೋಜನೆ ತಯಾರಿಸುತ್ತಿದ್ದು, ಸರಕಾರಿ ಶಾಲೆಗಳ ಆಡಳಿತ ಮಂಡಳಿಯವರು ಜುಲೈ 30ರೊಳಗೆ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಮ್ಮ ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಮನವಿ ಸಲ್ಲಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮುರುಳೀಧರ ಹಾಲಪ್ಪ ಸಲಹೆ ನೀಡಿದರು.
ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸೂರ್ಯಕಲಾ ಮಾತನಾಡಿ, ಪಠ್ಯಗಳು ನಮಗೆ ಜ್ಞಾನವನ್ನು ನೀಡಿದರೆ, ಪಠ್ಯೇತರ ಚಟುವಟಿಕೆಗಳು ನಮಗೆ ಸಮಾಜದೊಂದಿಗೆ ಬೆರೆಯಲು ಅಗತ್ಯವಿರುವ ಸಾಮಾನ್ಯಜ್ಞಾನವನ್ನು ನೀಡುತ್ತವೆ. ಕಲೆ, ಸಾಹಿತ್ಯ, ನೃತ್ಯ, ಸಂಗೀತದ ಜೊತೆಗೆ, ಒಳ್ಳೆಯ ಸದಭಿರುಚಿಯ ಸಿನಿಮಾಗಳು ಸಹ ಮಕ್ಕಳ ಮೇಲೆ ಅಗಾಧವಾದ ಪರಿಣಾಮ ಬೀರಬಲ್ಲವು. ಹಾಗಾಗಿ ಅಂತರರಾಷ್ಟ್ರೀಯ ಕಿರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸುವ ಮೂಲಕ ನಮ್ಮ ಮಕ್ಕಳಿಗೂ ಆ ರೀತಿ ಜ್ಞಾನ ದೊರೆಯುವಂತೆ ಮಾಡಲು ಮುಂದಾಗಿದ್ದು, ಹಾಲಪ್ಪ ಪೌಂಡೇಷನ್ ಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಸಿನಿಮಾ ಸಂಘಟಕರು ಮತ್ತು ವಿಮರ್ಶಕರಾದ ಗಿರೀಶ್ ಮಾತನಾಡಿ, ಸಿನಿಮಾ ಅನಾದಿ ಕಾಲದಿಂದಲೂ ಒಳ್ಳೆಯ ಮಾಧ್ಯಮವಾಗಿ ಬೆಳೆದು ಬಂದಿದೆ. ಸಿನಿಮಾದಲ್ಲಿ ತೋರಿಸುವ ಎಲ್ಲಾ ಅಂಶಗಳು ಒಳ್ಳೆಯವು ಅಲ್ಲ, ಕೆಟ್ಟದ್ದು ಅಲ್ಲ, ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಅದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ನಾಲ್ಕು ವಿಭಿನ್ನ ಅಂಶಗಳನ್ನು ಒಳಗೊಂಡ ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಕೇವಲ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಕಿರುಚಿತ್ರ ಪ್ರದರ್ಶನವನ್ನು ಇದೇ ಮೊದಲ ಬಾರಿಗೆ 2ನೇ ಹಂತದ ನಗರಗಳಲ್ಲಿ ಪ್ರದರ್ಶಿಸಲು ಹಾಲಪ್ಪ ಪ್ರತಿಷ್ಠಾನ ಸಹಕಾರ ನೀಡಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕøತರಾದ ಮಹೇಶ್ವರರಾವ್, ಏಂಪ್ರೆಸ್ ಕೆಪಿಎಸ್ ಶಾಲೆಯ ಪ್ರಾಂಶುಪಾಲರಾದ ಮಲ್ಲಯ್ಯ, ಉಪಪ್ರಾಂಶುಪಾಲರಾದ ಜಬಿವುಲ್ಲಾಖಾನ್, ಉಪನ್ಯಾಸಕರಾದ ಉಮೇಶ್, ಇಸ್ಮಾಯಿಲ್, ರಾಘವೆಂದ್ರ ಮತ್ತಿತರರು ಪಾಲ್ಗೊಂಡಿದ್ದರು.