ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮಸ್ಥೈರ್ಯ, ಭವಿಷ್ಯದ ಪೈಪೋಟಿಗೆ ಉತ್ತಮ ವೇದಿಕೆಗಳು-ಮುರಳೀಧರ ಹಾಲಪ್ಪ

ತುಮಕೂರು:ಸ್ಪರ್ಧೆಗಳು ಮಕ್ಕಳಲ್ಲಿ ಭಾಷೆಯ ಮೇಲಿನ ಹಿಡಿತದ ಜೊತೆಗೆ, ಆತ್ಮಸ್ಥೈರ್ಯವನ್ನು ನೀಡಲು ಸಹಕಾರಿಯಾಗಿವೆ ಎಂದು ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.

ನಗರದ ಗೆದ್ದಲಹಳ್ಳಿಯ ಶೇಷಾದ್ರಿಪುರಂ ಸ್ಕೂಲ್‍ನಲ್ಲಿ ಎಐಸಿಐಸಿ ಸಂಸ್ಥೆಯ ಆರಂಭಕ್ಕೆ ಕಾರಣರಾದ ಫಾದರ್ ಜಾರ್ಜ್ ಹೆಸ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ವಿಶೇಷ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಮಕ್ಕಳು ಶಾಲಾ ಸಮಯದಲ್ಲಿ ಭಾಗವಹಿಸುವ ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮಸ್ಥೈರ್ಯದ ಜೊತೆಗೆ, ಭವಿಷ್ಯದ ಪೈಪೋಟಿ ಎದುರಿಸಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ ಎಂದರು.

ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಅಧಿಕಾರಿವಲಯ ರಾಷ್ಟ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರಗಳನ್ನು ವಹಿಸುತ್ತದೆ.ಇಂತಹ ಅಧಿಕಾರಿ ವಲಯದಲ್ಲಿರುವ ಬಹುತೇಕ ಐಎಎಸ್, ಐಪಿಎಸ್ ಅಧಿಕಾರಿಗಳ ಕೌಟುಂಬಿಕ ಹಿನ್ನೆಲೆಯನ್ನು ಗಮನಿಸಿದರೆ, ಅವರೆಲ್ಲರೂ ಆರಂಭದಲ್ಲಿ ಬದುಕಿಗಾಗಿ ಸಂಘರ್ಷವನ್ನು ಎದುರಿಸಿದವರೇ ಆಗಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ನಮ್ಮ ಜಿಲ್ಲೆಯಲ್ಲಿರುವ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲರೂ ಬಡತನದಿಂದಲೇ ಬಂದವರು.ಜೀವನದಲ್ಲಿ ನಡೆದ ಘಟನೆಗಳನ್ನೇ ಸವಾಲಾಗಿ ಸ್ವೀಕರಿಸಿ, ನೂನ್ಯತೆಗಳನ್ನು ಮೆಟ್ಟಿನಿಂತು ಯಶಸ್ಸು ಸಾಧಿಸಿದವರು. ಹಾಗಾಗಿ ಇಂತಹವರು ನಿಮಗೆ ಮಾದರಿಯಾಗಬೇಕು.ಅವರ ಬದುಕನ್ನೊಮ್ಮೆ ಅವಲೋಕಿಸಿದರೆ ನಿಮಗೆ ಸಾಧಿಸಬೇಕೆಂಬ ಚಲ ಬರಲಿದೆ. ಹಾಗಾಗಿ ಶಾಲಾ, ಕಾಲೇಜುಗಳು ಇಂತಹ ಅಧಿಕಾರಿಗಳನ್ನು ತಮ್ಮ ಶಾಲಾ, ಕಾಲೇಜುಗಳಿಗೆ ಅಹ್ವಾನ ಮಾಡಿ, ಅವರಿಂದ ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಸಲಹೆಯನ್ನು ಮುರುಳೀಧರ ಹಾಲಪ್ಪ ನೀಡಿದರು.

ಬೆಂಗಳೂರಿಗೆ ಸರಿಸಮನಾಗಿ ಇಂದು ಗ್ರಾಮೀಣ ಭಾಗಗಳಲ್ಲಿಯೂ ಐಸಿಐಸಿ, ಸಿಬಿಎಸ್‍ಇ, ಶಾಲೆಗಳು ಕೆಲಸ ಮಾಡುತ್ತಿವೆ.ಮಹಾನಗರದ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಲು ಗ್ರಾಮೀಣ ಮಕ್ಕಳು ಸಶಕ್ತರಾಗಬೇಕು ಎಂದರೆ ಇಂತಹ ಸ್ಪರ್ಧೆಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಆಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳನ್ನ ಪಡೆಯಲು ಸಾಧ್ಯ. ನಾನು ಒಳ್ಳೆಯ ಅಧಿಕಾರಿಯಾಗುತ್ತನೆ ಎಂಬ ಕನಸಿನೊಂದಿಗೆ ತಾವುಗಳು ಇಲ್ಲಿಂದ ತೆರಳಬೇಕೆಂದು ಮುರುಳೀಧರ ಹಾಲಪ್ಪ ಮಕ್ಕಳಿಗೆ ಕಿವಿ ಮಾತು ಹೇಳಿದರು.

ಎಐಸಿಐಸಿಯ ಕರ್ನಾಟಕ ಸಂಚಾಲಕ ಡಾ.ರುದ್ರೇಶ್ ಹಿರೇಮಠ್ ಮಾತನಾಡಿ,1919ರಲ್ಲಿ ಅಮೆರಿಕಾದ ನ್ಯೂಜರ್ಸಿಯಲ್ಲಿ ಜನಿಸಿದ ಫಾ.ಜಾರ್ಜ್ ಹೆಸ್ ಅವರು,1952ರಲ್ಲಿ ಭಾರತಕ್ಕೆ ಬಂದು ಪ್ರಥಮ ಐಸಿಐಸಿ ಶಾಲೆಯನ್ನು ಪಾರಂಭಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಆರಂಭಿಸಿದ್ದರು.ನಂತರದ ವರ್ಷದಲ್ಲಿ ಐಸಿಐಸಿ ಶಾಲೆಗಳನ್ನು ಒಳಗೊಂಡ ಎಐಸಿಐಸಿ ಒಕ್ಕೂಟವನ್ನು ರಚಿಸಿ, ಆ ಮೂಲಕ ಮಕ್ಕಳಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡಿದವರು.ಅವರ ಸ್ಮರಣಾರ್ಥ ಇಂದು ವಿಭಾಗೀಯ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ಗ್ರೀನ್‍ವುಡ್ ಶಾಲೆಯಲ್ಲಿ ಮುಂದಿನ ಹಂತದ ಸ್ಪರ್ಧೆಗಳು ನಡೆಯಲಿವೆ.ಇದೇ ಮೊದಲ ಬಾರಿಗೆ ಬೆಂಗಳೂರು ನಗರ ಹೊರತು ಪಡಿಸಿ, ತುಮಕೂರಿನಲ್ಲಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಸಹಕಾರ ನೀಡಿದ ಶೇಷಾದ್ರಿಪುರಂ ಶಾಲೆಯ ಆಡಳಿತ ಮಂಡಳಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಸ್ಕೂಲ್‍ನ ಪ್ರಾಂಶುಪಾಲರಾದ ನಂದಾರಾಜ್ ಮಾತನಾಡಿ,ಶಿಕ್ಷಣ ತಜ್ಞರಾದ ಫಾದರ್ ಜಾರ್ಜ್ ಹೆಸ್ ಅವರ ಹೆಸರಿನ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಜ್ಹೋನ್ -08ರಲ್ಲಿ ಬರುವ ತುಮಕೂರು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ಐಸಿಐಸಿ ಶಾಲೆಗಳ ಮಕ್ಕಳು, ಅವರ ಉಪಾದ್ಯಾಯರುಗಳು ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು.

ವೇದಿಕೆಯಲ್ಲಿ ಶೇಷಾದ್ರಿಪುರಂ ಶಾಲೆಗಳ ಮುಖ್ಯಸ್ಥರಾದ ಸೌಮ್ಯ ಮತ್ತಿತರರು ಪಾಲ್ಗೊಂಡಿದ್ದರು. ಫಾದರ್ ಜಾರ್ಜ್ ಹೆಸ್ ಅವರ ಸ್ಮರಣಾರ್ಥ ಮಕ್ಕಳಿಗೆ ಆಶುಭಾಷಣ, ಚರ್ಚಾಸ್ಪರ್ಧೆ,ಪ್ರಬಂಧ ಸ್ಪರ್ಧೆಗಳು ನಡೆದವು.

Leave a Reply

Your email address will not be published. Required fields are marked *