ತುಮಕೂರು : ತುಮಕೂರಿನಲ್ಲಿ ನೋಂದಣಿಯೇ ಆಗದ ಚಿಟ್ ಫಂಡ್ ಕಂಪನಿ ಹೆಸರಿನಲ್ಲಿ ಹಣ ತೊಡಗಿಸಿದ ಗ್ರಾಹಕರಿಗೆ ಪಂಗನಾಮ ಹಾಕಿ ವಂಚನೆ ಮಾಡಿ, ಮಾಲೀಕರು ನಾಪತ್ತೆಯಾಗಿದ್ದರೆಂದು ಗ್ರಾಹಕರು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆಂದು ತಿಳಿದು ಬಂದಿದೆ.
ತುಮಕೂರಿನ ಕೆಎಸ್‍ಆರ್‍ಟಿಸಿ ಬಸ್ ಸ್ಟಾಂಡ್ ಎದುರಿನ ಅಶೋಕ ರಸ್ತೆಯ ಜಿ.ಎಂ.ಎಸ್.ಕಾಂಪ್ಲೆಕ್ಸ್‍ನಲ್ಲಿರುವ ಆಕಾಶ್ ಜ್ಯೂಯಲರಿ ಮಾಲೀಕರಾದ ಟಿ.ಶಿವಾನಂದಮೂರ್ತಿ ಅವರು ನೋಂದಣಿಯೇ ಆಗದ “ಆಕಾಶ್ ಕ್ಯುಮುಲೇಟೀವ್ ಡಿಪಾಸಿಟ್ ಸ್ಕೀಮ್” ನಡಿ ಆಕಾಶ್ ಜ್ಯೂಯಲರ್ಸ್ ಮಾಲೀಕರು ಹಣ ತೊಡಗಿಸಿಕೊಂಡು ನಾಪತ್ತೆಯಾಗಿದ್ದಾರೆಂದು ಸುಮಾರು 60ಕ್ಕೂ ಹೆಚ್ಚು ಜನರು ದೂರನ್ನು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರನ್ನಲಾಗಿದೆ.
ಹಣ ಪಡೆದುಕೊಂಡಿರುವ ರಶೀದಿಯಲ್ಲಿ ಆಕಾಶ್ ಜ್ಯೂಯಲರ್ಸ್ ಎಂದಿದ್ದು, ಈ ರಶೀದಿಯಲ್ಲಿ ಸೀರಿಯಲ್ ನಂಬರಾಗಲಿ, ಸಹಕಾರ ಇಲಾಖೆಯಿಂದ ನೋಂದಣಿಯಾದ ನೋಂದಣಿ ಶೀಲ್ ಅಥವಾ ನಂಬರಾಗಲಿ ಇಲ್ಲವೆನ್ನಲಾಗಿದೆ.
ರಸೀದಿಯಲ್ಲಿ ಹಣ ತೊಡಗಿಸಿದವರ ಹೆಸರಷ್ಟೇ ಇದ್ದು, ಹಣ ತೊಡಗಿಸಿದವರ ವಿಳಾಸವಾಗಲಿ, ಪೋನ್ ನಂಬರಾಗಲಿ ಇಲ್ಲ, ರಶೀದಿಗೆ ಆಕಾಶ್ ಜ್ಯೂಯಲರ್ಸ್ ಶೀಲ್ ಹಾಕಿ ಟಿ.ಶಿವಾನಂದಮೂರ್ತಿ ಅವರು ಸಹಿ ಮಾಡಿದ್ದಾರೆನ್ನಲಾಗಿದೆ.
“ಆಕಾಶ್ ಕ್ಯುಮುಲೇಟೀವ್ ಡಿಪಾಸಿಟ್ ಸ್ಕೀಮ್ ನಲ್ಲಿ ಹಣ ತೊಡಗಿಸಿರುವ ಗ್ರಾಹಕರು ಜನವರಿ 29ರಿಂದ ತುಮಕೂರು ನಗರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸುತ್ತಿದ್ದು, ಹಣ ತೊಡಗಿಸಿದವರಲ್ಲಿ ಬಡವರು, ಕೂಲಿ ಕಾರ್ಮಿಕರು, ನಿವೃತ್ತ ನೌಕರರು, ಶ್ರೀಮಂತರುಗಳು ಇದ್ದಾರೆಂದು ಹೇಳಲಾಗುತ್ತಿದೆ.
ಜಿಲ್ಲಾ ಸಹಕಾರ ನಿಬಂಧಕರ ಕಛೇರಿಯಲ್ಲಿ “ಆಕಾಶ್ ಕ್ಯುಮುಲೇಟೀವ್ ಡಿಪಾಸಿಟ್ ಸ್ಕೀಮ್” ನೋಂದಣಿಯಾಗಿಲ್ಲವೆಂದು ಹೇಳಲಾಗುತ್ತಿದೆ. “ಆಕಾಶ್ ಕ್ಯುಮುಲೇಟೀವ್ ಡಿಪಾಸಿಟ್ ಸ್ಕೀಮ್” ಹಣ ತೊಡಗಿಸಿರುವ ಗ್ರಾಹಕರು ಪೊಲೀಸ್ ಠಾಣೆಯಲ್ಲಿಯೇ ಅಳುವುದು, ನಮ್ಮ ಗತಿಯೇನು ಎಂಬ ಅಳಲನ್ನು ತೋಡಿಕೊಳ್ಳುತ್ತಿದ್ದರೆನ್ನಲಾಗಿದ್ದು, ನಾಪತ್ತೆಯಾಗಿರುವ ಟಿ.ಶಿವಾನಂದಮೂರ್ತಿಯವರನ್ನು ಕರೆ ತನ್ನ ಎಂದು ಹಣ ತೊಡಗಿಸಿರುವ ಗ್ರಾಹಕರು ಪೊಲೀಸರಲ್ಲಿ ಕೈಮುಗಿದು ಕೇಳುತ್ತಿದ್ದಾರೆನ್ನಲಾಗುತ್ತಿದೆ.
ಇದೇ ಟಿ.ಶಿವಾನಂದಮೂರ್ತಿರವರು ಆಕಾಶ್ ಸೌಹಾರ್ದ ಕೋ-ಆಪರೇಟಿವ್ ಸೋಸೈಟಿಯನ್ನು ತೆರೆದಿದ್ದು, ಇದರ ವಹಿವಾಟನ್ನೆಲ್ಲಾ ಅಧ್ಯಕ್ಷರೇ ನಿಭಾಯಿಸುತ್ತಿದ್ದರು, ಇತ್ತೀಚೆಗೆ ಪಿಗ್ಮಿಯನ್ನು ಸಹ ಸಂಗ್ರಹ ಮಾಡುತ್ತಿದ್ದರು, ಪಿಗ್ಮಿ ಸಂಗ್ರಹಿಸುತ್ತಿದ್ದ ವ್ಯಕ್ತಿ ಪಿಗ್ಮಿದಾರರಿಗೆ ಎಲ್ಲಿಂದ ಹಣ ಕೊಡಲಿ ಎಂದು ಗೋಳಾಡುತ್ತಿದ್ದರೆನ್ನಲಾಗಿದೆ.