ತುಮಕೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಿ ಅರ್ಧ ವರ್ಷ ಕಳೆದರೂ ಅನುದಾನ ಬಳಕೆಯ ಪ್ರಮಾಣ ಕೇವಲ ಶೇಕಡ 30ರಷ್ಟು ಮಾತ್ರ ಇರುವುದು ಈ ಸರ್ಕಾರ ಯಾವ ರೀತಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡುಹೋಗುತ್ತಿದೆ ಎಂಬುದರ ಕನ್ನಡಿ ಹಿಡಿದಿದೆ ಎಂದು ಬಿಜೆಪಿಯ ಹಿರಿಯ ಶಾಸಕ ಬಿ.ಸುರೇಶ್‍ಗೌಡರು ಕಟುವಾಗಿ ಟೀಕಿಸಿದ್ದಾರೆ.
ಪ್ರಸಕ್ತ ಬಜೆಟ್‍ನಲ್ಲಿ ಇಲಾಖಾವಾರು ಹಂಚಿಕೆ 3,53,492 ಕೋಟಿರೂಪಾಯಿ ಇದ್ದರೆ ಬಿಡುಗಡೆಯಾಗಿರುವ ಅನುದಾನ ಕೇವಲ 1,48,576 ಕೋಟಿ ರೂ. ಅದರಲ್ಲಿ ಕಳೆದ ಸೆಪ್ಟಂಬರ್‍ವರೆಗೆ ಬಳಕೆಯಾಗಿರುವುದು ಕೇವಲ 1,06,611 ಕೋಟಿ ರೂ. ಮಾತ್ರ. ಅಂದರೆ ಹಂಚಿಕೆಯಾದ ಮೊತ್ತದಲ್ಲಿ ಕೇವಲ ಶೇಕಡ 42ರಷ್ಟು ಹಣ ಬಿಡುಗಡೆಯಾಗಿದೆ. ಅದರಲ್ಲಿ ಬಳಕೆಯಾಗಿರುವ ಅನುದಾನ ಶೇಕಡ 30ರಷ್ಟು ಮಾತ್ರ ಎನ್ನುವುದು ರಾಜ್ಯದ ದೌರ್ಭಾಗ್ಯವಲ್ಲದೇ ಮತ್ತೇನೂ ಅಲ್ಲ ಎಂದು ಶಾಸಕರು ತಮ್ಮ ಹೇಳಿಕೆಯಲ್ಲಿ ವಿಷಾದಿಸಿದ್ದಾರೆ.
ಅಭಿವೃದ್ಧಿಗೆ ಹಣದ ಕೊರತೆಯಿಲ್ಲ, ಬೇಕಾದಷ್ಟು ಹಣ ಇದೆ ಎಂದು ಮುಖ್ಯಮಂತ್ರಿಗಳು ಅವಕಾಶ ಸಿಕ್ಕಾಗಲೆಲ್ಲಾ ವೇದಿಕೆಗಳ ಮೇಲಿನಿಂದ ಅಬ್ಬರಿಸುತ್ತಾರೆ. ಬಿಜೆಪಿಯವರು ಸುಳ್ಳು ಹೇಳುತ್ತಾರೆ ಎಂದು ಮೇಜು ಕುಟ್ಟಿ ಟೀಕಿಸುತ್ತಾರೆ. ಹಾಗಾದರೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಅಂಕಿಅಂಶಗಳು ಸುಳ್ಳೆ? ಇದಕ್ಕೆ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು ಸಮಜಾಯಿಷಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಿಯಾಂಕ್ ಖರ್ಗೆಯ ಇಲಾಖೆ ವೈಫಲ್ಯ
ಗ್ರಾಮೀಣಾಭಿವೃದ್ಧಿ ಇಲಾಖೆ ಹಳ್ಳಿಗಾಡಿನ ಜೀವನದ ಕಲ್ಯಾಣಕ್ಕೆ ಸಂಬಂಧಿಸಿದ ಇಲಾಖೆ. ಈ ಇಲಾಖೆಯಲ್ಲಿ ಆಗಿರುವ ವೆಚ್ಚ ಕೇವಲ ಶೇಕಡ 11ರಷ್ಟು ಮಾತ್ರ ಎಂದರೆ ಇದು ಆ ಇಲಾಖೆಯನ್ನು ನಿರ್ವಹಿಸುವ ಸಚಿವ ಪ್ರಿಯಾಂಕ್ ಖರ್ಗೆಯವರ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇಡೀ ದೇಶಕ್ಕೆ ಸಂಬಂಧಿಸಿದ ಉಸಾಬರಿ ವಿಷಯಗಳನ್ನು ಕುರಿತು ಮೇಧಾವಿತನ ತೋರಿಸುವುದನ್ನು ಬಿಟ್ಟು ತಮ್ಮ ಇಲಾಖೆ ಕಡೆ ಅವರು ಆಗೀಗ ಗಮನ ಕೊಟ್ಟು ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ನೋಡಿದ್ದರೂ ಈ ದಯನೀಯ ಸ್ಥಿತಿ ಈ ಇಲಾಖೆಗೆ ಬರುತ್ತಿರಲಿಲ್ಲ. ಇದಕ್ಕೆ ಯಾರು ಹೊಣೆ ಹೊರುತ್ತಾರೆ ಎಂದು ಸುರೇಶ್‍ಗೌಡರು ಕೇಳಿದ್ದಾರೆ.
ಸಿದ್ದರಾಮಯ್ಯನವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗೂ ಕಡಿಮೆ ಹಣ ವ್ಯಯವಾಗಿರುವ ಅನುಮಾನವನ್ನು ಮಾಧ್ಯಮದ ವರದಿ ವ್ಯಕ್ತಪಡಿಸಿದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣದಂತಹ ಕಲ್ಯಾಣ ಇಲಾಖೆಗಳಲ್ಲಿಯೂ ವೆಚ್ಚದ ಪ್ರಮಾಣ ಕಡಿಮೆ ಇದೆ. ಹುಸಿ ಗ್ಯಾರಂಟಿ ಯೋಜನೆಗಳ ಬೆನ್ನುಹತ್ತಿ ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಈ ಸರ್ಕಾರ ಆಂತರಿಕ ಕಚ್ಚಾಟದ ಬೇಗುದಿಯಲ್ಲಿ ಹೇಗೆ ವಾಸ್ತವಿಕ ಅಭಿವೃದ್ಧಿಯನ್ನು ಮರೆತಿದೆ ಎಂಬುದಕ್ಕೆ ಇಂತಹ ಅಂಕಿಅಂಶಗಳು ಸಾಕ್ಷಿ ನುಡಿಯುತ್ತವೆ. ಈ ಸರ್ಕಾರ ಬೇಗ ತೊಲಗಿದರೆ ಸಾಕು ಎಂದು ಹಳ್ಳಿಗಾಡಿನ ಜನರು ಶಾಪ ಹಾಕುತ್ತಿರುವುದು ಸುಮ್ಮನೇ ಅಲ್ಲ ಎಂದು ಶಾಸಕ ಬಿ.ಸುರೇಶ್‍ಗೌಡರು ಕಿಡಿಕಾರಿದ್ದಾರೆ.