ನಾನು ಎರಡು ಬಾರಿ ಶಾಸಕನಾಗಿ, ಒಂದು ಬಾರಿ ಸಂಸದನಾಗಿ ಉತ್ತಮ ಕೆಲಸ ಮಾಡಿದ್ದರೂ 2019ರ ಚುನಾವಣೆಯಲ್ಲಿ ಮುದ್ದಹನುಮೇಗೌಡರು ಬೆಳೆದು ಬಿಡುತ್ತಾರೆಂದು ಕಾಂಗ್ರೆಸ್ ನಾಯಕರೇ ನನಗೆ ಮುಳ್ಳಾಗಿ ದೇವೇಗೌಡರನ್ನು ಚುನಾವಣೆಗೆ ಕರೆ ತಂದು ನನಗೆ ಟಿಕೆಟ್ ತಪ್ಪಿಸಿದರು ಎಂದು ಎಸ್.ಪಿ.ಮುದ್ದಹನುಮೇಗೌಡರು ಆರೋಪಿಸಿದರು.
ಅವರು ಕುಣಿಗಲ್ ನಲ್ಲಿ ಏರ್ಪಡಿಸಲಾಗಿದ್ದ ಜನ ಸಂಕಲ್ಪ ಯಾತ್ರೆಯ ಲ್ಲಿ ಮಾತನಾಡಿದರು.
2014ರಲ್ಲಿ ಮೋದಿಯವರ ಅಲೆ ಇದ್ದರೂ ನಾನು ಗೆದ್ದು ಲೋಕಸಭೆಗೆ ಹೋದೆ, ಜಿಲ್ಲೆಗೆ ಎರಡು ಪಥದ ರೈಲ್ವೆ ಟ್ರಾಕ್, ಆರು ಪಥದ ಹೆದ್ದಾರಿ, ಪಾಸ್‍ಪೋರ್ಟ್ ಕಚೇರಿ ಎಲ್ಲಾ ತಂದರೂ ನನಗೆ ಟಿಕೆಟ್ ನೀಡಲಿಲ್ಲ, ನಾನೇನು ತಪ್ಪು ಮಾಡಿದ್ದೆ ಎಂದು ಪ್ರಶ್ನಿಸಿದರು.
ಕುಣಿಗಲ್‍ನ ಶಾಸಕರು ಮತ್ತು ಸಂಸದರು ಜನರಿಗೆ ಗೊತ್ತಿಲ್ಲ, ದುರಂಕಾರದ ಮಾತು, ದೌರ್ಜನ್ಯ, ತೋಳುಮಡಚುವುದು ಹೆದರಿಸುವುದು ಇನ್ನು ಮುಂದೆ ನಡೆಯುವುದಿಲ್ಲ ಎಂದು ಶಾಸಕ ಡಾ.ರಂಗನಾಥ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ಎಸ್‍ಪಿ.ಎಂ.ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಕುಣಿಗಲ್ ತಾಲ್ಲೂಕಿನ ತುಮಕೂರು ಹೇಮಾವತಿ ಶಾಖಾ ನಾಲೆಯ 165ನೇ ಕಿ.ಮೀ.ನಿಂದ ಬೇಗೂರು ಕೆರೆಯ ಹತ್ತಿರ 198ನೇ ಕಿ.ಮೀ.ವರೆಗೆ ನಾಲಾ ಆಧುನೀಕರಣ ಕಾಮಗಾರಿ.
ತುಮಕೂರು ಹೇಮಾವತಿ ಶಾಖಾ ನಾಲೆಯ ಬೇಗೂರು ಕೆರೆಯ ಹತ್ತಿರ 198ನೇ ಕಿ.ಮೀ.ನಿಂದ ಹುಲಿಯೂರುದುರ್ಗದ ಹತ್ತಿರ 240ನೇ ಕಿ.ಮೀ.ವರೆಗಿನ ನಾಲಾ ಕಾಮಗಾರಿ ಪೂರ್ಣಗೊಳಿಸುವುದು.
ಹುಲಿಯೂರುದುರ್ಗ ಹೋಬಳಿಯಲ್ಲಿ ಶಿಂಶಾ ನದಿಯಿಂದ ದೀಪಾಂಬುಧಿ ಕೆರೆಗೆ ಏತ ನೀರಾವರಿ ಮೂಲಕ ಹಲವು ಕೆರೆಗಳಿಗೆ ನೀರಿ ತುಂಬಿಸುವ ಯೋಜನೆ.
ಹೇಮಾವತಿ ತುಮಕೂರು ಶಾಖಾ ನಾಲೆಯ ವಿತರಣಾ ನಾಲೆ 26ರ ಅಚ್ಚುಕಟ್ಟಿನಲ್ಲಿ ಬರುವ ಯಡಿಯೂರು ಹೋಬಳಿಯ ಎಲ್ಲ ಕೆರೆಗಳನ್ನು ಹೇಮಾವತಿ ಟ್ಯಾಂಕ್ ಲಿಸ್ಟ್‍ಗೆ ಸೇರಿಸುವುದು.
ಕುಣಿಗಲ್ ಸ್ಟಡ್‍ಫಾರಂಗೆ ಸೇರಿರುವ ಜಮೀನು ಮತ್ತು ರಂಗಸ್ವಾಮಿ ಗುಡ್ಡ ಕಾವಲ್‍ಗೆ ಸೇರಿರುವ ಜಮೀನಿನಲ್ಲಿ ಕೃಷಿ, ಹೈನುಗಾರಿಕೆ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವುದು.
ಶೈಕ್ಷಣಿಕ ದೃಷ್ಠಿಯಿಂದ ಕುಣಿಗಲ್‍ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ತೆರೆಯುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.