ತುಮಕೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹೇಳುವವರೂ ಇಲ್ಲ ಕೇಳುವವರೂ ಇಲ್ಲ ಎನ್ನುವಂತಾಗಿದೆ. ಅಧಿಕಾರಕ್ಕಾಗಿ ಅವರು ಕಚ್ಚಾಡುತ್ತಿದ್ದಾರೆ. ಕಾಂಗ್ರೆಸ್‍ನ ಸಣ್ಣ ಪುಟ್ಟ ನಾಯಕರು ಕೂಡ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ನಿತ್ಯವೂ ಒಬ್ಬೊಬ್ಬರು ನವದೆಹಲಿಗೆ ಹೋಗಿ ಟವೆಲ್ ಹಾಕಿ ಬರುತ್ತಿದ್ದಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಇಂಥ ತಮಾಷೆಯ ರಾಜಕೀಯ ಸನ್ನಿವೇಶವನ್ನು ಎಂದೂ ನೋಡಿರಲಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಲ್ಲಿ ಒಬ್ಬ ಮುಖ್ಯಮಂತ್ರಿ ಇದ್ದಾರೆ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಇನ್ನೂ ತೀರ್ಪು ಬಂದಿಲ್ಲ. ನಾವು ವಿರೋಧ ಪಕ್ಷದವರು ಮರ್ಯಾದೆಯಿಂದ ತೀರ್ಪು ಏನು ಬರುತ್ತದೆ ಎಂದು ಕಾಯುತ್ತಿದ್ದೇವೆ ಆದರೆ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಸುತ್ತಲೂ ಇರುವವರೇ ಟವಲ್ ಕೊಡವಿಕೊಂಡು ಸೀಟಿಗಾಗಿ ಟವಲ್ ಹಾಕಲು ಕಾಯುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣರನ್ನು ಅವರ ಪಕ್ಕದಲ್ಲಿ ಇದ್ದವರೇ ಹಿಡಿದುಕೊಟ್ಟರು ಎಂದು ಮುಖ್ಯಮಂತ್ರಿ ಹೇಳಿದ ನಂತರವೂ ಪ್ರತಿದಿನ ಒಬ್ಬ ಶಾಸಕ ನಾನೂ ಮುಖ್ಯಮಂತ್ರಿಯಾಗಲು ತಯಾರು ಎಂದು ಹೇಳುತ್ತಿದ್ದಾರೆ ಎಂದರೆ ಇದಕ್ಕಿಂತ ಹಾಸ್ಯಾಸ್ಪದ ಮತ್ತೊಂದಿಲ್ಲ ಎಂದರು.