5 ಘೋಷ ವಾಕ್ಯದೊಂದಿಗೆ 2023ರ ಚುನಾವಣೆ ಎದುರಿಸಲಿರುವ ಕಾಂಗ್ರೆಸ್-ರಾಯಸಂದ್ರ ಎಸ್.ರವಿಕುಮಾರ್

ತುಮಕೂರು:ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಮತ್ತು ಅಭಿವೃದ್ದಿ ಎಂಬ ಐದು ಅಂಶಗಳನ್ನು ಮುಂದಿಟ್ಟುಕೊಂಡು,ಕಾಂಗ್ರೆಸೇ ಪರಿಹಾರ ಎಂಬ ಘೋಷ ವಾಕ್ಯದೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ತಿಳಿಸಿದರು.

ಇಂದು ಖಾಸಗಿ ಹೊಟೇಲ್‍ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು, ತಾಲೂಕು ಸಂಯೋಜಕರು ಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2023ರ ಮೇ.10 ರಂದು ನಡೆಯುವ ಚುನಾವಣೆಯಲ್ಲಿ ಮೇಲಿನ ಪಂಚಮಂತ್ರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಿದ್ದೇವೆ ಎಂದರು.

ರಾಜ್ಯದಲ್ಲಿ ಅಡಳಿತದಲ್ಲಿರುವ ಬಿಜೆಪಿಯ ಜನವಿರೋಧಿ ನೀತಿಗಳಿಂದಾಗಿ ದಿನ ನಿತ್ಯದ ವಸ್ತುಗಳ ಬೆಲೆಗಳು ಹೆಚ್ಚಾಗಿ ಜನಸಾಮಾನ್ಯರು ದಿನದೂಡುವುದೇ ಕಷ್ಟವಾಗಿದೆ.ಹಾಗಾಗಿ ಕಾಂಗ್ರೆಸ್ ಪ್ರತಿ ಮನೆಯ ಗೃಹಿಣಿಗೆ ಮಾಸಿಕ 2000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತದ ಗೃಹಜೋತಿ, ಪ್ರತಿ ಪಡಿತರದಾರರಿನಿಗೆ ತಲಾ 10 ಕೆ.ಜಿ.ಅನ್ನಭಾಗ್ಯ, ನಿರುದ್ಯೋಗಿ ಯುವಕರಿಗಾಗಿ ಪದವಿಧರರಿಗೆ ಮಾಸಿಕ 3000 ರೂ, ಡಿಪ್ಲಮೋದವರಿಗೆ ತಲಾ 1500 ರೂ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ. ಈ ಎಲ್ಲಾ ಯೋಜನೆಗಳನ್ನು ಸರಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗೆ ಜಾರಿಗೆ ಬರಲಿವೆ.ಇದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕೆ.ಪಿ.ಸಿ.ಸಿ.ಪ್ರಚಾರ ಸಮಿತಿ ಮಾಡಲಿದೆ ಎಂದು ರಾಯಸಂದ್ರರವಿಕುಮಾರ್ ತಿಳಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ 1-2 ರ ಅವಧಿಯಲ್ಲಿ ಜಾರಿಗೆ ತಂದ ಉದ್ಯೋಗಖಾತ್ರಿ,ಆಹಾರ ಭದ್ರತಾ ಕಾಯ್ದೆ,ಆರ್.ಟಿ.ಇ, ಆರ್.ಟಿ.ಐ ನಿಂದಾಗಿ ದೇಶದ ಕೋಟ್ಯಾಂತರ ರೂಗಳ ಸಹಕಾರ ಪಡೆದಿವೆ.ಇಂದಿಗೂ ಗ್ರಾಮೀಣ ಭಾಗದ ಜನರನ್ನು ಉದ್ಯೋಗ ಖಾತ್ರಿ ಯೋಜನೆ ಪೊರೆಯುತ್ತಿದೆ.ಶ್ರೀಮಂತರ ಮಕ್ಕಳ ರೀತಿ, ಬಡವರ ಮಕ್ಕಳು ಕಾನ್ವೆಂಟ್ ಶಾಲೆಗಳಲ್ಲಿ ಕಲಿಯಬೇಕೆಂಬ ಆಶಯದೊಂದಿಗೆ ಆರ್.ಟಿ.ಇ ಜಾರಿಗೆ ತರಲಾಗಿದೆ.ಇದರ ಜೊತೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ 2013ರಿಂದ 18ರವರೆಗಿನ ಸರಕಾರದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ,ಶೂಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಲಕ್ಷಾಂತರ ಜನರನ್ನು ತಲುಪಿವೆ. ಇವುಗಳ ಬಗ್ಗೆ ಹೆಚ್ಚು ಪ್ರಚಾರವನ್ನು ಕಾಂಗ್ರೆಸ್ ಪ್ರಚಾರ ಸಮಿತಿ ನಡೆಸುವ ಜೊತೆಗೆ, ಬಿಜೆಪಿಯ ಜನವಿರೋಧಿ ನೀತಿಗಳನ್ನು ಜನರ ಮುಂದಿಡಲಿದೆ ಎಂದರು.

ದೇಶದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತಿಲ್ಲ. ಆದರೆ ಕೃಷಿ ಪೂರಕ ಪರಿಕರಗಳ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು,ಕೃಷಿ ಲಾಭದಾಯಕವಲ್ಲ ಎಂಬ ಅಂಶದಿಂದ ಯುವಜನತೆ ಕೃಷಿಯಿಂದ ದೂರ ಸರಿಯುತಿದ್ದಾರೆ.ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲಿದೆ.ಈ ಎಲ್ಲಾ ಅಂಶಗಳ ಕುರಿತು ಕಾಂಗ್ರೆಸ್ ಪ್ರಚಾರ ಸಮಿತಿ ಪ್ರತಿ ಬೂತ್ ಮಟ್ಟದಲ್ಲಿಯೂ ಪ್ರಚಾರ ಕೈಗೊಂಡು,ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಜನರ ಇಂದಿನ ಸಮಸ್ಯೆಗಳಿಗೆ ಕಾಂಗ್ರೆಸೇ ಪರಿಹಾರ ಎಂದು ತಿಳಿಸಲಿದೆ ಎಂದು ರಾಯಸಂದ್ರರವಿಕುಮಾರ್ ನುಡಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳೂ ಸಮಾನ ಎದುರಾಳಿಗಳು, ಯಾರ ಬಗ್ಗೆಯೂ ಕನಿಕರವಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದಲ್ಲಿದ್ದಾಗ ಆಗಿರುವ ಜನವಿರೋಧಿ ನೀತಿಗಳನ್ನು ಜನತೆಯ ಮುಂದಿಟ್ಟು ಕಾಂಗ್ರೆಸ್ ಪಕ್ಷವಾಗಿ ಬಹಳ ಗಟ್ಟಿ ದ್ವನಿಯಲ್ಲಿ ಮತ ಕೇಳಲು ಕಾಂಗ್ರೆಸ್ ಪ್ರಚಾರ ಸಮಿತಿ ಸಿದ್ದವಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಸಭೆ, ಸಾಮಾರಂಭಗಳು ನಡೆಯಲಿವೆ ಎಂದು ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ರಾಯಸಂದ್ರರವಿಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾದ ಇಕ್ಬಾಲ್ ಅಹಮದ್, ಚಿಕ್ಕರಂಗಯ್ಯ, ಜಯರಾಮಯ್ಯ,ಎಸ್.ಎಲ್.ಎನ್.ಸ್ವಾಮಿ,ಜಿಲ್ಲಾ ಸಂಯೋಜಕರಾದ ರಾಜಕುಮಾರ್, ಚಕ್ರವರ್ತಿ ಪ್ರಕಾಶ್, ಸಿ.ಭಾನುಪ್ರಕಾಶ್, ಮಾರುತಿ, ದೊಡ್ಡಯ್ಯ,ಜಗದೀಶ್,ಮಳೇಹಳ್ಳಿ ಮಲ್ಲಿಕಾರ್ಜುನ,ಕಲ್ಲಹಳ್ಳಿ ಮಹಾಲಿಂಗಪ್ಪ, ಹೇರೂರು ಗುರುಪ್ರಸಾದ್, ರೇಣುಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *