ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸಾಲದ ಹಣದಲ್ಲಿ ಗ್ಯಾರಂಟಿ ಯೋಜನೆಗಳಿಗೆ 53 ಕೋಟಿ ರೂ. ಹಣ ಇಟ್ಟು, ಸಾಲದ ಹೊರೆಯನ್ನು ಜನರ ಮೇಲೆ ಹೇರಿದೆ. ಈ ಸಾಲವನ್ನು ಸಿಎಂ ಸಿದ್ದರಾಮಯ್ಯ ಆಗಲಿ, ಡಿಕೆ.ಶಿವಕುಮಾರ್ ಆಗಲಿ ತೀರಿಸುವುದಿಲ್ಲ, ರಾಜ್ಯದ ಜನರೇ ತೆರಿಗೆ ನೀಡುವ ರೂಪದಲ್ಲಿ ಸಾಲ ತೀರಿಸಬೇಕಾಗಿದೆ. ಸಾಲದ ಗ್ಯಾರಂಟಿ ಯೋಜನೆ ನೀಡಿ ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್‍ನವರು ಹೇಳಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರಿನಲ್ಲಿ ಶನಿವಾರ ರಾತ್ರಿ ಎನ್.ಡಿ.ಎ ಅಭ್ಯರ್ಥಿ ವಿ. ಸೋಮಣ್ಣನವರ ಪರ ಮತಯಾಚಿಸಿ ಮಾತನಾಡಿದ ಅವರು, ದೇಶದ ಭದ್ರತೆ, ಆರ್ಥಿಕ ಸುಭದ್ರತೆ ದೃಷ್ಟಿಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಹಲವು ನಾಯಕರು ತೀರ್ಮಾನ ಮಡಿದ್ದಾರೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಮೋದಿಯವರ ಕೈ ಬಲಪಡಿಸಲು ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋಮಣ್ಣನವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿಯಬೇಕು ಎನ್ನುವ ಪರಿಸ್ಥಿತಿ ಎದುರಾಗಿದೆ. ಗರೀಬಿ ಹಠಾವೋ ಎಂದು ಅಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್‍ನವರು ಬಡತನ ನಿವಾರಣೆ ಮಾಡಲಾಗದ ಕಾಂಗ್ರೆಸ್‍ನವರು ಇಂದು ಚುನಾವಣೆ ಗೆಲ್ಲಲು ಸೀರೆ, ಕುಕ್ಕರ್ ಹಂಚುವ ದುಸ್ಥಿತಿಗೆ ತಲುಪಿದ್ದಾರೆ ಎಂದು ಲೇವಡಿ ಮಾಡಿದರು.
10 ತಿಂಗಳಿನಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಇದರಿಂದ ರಾಜ್ಯದ ಬದಲಾವಣೆ ಸಾಧ್ಯವಿಲ್ಲ. ಎತ್ತಿನ ಹೊಳೆ ಯೋಜನೆಯನ್ನು ಮೂರು ವರ್ಷದಲ್ಲಿ ಮುಗಿಸಿ ನೀರು ಕೊಡುತ್ತೇವೆ ಎಂದು ಹೇಳಿ ಹತ್ತು ವರ್ಷವಾಯಿತು. ಯೋಜನೆಯ ನೀರು ಇನ್ನೂ ಸಕಲೇಶಪುರದಲ್ಲೇ ಇದೆ. ಯೋಜನೆಗೆ ಖರ್ಚು ಮಾಡಿದ 13 ಸಅವಿರ ಕೋಟಿ ರೂ. ಕಂಗ್ರೆಸ್‍ನವರ ಜೇಬು ತುಂಬಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದ್ದು ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ ಎಂಬುದನ್ನು ಜನರೇ ಪರಿಶೀಲಿಸಬೇಕು. ತಮಿಳುನಾಡಿನಲ್ಲಿ ಮೇಕೆದಾಟಿಗೆ ಅನುಮತಿ ಕೊಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ, ಕೇಂದ್ರದಿಂದ ಸಂಸದರು ಅನುಮತಿ ಕೊಡಿಸಿ ಎಂದು ಕೇಳುತ್ತಾರೆ, ಈ ವಿಚಾರ ಅವತ್ತೇ ಹೇಳಿದ್ದರೆ ಆಗಿತ್ತು, ಟ್ರ್ರಿಬ್ಯೂನಲ್‍ನಲ್ಲಿ ಈ ಬಗ್ಗೆ ಸರಿಯಾಗಿ ವಾದ ಮಾಡಲು ಅವಕಾಶವಿತ್ತು. ಏನೂ ಮಾಡದ ಕಾಂಗ್ರೆಸ್‍ನವರು ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಕೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿರುವುದನ್ನು ತಡೆಯಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬರದಿಂದ ಜನ ತತ್ತರಿಸಿ ಹೋಗಿದ್ದು, ಶಾಪ ಹಾಕುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರ ಇದ್ದಾಗ ರಾಜ್ಯದಲ್ಲಿ ಭೀಕರ ಪ್ರವಾಹ ಇತ್ತು. ಅಂದು ಯಡಿಯೂರಪ್ಪನವರು ಮನೆ ಕಳೆದುಕೊಂಡವರಿಗೆ 5 ಲಕ್ಷ ನೀಡಿದ್ದರು ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದರು. ಕಳೆದ 10 ತಿಂಗಳಲ್ಲಿ ಒಂದು ರೈತರ ಪರ ಕೆಲಸ ಮಾಡಿದ್ದಾರಾ ? ಈಗ ನೀಡುತ್ತಿರುವ ಐದು ಕೆಜಿ ಅಕ್ಕಿ ಕೇಂದ್ರದ ಮೋದಿ ಸರ್ಕಾರ ನೀಡುತ್ತಿದೆ. ಒಂದು ಕೆ.ಜಿ. ಅಕ್ಕಿಯನ್ನು ರಾಜ್ಯ ಸರ್ಕಾರ ಕೊಟ್ಟಿಲ್ಲ. ಬಿಜೆಪಿ ಸರ್ಕಾರದ ಹಲವು ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿ ರಜ್ಯದ ಜನರಿಗೆ ಅನ್ಯಾಯ ಮಾಡಿದೆ. ಹೆಣ್ಣುಮಕ್ಕಳಿಗೆ ನೀಡುವ ಭಾಗ್ಯಲಕ್ಷ್ಮಿ ಯೋಜನೆ, ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ದಣ ವಿತರಣೆ ಮಾಡಿಲ್ಲ ಎಂದರು.
ಶಾಸಕ ಬಿ. ಸುರೇಶ್‍ಗೌಡ ಮಾತನಾಡಿ, ಸದನದಲ್ಲಿ ಕುಮಾರಸ್ವಾಮಿ ಮಾತನಾಡಲು ಪ್ರಾರಂಭಿಸಿದರೆ ಸಿದ್ದರಾಮಯ್ಯರವರಿಗೆ ಹಿಂದೆ ಮುಂದೆ ಎಲ್ಲವೂ ಪ್ರಾರಂಭವಾಗಿ ನಡುಕ ಉಂಟಾಗುತ್ತದೆ ಎಂದು ಹೇಳಿ, ಸೋಮಣ್ಣನವರು ಎರಡು ಲಕ್ಷಗಳ ಮತಗಳ ಅಂತರದಿಂದ ಗೆಲ್ಲುತ್ತಾರೆ, ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಅವರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಮಾತನಾಡಿ, ದೇಶಕ್ಕೆ ಗಂಡಾಂತರ ತಪ್ಪಿಸಲು ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂಬ ಸಂದೇಶ ಕೊಟ್ಟವರು ದೇವೇಗೌಡರು. ನಾನು ದೇವೇಗೌಡರ ಗರಡಿಯಲ್ಲಿ ಕೆಲಸ ಕಲಿತಿದ್ದೇನೆ, ಬೆಂಗಳೂರಿನಲ್ಲಿ ಕೆಲಸ ಮಾಡಲಿಕ್ಕೆ, ಜನರ ಸಂಕಷ್ಟ ಆಲಿಸಲು ಅವಕಾಶ ಕೊಟ್ಟಿದ್ದರು. ಅದೇ ರೀತಿ ಇಲ್ಲೂ ಕೆಲಸ ಮಾಡಿ ತೋರಿಸುವೆ ಎಂದರು.
ಮಾಜಿ ಸಚಿವ ಹಾಗೂ ತುಮಕೂರು ಕ್ಷೇತ್ರದ ಚುನಾವಣಾ ಉಸ್ತುವಾರಿ ಗೋಪಾಲಯ್ಯ, ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಚಿದಾನಂದ್, ಮಾಜಿ ಶಾಸಕರಾದ ಹೆಚ್. ನಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರಾದ ಹೆಬ್ಬಾಕ ರವಿಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಆರ್.ಸಿ. ಆಂಜಿನಪ್ಪ, ಕಾರ್ಯಾಧ್ಯಕ್ಷ, ಮುಖಂಡರಾದ ಟಿ.ಆರ್. ಕುಂಭಯ್ಯ, ಚೌಡರೆಡ್ಡಿ, ಬಿಜೆಪಿ ಮುಖಂಡರಾದ ಶಂಕರಣ್ಣ, ಉಮೇಶ್‍ಗೌಡ, ರಾಜಶೇಖರ್ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರುಗಳು ಭಾಗವಹಿಸಿದ್ದರು.