ರಾಮ ಮಂದಿರದಲ್ಲಿ ಬಾಲರಾಮ(ರಾಮಲಲ್ಲಾ)ನ ಪ್ರಾಣ ಪ್ರತಿಷ್ಠಾಪನೆ

ತುಮಕೂರು : ದೇಶದ ಬಹು ನಿರೀಕ್ಷಿತ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾನವು ಇಂದು ನಡೆಯಿತು.ಬೆಳಿಗ್ಗೆ 11ಗಂಟೆಗೆ ನಡೆದ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾನದ ವಿಧಿ-ವಿಧಾನಗಳು 84 ನಿಮಿಷಗಳು ನಡೆದವು.

ಪ್ರಾಣ ಪ್ರತಿಷ್ಠಾನ ಸಮಾರಂಭವು ವಿಷ್ಣು ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪುರೋಹಿತರು ಶ್ರೀರಾಮನ ಸನ್ನಿಧಿಯಲ್ಲಿ ಮಂತ್ರಗಳ ಪಠಣವನ್ನು ಪ್ರಾರಂಭಿಸಿದರು. ವಿಶೇಷ 84 ಸೆಕೆಂಡುಗಳ ಮಂಗಳಕರ ‘ಮಹೂರ್ತ’ ಸಮಯದಲ್ಲಿ, ರಾಮಲಲ್ಲಾ ವಿಗ್ರಹವನ್ನು ಅನಾವರಣಗೊಳಿಸಲಾಯಿತು.

ದೇಶದ ಜನತೆಗೆ ಇದುವರೆಗೂ ಕಾತರದಿಂದ ಎದುರು ರಾಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾನದ ಮೂಲಕ ರಾಮ ಮಂದಿರದ ಉದ್ಘಾಟನೆ ನಡೆಯಿತು. ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾನದ ವಿಧಿ-ವಿಧಾನಗಳು ನೇರವೇರಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಐತಿಹಾಸಿಕ ಸಮಾರಂಭ ನಡೆಯುತ್ತಿದ್ದು, ದೇಶದ ಸಾಕಷ್ಟು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾನ ಸಮಾರಂಭದಲ್ಲಿ ರಾಮಲಲ್ಲಾನ ವಿಗ್ರಹವನ್ನು ಅನಾವರಣಗೊಳಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ನೂತನವಾಗಿ ಅನಾವರಣಗೊಂಡ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ರಾಮಲಲ್ಲಾ ಮೂರ್ತಿಯ ಪಾದಗಳಿಗೆ ಕಮಲದ ಹೂವನ್ನು ಅರ್ಪಿಸಿದರು.

ಅಲ್ಲದೆ, ರಾಮಲಲ್ಲಾನ ಮೊದಲ ನೋಟದ ವಿಡಿಯೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಮಂದಹಾಸ ಬೀರುತ್ತಿರುವ ರಾಮನ ವಿಗ್ರಹ ನೋಡಿದವರು ಭಕ್ತಿಯಲ್ಲಿ ಭಾವಪರವಶವಾಗುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾನ ಸಮಾರಂಭ ನಡೆಯಿತು. ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಯೋಗಿ ಆದಿತ್ಯನಾಥ್ ಸಹ ಪ್ರಾಣ ಪ್ರತಿಷ್ಠಾನದಲ್ಲಿ ಭಾಗಿಯಾಗಿದ್ದಾರೆ.

ಗರ್ಭಗುಡಿಯಲ್ಲಿ ನೆಲೆ ನಿಂತಿರುವ ಬಾಲರಾಮ ಅಥವಾ ರಾಮಲಲ್ಲಾ ಹೂವಿನ ಹಾರ ಮತ್ತು ಒಡವೆಗಳಿಂದ ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ತುಮಕೂರಿನಲ್ಲಿ ಸಡಗರ – ಅಯೋಧ್ಯೆಯಯಲ್ಲಿ ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಕಲ್ಪತರುನಾಡಿನಲ್ಲಿ ರಾಮೋತ್ಸವದ ಸಡಗರ ಸಂಭ್ರಮ ಆಚರಿಸಲಾಯಿತು.

ನಗರದ ಬಾರ್‍ಲೈನ್ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯ, ಹನುಮಂತಪುರ, ಬನಶಂಕರಿ, ಮರಳೂರು, ಎಸ್.ಎಸ್.ಪುರಂನ ಸೀತಾ ರಾಮ ಮಂದಿರ, ಶೆಟ್ಟಿಹಳ್ಳಿ ಗೇಟ್‍ನ ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಶ್ರೀರಾಮ, ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಭಜನೆಗಳು ನಡೆದಿದ್ದು, ಭಕ್ತರಿಂದ ಶ್ರೀರಾಮ ನಾಮ ಸ್ಮರಣೆ ಮೊಳಗಿತು.

ಬಿ.ಹೆಚ್.ರಸ್ತೆ, ಎಂ.ಜಿ. ರಸ್ತೆ, ಅಶೋಕ ರಸ್ತೆ, ಎಸ್.ಎಸ್.ಪುರಂ ರಸ್ತೆ, ಕೋತಿತೋಪು ರಸ್ತೆ, ಮಂಡಿಪೇಟೆ ಸೇರಿದಂತೆ ವಿವಿಧೆಡೆಗಳಲ್ಲಿ ಬಾಳೆಕಂದು, ಮಾವಿನ ತೋರಣ ಕಟ್ಟಿ ಸಿಂಗರಿಸಲಾಗಿದ್ದು, ಭಕ್ತರು ಪೆಂಡಾಲ್‍ಗಳನ್ನು ಹಾಕಿ ಶ್ರೀರಾಮ ಭಾವಚಿತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರುಬೇಳೆ ಸೇರಿದಂತೆ ಪ್ರಸಾದ ವಿತರಣೆ ಮಾಡಲಾಯಿತು.

ಬಾರ್‍ಲೈನ್ ರಸ್ತೆಯ ಶ್ರೀರಾಮಮಂದಿರದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರತಿಷ್ಠಾಪನೆಯ ನೇರ ಪ್ರಸಾರದ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್‍ಇಡಿ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಶ್ರೀರಾಮನ ಘೋಷಣೆಗಳನ್ನು ಕೂಗಿದ ಭಕ್ತರ ಕಣ್ಣಲ್ಲಿ ಆನಂದಬಾಷ್ಪ ಕಂಡು ಬಂತು.

ಶೆಟ್ಟಿಹಳ್ಳಿ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಜನಾ ಮಂಡಳಿಗಳಿಂದ ಭಜನೆಗಳು ಮೊಳಗಿದವು. ಭಕ್ತರಿಗೆ ಪಾನಕ, ಹೆಸರುಬೇಳೆ, ಮಜ್ಜಿಗೆ ವಿತರಿಸಲಾಯಿತು.

ಅಮರಜ್ಯೋತಿನಗರದಲ್ಲಿರುವ ಶಿರಡಿಸಾಯಿಬಾಬ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯ, ಭಜನೆಗಳು ಮೊಳಗಿದ್ದು, ಪ್ರಸಾದ ವಿತರಣೆ ಮಾಡಲಾಯಿತು.

ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾ ಮಂಟಪದಲ್ಲಿ ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲಿ ಭಾಗವಹಿಸಿದ್ದ ಕರಸೇವಕರ ಮಿಲನ ಕಾರ್ಯಕ್ರಮ ಸಹ ಇದೇ ವೇಳೆ ನಡೆಯಿತು.

ಕರಸೇವಕರ ಮಿಲನ ಕಾರ್ಯಕ್ರಮದಲ್ಲಿ ರಾಮ, ಭಾರತಮಾತೆ ಭಾವಚಿತ್ರದೊಂದಿಗೆ ಪವಿತ್ರ ಗಂಗಾ ಜಲ ಮತ್ತು ಕರಸೇವೆಯ ಸಮಯದಲ್ಲಿ ತಂದ ನಾಲ್ಕು ಇಟ್ಟಿಗೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ಮಾಜಿ ಸಚಿವ ಸೊಗಡು ಶಿವಣ್ಣ, ಕೆ.ಪಿ. ಮಹೇಶ್, ಸಂಪಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀಧರ್ ಮತ್ತಿತರರು ಭಾಗವಹಿಸಿದ್ದರು.
ರಾಮಮಂದಿರ ಉದ್ಘಾಟನೆ ಅಂಗವಾಗಿ ನಗರದ ಎಲ್ಲೆಡೆ ಆಟೋಗಳಲ್ಲಿ ಶ್ರೀರಾಮ ಮತ್ತು ರಾಮಮಂದಿರದ ಚಿತ್ರ ಇರುವ ಬಾವುಟಗಳು ರಾರಾಜಿಸುತ್ತಿದ್ದವು.

ನಗರದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಶ್ರೀರಾಮನ ಬೃಹತ್ ಕಟೌಟ್‍ಗಳು, ಫ್ಲೆಕ್ಸ್‍ಗಳನ್ನು ಹಾಕಲಾಗಿದ್ದು, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

Leave a Reply

Your email address will not be published. Required fields are marked *