ಪಾವನ ಆಸ್ಪತ್ರೆಯಲ್ಲಿ ಸಂವಿಧಾನ ದಿನ ಆಚರಣೆ

ತುಮಕೂರು : ನಗರದ ಪಾವನ ಆಸ್ಪತ್ರೆಯಲ್ಲಿ ನವೆಂಬರ್ 26 ಭಾನುವಾರ ಸಂವಿಧಾನ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪರಿಸರವಾದಿ ಹಾಗೂ ಚಿಂತಕರಾದ ಜಿ.ಎಲ್.ಜನಾರ್ಧನ್ ಅವರು ಮಾತನಾಡಿ, ದೇಶದಲ್ಲಿ ಸಂವಿಧಾನದಿಂದ ಮಾತ್ರ ಎಲ್ಲಾ ಜನರ ರಕ್ಷಣೆ ಸಾಧ್ಯ, ಈಗ ನಿಜಕ್ಕೂ ಸಂವಿಧಾನವೂ ಸರಿಯಿಲ್ಲ ಎಂದು ಅದನ್ನು ಬದಲಾವಣೆ ಮಾಡುವ ಹುನ್ನಾರವು ನಡೆಯುತ್ತಿದ್ದು, ಭಾರತದ ಸಂವಿಧಾನ ಇಡೀ ಪ್ರಪಂಚದಲ್ಲೇ ಶ್ರೇಷ್ಠ ಸಂವಿಧಾನ ಎಂದು ಬಹುತೇಕ ದೇಶಗಳ ಸಂವಿಧಾನ ತಜ್ಞರು ಹೇಳಿದ್ದಾರೆ ಎಂದರು.

ಈ ಹಿನ್ನಲೆಯಲ್ಲಿಯೇ ವಿಶ್ವಸಂಸ್ಥೆಯು ಪ್ರಪಂಚದಲ್ಲೇ ಅಂಬೇಡ್ಕರ್ ಅವರು ಶ್ರೇಷ್ಠ ಮಾನವತವಾದಿ ಎಂದು ಅವರನ್ನು ಸ್ಮರಿಸಿಕೊಂಡಿದೆ, ನಮ್ಮ ಸಂವಿಧಾನ ವಿವಿಧ ಧರ್ಮಗಳಿದ್ದರೂ ಎಲ್ಲಿಯೂ ಯಾವ ಧರ್ಮವು ಶ್ರೇಷ್ಠ ಎಂದು ಹೇಳದೆ, ಎಲ್ಲಾ ಧರ್ಮಗಳು ನಮಗೆ ಸಮಾನ ಎಲ್ಲಾ ಧರ್ಮಗಳಿಗೂ ಗೌರವ ನೀಡುವಂತಹ ಅವಕಾಶ ಭಾರತದ ಸಂವಿಧಾನ ನೀಡಿದೆ, ಈ ಹಿನ್ನಲೆಯಲ್ಲಿಯೇ ವಿವಿಧ ಸಂಸೃತಿಯಲ್ಲಿ ಏಕತೆಯನ್ನು ಸಾಧಿಸಿದ್ದೇವೆ, ಜಾತ್ಯತೀತವಾಗಿ ಬದುಕುತ್ತಿದ್ದೇವೆ ಎಂದು ಹೇಳಿದರು.

ಸಾಹಿತಿ ಕಂಟಲಗೆರೆ ಗುರುಪ್ರಸಾದ್ ಮಾತನಾಡಿ ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿ ಹಲವಾರು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಸಂವಿಧಾನವನ್ನು ರಚಿಸಿ, 1949ರ ನವೆಂಬರ್ 26ರಂದು ಅಂದಿನ ರಾಷ್ಟ್ರಾಧ್ಯಕ್ಷರಾದ ಬಾಬು ರಾಜೇಂದ್ರಪ್ರಸಾದ್ ಅವರಿಗೆ ಅರ್ಪಿಸಿದರು, ಆ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ಅವರು, ಸಂವಿಧಾನವನ್ನು ಜಾರಿಗೆ ತಂದರಷ್ಟೇ ಸಾಲದು ಅದನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ಸಂವಿಧಾನದ ಆಶಯಗಳು ಈಡೇರಲಿವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಪಾವನ ಆಸಪತ್ರೆಯ ವೈದ್ಯರಾದ ಡಾ||ಮುರಳೀಧರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪತ್ರಕರ್ತ ವೆಂಕಟಾಲ ಹೆಚ್.ವಿ. ಅವರು ಭಾರತದ ಸಂವಿಧಾನದ ಫೀಠಿಕೆಯನ್ನು ಭೋದಿಸಿದರು, ದಲಿತ ಮಹಿಳಾ ಹೋರಾಟಗಾರ್ತಿ ಗಂಗಮ್ಮ ಮಾತನಾಡಿದರು. ಈ ಸಂದರ್ಭದಲ್ಲಿ ಪಾವನ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಸಂವಿಧಾನ ದಿನ ಆಚರಣೆಯಲ್ಲಿ ಪಾಲ್ಗೊಂಡು ಭಾರತದ ಸಂವಿಧಾನ ಪೀಠಿಕೆಯನ್ನು ಪಠಿಸಿದರು.

Leave a Reply

Your email address will not be published. Required fields are marked *