ಸರ್ವರಿಗೂ ಸಮಾನತೆ ಕಲ್ಪಿಸಿದ ಭಾರತದ ಸಂವಿಧಾನ: ಮಂಟೇಸ್ವಾಮಿ

ತುಮಕೂರು: ಪ್ರಪಂಚದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಎಲ್ಲಾ ವಿಧಾನಗಳಿಂದಲೂ ಸಮಾನತೆಯನ್ನು ಸಾರುವ ಸರ್ವ ಶ್ರೇಷ್ಠ ಸಂವಿಧಾನವೆಂದರೆ ಭಾರತದ ಸಂವಿಧಾನ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪುರುಷ ಮತ್ತು ಮಹಿಳಾ ವಿದ್ಯಾರ್ಥಿ ನಿಲಯಗಳು ಗುರುವಾರ ಆಯೋಜಿಸಿದ್ದ ‘ಸಂವಿಧಾನ ಪೀಠಿಕೆ ಫಲಕಗಳ ಅನಾವರಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅನ್ಯಾಯಕ್ಕೆ ಒಳಪಟ್ಟ ನಿಕೃಷ್ಟ ವರ್ಗಗಳಿಗೆ ಸಮಾನತೆ ಸಿಗಬೇಕು, ಸರ್ವರಿಗೂ ಸಮಾನವಾದ ನ್ಯಾಯವನ್ನು ಒದಗಿಸಿಕೊಡಬೇಕು ಎಂಬ ದೃಷ್ಟಿಯಿಂದ ಸಂವಿಧಾನ ರಚನೆಯಾಗಿದೆ. ಭಾರತದ ಸಂವಿಧಾನಕ್ಕೆ ಬಡವ ಮತ್ತು ಶ್ರೀಮಂತನೆಂಬ ಭೇದವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಕೆಲಸದ ಮೂಲಕ ಮಾತನಾಡಬೇಕು ಎಂಬ ಸೂಕ್ಷ್ಮವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ತಿಳಿಸುತ್ತದೆ. ಸಂವಿಧಾನದ ಪೂರ್ವ ಪೀಠಿಕೆಯು ಸಂವಿಧಾನದ ಮೂಲ ಆಶಯವನ್ನು ತಿಳಿಸುತ್ತದೆ ಎಂದರು.

ವಿವಿ ಪರೀಕ್ಷಾಂಗ ಕುಲಸಚಿವ ಪೆÇ್ರ. ಪ್ರಸನ್ನ ಕುಮಾರ್ ಕೆ. ಮಾತನಾಡಿ, ವೈವಿಧ್ಯತೆ ತುಂಬಿರುವ, ವಿಭಿನ್ನ ಜನಾಂಗ, ಧರ್ಮವಿರುವ ರಾಷ್ಟ್ರದಲ್ಲಿ ಎಲ್ಲರೂ ಸಮಾನರು ಎಂದು ಬೋಧಿಸುವ ಹಕ್ಕು ಸಂವಿಧಾನಕ್ಕೆ ಮಾತ್ರ ಇರುವುದು. ಶಾಂತಿ, ಶಿಸ್ತು, ಸುವ್ಯವಸ್ಥೆಯನ್ನು ಕಾಪಾಡಲು ಸಂವಿಧಾನವಿರಬೇಕು. ಸರ್ವರಲ್ಲೂ ಸಂವಿಧಾನದ ಅರಿವು ಮೂಡಬೇಕು ಎಂದರು.

ವಿವಿಯ ಸಿಂಡಿಕೇಟ್ ಸದಸ್ಯ ದೇವರಾಜ್ ಮಾತನಾಡಿ, ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದಾರೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಸೂಕ್ಷ್ಮ ವಿಚಾರ ವಿದ್ಯಾರ್ಥಿಗಳಿಗೆ ಇನ್ನೂ ತಿಳಿದಿಲ್ಲ. ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪೆÇ್ರ. ಬಸವರಾಜ ಜಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಐ.ಕ್ಯೂ.ಎ.ಸಿ. ನಿರ್ದೇಶಕ ಪ್ರೊ. ರಮೇಶ್ ಬಿ, ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಜಿ. ಆರ್., ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಕೇಶವ, ಸ್ನಾತಕೋತ್ತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪುರುಷ ವಿದ್ಯಾರ್ಥಿ ನಿಲಯದ ನಿಲಯಪಾಲಕರಾದ ಡಾ. ಕುಮಾರ್ ಬಿ., ಡಾ. ಲಕ್ಷೀರಂಗಯ್ಯ ಕೆ. ಎನ್., ಮಹಿಳಾ ವಿದ್ಯಾರ್ಥಿ ನಿಲಯದ ನಿಲಯಪಾಲಕಿ ಡಾ. ಅಶ್ವಿನಿ ಬಿ. ಜಾನೆ, ಪ್ರೊ. ಪರಶುರಾಮ ಕೆ. ಜಿ., ಡಾ. ದ್ವಾರಕಾನಾಥ್ ವಿ., ಡಾ. ನಾಗಭೂಷಣ ಬಗ್ಗನಡು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *