ತುಮಕೂರು – ಸೇವೆ ಖಾಯಮಾತಿಗೆ ಒತ್ತಾಯಿಸಿ ಕಳೆದ 39 ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಬೆಂಗಳೂರಿಗೆ ಕೈಗೊಂಡಿರುವ ಪಾದಯಾತ್ರೆ ಇಂದು ಡಾಬಸ್‌ಪೇಟೆಯಿಂದ ಮುಂದುವರೆದಿದೆ.
ನಿನ್ನೆ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಹಸಿರು ನಿಶಾನೆ ತೋರುವ ಮೂಲಕ ಅತಿಥಿ ಉಪನ್ಯಾಸಕರ ಪಾದಯಾತ್ರೆಗೆ ಚಾಲನೆ ನೀಡಿದ್ದರು. ಶ್ರೀಮಠದಿಂದ ಪಾದಯಾತ್ರೆಯಲ್ಲಿ ಹೊರಟ ಅತಿಥಿ ಉಪನ್ಯಾಸಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ರಾತ್ರಿ ಡಾಬಸ್‌ಪೇಟೆಯ ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ವಾಸ್ತವ್ಯ ಹೂಡಿದ್ದರು.
ಇಂದು ಬೆಳಿಗ್ಗೆ ಉಪಹಾರ ಸೇವಿಸಿದ ಬಳಿಕ ಡಾಬಸ್‌ಪೇಟೆಯಿಂದ ಅತಿಥಿ ಉಪನ್ಯಾಸಕರು ಬೆಂಗಳೂರಿನತ್ತ ಹೆಜ್ಜೆ ಹಾಕಿದ್ದಾರೆ.
ಈ ಪಾದಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ವಿಶೇಷಚೇತನರು ಹೆಜ್ಜೆ ಹಾಕುತ್ತಿರುವುದು ವಿಶೇಷವಾಗಿದ್ದು, ಸರ್ಕಾರ ಈಗಲಾದರೂ ಅತಿಥಿ ಉಪನ್ಯಾಸಕರ ಸಮಸ್ಯೆಯತ್ತ ಕಣ್ಣು ಬಿಟ್ಟು ನೋಡಲಿ ಎಂಬ ಒತ್ತಾಯ ಸಾರ್ವಜನಿಕ ವಲಯದಿಂದಲೂ ಕೇಳಿ ಬರುತ್ತಿದೆ.
ಸಿದ್ದಗಂಗಾ ಮಠದಲ್ಲಿ ಅತಿಥಿ ಉಪನ್ಯಾಸಕರ ಪಾದಯಾತ್ರೆಗೆ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸೇರ್ಪಡೆಯಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಮಾತನಾಡಿ, ನಿನ್ನೆ ಸಿದ್ದಗಂಗಾ ಮಠದಲ್ಲಿ ಶ್ರೀಗಳು ನಮ್ಮ ಹೋರಾಟಕ್ಕೆ ಚಾಲನೆ ನೀಡುವ ಮೂಲಕ ಆಶೀರ್ವದಿಸಿದ್ದಾರೆ. ಆದರೆ ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರು ದಿನಕ್ಕೊಂದು ಬೇಡಿಕೆ ಕೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ ಎಂದರು.
ನಾವು ದಿನಕ್ಕೊಂದು ಬೇಡಿಕೆ ಇಡುತ್ತಿಲ್ಲ. ಮೊದಲಿನಿಂದಲೂ ನಮ್ಮ ಬೇಡಿಕೆ ಒಂದೇ ಆಗಿದೆ. ಸೇವೆ ಖಾಯಮಾತಿ ಮಾಡಬೇಕು ಎಂಬುದು. ಈ ಬಗ್ಗೆ ಸಚಿವರು ಗಮನ ಹರಿಸಿ ಬಗ್ಗೆ ಕಣ್ತೆರೆದು ನೋಡಿ ಪರಿಹರಿಸುವ ಕೆಲಸ ಮಾಡಲಿ ಎಂದರು.
ಪಾದಯಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದಾರೆ ಎಂದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಪಾದಯಾತ್ರೆ ತಲುಪಿದ ಮೇಲೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.
ಪಾದಯಾತ್ರೆಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತ ಗೌಡ ಕಲ್ಮನಿ, ತುಮಕೂರು ಜಿಲ್ಲಾ ಅಧ್ಯಕ್ಷ ಡಾ. ಧರ್ಮವೀರ. ಕೆ ಎಚ್ ,ಶಂಕರ್ ಹಾರೋಗೆರೆ ,ಡಾ. ಕುಮಾರ್, ಮಲ್ಲಿಕಾರ್ಜುನ್, ಹನುಮಂತರಾಯಪ್ಪ ಸೇರಿದಂತೆ ಸಾವಿರಾರು ಅತಿಥಿ ಉಪನ್ಯಾಸಕರು ಆದಾಯದಲ್ಲಿ ಭಾಗವಹಿಸಿದ್ದರು