ಗುತ್ತಿಗೆದಾರರ ಸಂಘದ   ರಾಜ್ಯಾಧ್ಯಕ್ಷ  ಕೆಂಪಣ್ಣ ನಿಧನ

ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ (84) ಗುರುವಾರ ನಿಧನರಾದರು. ಬೆಂಗಳೂರಿನ ಜ್ಯೋತಿಪುರದ ನಿವಾಸದಲ್ಲಿ ಹೃದಯಾಘಾತದಿಂದ ಅವರು ನಿಧನ ಹೊಂದಿದರು.

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ, ‘ಪೇ ಸಿಎಂ’ ಅಭಿಯಾನ ನಡೆಸಲು ಪೂರಕವಾದ ಆರೋಪ ಮಾಡಿ ರಾಜ್ಯದಾದ್ಯಂತ ಸುದ್ದಿಯಾಗಿದ್ದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಣ್ಣ ಮೊನ್ನೆಯಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ವಾಪಾಸಾಗಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಕೆಂಪಣ್ಣ ಆಪ್ತರು, ಕುಟುಂಬದ ಮೂಲಗಳು ತಿಳಿಸಿವೆ.
ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದು ಸಂಚಲನ ಸೃಷ್ಟಿಸಿದ್ದರು.

ಕಾಂಗ್ರೆಸ್ ಆಡಳಿತದಲ್ಲೂ ಶೇ 40ರ ಕಮಿಷನ್ ಮುಂದುವರಿದಿದೆ ಎಂದು ಕೆಂಪಣ್ಣ ಇದೇ ವರ್ಷ ಫೆಬ್ರವರಿಯಲ್ಲಿ ಆರೋಪಿಸಿದ್ದರು. ಕೆಂಪಣ್ಣ ಆರೋಪ ಪ್ರತಿಪಕ್ಷ ಬಿಜೆಪಿಗೆ ಅಸ್ತ್ರವಾಗಿದ್ದರೆ ಆಡಳಿತಾರೂಢ ಕಾಂಗ್ರೆಸ್ಗೆ ಇರಿಸುಮುರಿಸು ತಂದಿತ್ತು. ಗುತ್ತಿಗೆದಾರರ ಬಿಲ್ಗಳನ್ನು ಕ್ಲಿಯರ್ ಮಾಡಲು ಕಮಿಷನ್ ಕೇಳಲಾಗುತ್ತಿದೆ ಎಂದು ಕೆಂಪಣ್ಣ ಆರೋಪಿಸಿದ್ದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಐದೂವರೆ ತಿಂಗಳಾದರೂ ಕಾಮಗಾರಿ ಬಿಲ್ ಬಾಕಿ ಪಾವತಿ ಪಾರದರ್ಶಕವಾಗಿ ನಡೆಯುತ್ತಿಲ್ಲ. ಬಾಕಿ ಬಿಲ್ ಪಾವತಿಯಾಗುತ್ತಿಲ್ಲ ಎಂಬುದು ಒಂದೆಡೆಯಾದರೆ, ಕೆಲವು ಇಲಾಖೆಗಳಲ್ಲಿ ಆಗುತ್ತಿರುವ ಸಣ್ಣಪುಟ್ಟ ಪಾವತಿಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ. ಇದರಿಂದ ಅನೇಕ ಸಮಸ್ಯೆ ಗುತ್ತಿಗೆದಾರರಿಗೆ ಎದುರಾಗಿದೆ ಎಂದು ಕೆಂಪಣ್ಣ ಆರೋಪಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿದ್ದ ಕಾಂಗ್ರೆಸ್ ನಾಯಕರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಬಿಲ್ಗಳು ಮಾತ್ರ ಕ್ಲಿಯರ್ ಆಗಿಲ್ಲ ಎಂದು ತೇಪೆಹಚ್ಚಿದ್ದರು. ಅಷ್ಟೇ ಅಲ್ಲದೆ, ನಂತರ ಕೆಂಪಣ್ಣ ಮೂಲಕವೇ ಪತ್ರಿಕಾಗೋಷ್ಠಿ ಮಾಡಿಸಿ, ಕಾಂಗ್ರೆಸ್ ಸರ್ಕಾರದಲ್ಲಿ ಗುತ್ತಿಗೆದಾರರಿಗೆ ಬಿಲ್ ಕ್ಲಿಯರ್ ಸಮಸ್ಯೆ ಇಲ್ಲ ಎಂದು ಹೇಳಿಸಿದ್ದರು.

ಸಿಎಂ ಸಿದ್ದರಾಮಯ್ಯ ಸಂತಾಪ

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರ ನಿಧನವಾರ್ತೆ ನೋವುಂಟುಮಾಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ 40% ಕಮಿಷನ್ ಹಗರಣವನ್ನು ಹೊರತಂದು, ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಅವರು ಸೆಟೆದು ನಿಂತಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *