ಪಾಲಿಕೆ ಚುನಾವಣೆ, ಅಕಾಂಕ್ಷಿಗಳು ವಾರ್ಡ್ ಜನರ ಸಮಸ್ಯೆಗೆ ಸ್ಪಂದಿಸಿ-ಗ್ಯಾರಂಟಿ ಯೋಜನೆಗಳ ಅರಿವು ಮೂಡಿಸಿ-ಇಕ್ಬಾಲ್ ಅಹಮದ್

ತುಮಕೂರು: ಸಧ್ಯದಲ್ಲಿಯೇ ತುಮಕೂರು ಮಾಹಾನಗರ ಪಾಲಿಕೆ ಚುನಾವಣೆ ಬರಲಿದ್ದು, ಟಿಕೆಟ್ ಅಕಾಂಕ್ಷಿಗಳು ಮೊದಲು ವಾರ್ಡಿನ ಜನರನ್ನು ಭೇಟಿಯಾಗಿ ಅವರಿಂದ ಸಮಸ್ಯೆಗಳನ್ನು ಆಲಿಸಿ, ಅಲ್ಲದೆ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳುವಳಿಕೆ ಮೂಡಿಸಿ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಅಹಮದ್ ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರದ ರಿಂಗ್ ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತುಮಕೂರು ನಗರ ಬ್ಲಾಕ್ 1 ಮತ್ತು 2ರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.

ರಾಜಕಾರಣವೆಂಬುದು ಬಡವರ,ಸಮಾಜದ ಏಳಿಗೆಗಾಗಿ ಮಾಡುವ ಒಂದು ಸೇವೆ.ಹಾಗಾಗಿ ನನಗೆ ಎನ್ನುವುದು ಕೊನೆಯ ದಾಗಬೇಕು.ಕ್ಷೇತ್ರಗಳ ಪುನರ್ ವಿಂಗಡಣೆಯಾಗಿ,ವಾರ್ಡುಗಳ ಮೀಸಲಾತಿ ಬದಲಾವಣೆಯಾಗಿ ಯಾರಿಗೆ ಟಿಕೆಟ್ ದೊರೆತರು,ಅವರ ಗೆಲುವಿಗೆ ಉಳಿದವರು ಶ್ರಮಪಟ್ಟಾಗ ಮಾತ್ರ, ನಾಯಕನಾಗಿ ಗುರುತಿಸಿಕೊಳ್ಳಲು ಸಾಧ್ಯ. ಕೇವಲ ಟಿಕೆಟ್ ಗೋಸ್ಕರ ಕೆಲಸ ಮಾಡಿ,ಟಿಕೆಟ್ ಸಿಗದಿದ್ದರೆ ತಟಸ್ಥರಾಗುವ ವ್ಯಕ್ತಿಗಳಿಂದ ಪಕ್ಷಕ್ಕೆ ಯಾವುದೇ ಉಪಯೋಗವಿಲ್ಲ. ತುಮಕೂರು ನಗರವನ್ನು ಅಭಿವೃದ್ದಿ ಹೊಂದಿದ ನಗರಗಳಲ್ಲಿ ಒಂದಾಗಿ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಪಕ್ಷ ವಿರೋಧಿಗಳಿಗೆ ಪಕ್ಷದಲ್ಲಿ ಜಾಗವಿಲ್ಲ ಎಂಬುದನ್ನು ಈಗಾಗಲೇ ಕಟ್ಟುನಿಟ್ಟಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೂತನ ಕಚೇರಿ ಉದ್ಘಾಟನೆ ವೇಳೆ ಸ್ಪಷ್ಟಪಟ್ಟಿದ್ದಾರೆ.ಇಲ್ಲಿರುವ ಯಾವ ನಾಯಕರಿಗೂ ಟಿಕೇಟ್ ನೀಡುವ ಅಧಿಕಾರ ಇಲ್ಲ.ಆದರೆ ಜನರ ಅಭಿಪ್ರಾಯವನ್ನು ಪಕ್ಷದ ಮುಖಂಡರಿಗೆ ತಿಳಿಸುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ.ಇದರಲ್ಲಿ ಯಾವುದೇ ಅನುಮಾನ ಬೇಡ.ನಾವುಗಳು ಕೂಡ ಪ್ರತಿವಾರ್ಡುಗೂ ಭೇಟಿ ನೀಡಿ ಅಲ್ಲಿನ ಮುಖಂಡರ ಅಭಿಪ್ರಾಯ ಆಲಿಸಿ, ಗೆಲ್ಲುವ ಅಭ್ಯರ್ಥಿಯನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎಂದರು.

ಡಿಸಿಸಿ ಮಾಜಿ ಅಧ್ಯಕ್ಷ ರಾಮಕೃಷ್ಣ.ಆರ್.ಮಾತನಾಡಿ,ಸ್ಥಳೀಯ ಸಂಸ್ಥೆಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.ಹಾಗಾಗಿ ಪಕ್ಷದ ವತಿಯಿಂದ ನಡೆಯುವ ಸಮೀಕ್ಷೆಗಳು ಅಬ್ಯರ್ಥಿ ಯಾರು ಎಂಬುದನ್ನು ನಿರ್ಧರಿಸಲಿವೆ.ಎಲ್ಲಾ ವರ್ಗದ, ಜಾತಿಯ ಜನರು ಅಧಿಕಾರ ಪಡೆಯುವಂತಹ ಅಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಹಾಗಾಗಿ ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ದರಾಗಿ, ಇಂದಿನಿಂದಲೇ ಕೆಲಸ ಪ್ರಾರಂಭಿಸುವಂತೆ ಸಲಹೆ ನೀಡಿದರು.

ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಕಳೆದ ಮೂರುವರೆ ವರ್ಷಗಳ ಕಾಲ ತುಮಕೂರು ನಗರದ ಟೂಡಾ,ಕೆಲ ತಾ.ಪಂ.ಗಳಲ್ಲಿ ಬಿಜೆಪಿ ಪಕ್ಷ ಆಡಳಿತ ನಡೆಸಿದ್ದು,ಅಲ್ಲಿ ಆಗಿರುವ ಲೋಪ ದೋಷಗಳು, ಕಾನೂನು ಬಾಹಿರ ಚಟುವಟಿಕೆಗಳನ್ನು ಪಕ್ಷದ ಮುಖಂಡರು ಎತ್ತಿ ಹಿಡಿದು ಹೋರಾಟ ರೂಪಿಸಬೇಕೆಂದು ಆಕಾಂಕ್ಷಿಗಳಿಗೆ ತಿಳಿ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಪಡೆಯಬೇಕಾದರೆ ಇಂದಿನಿಂದಲೇ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಶತಾಯ, ಗತಾಯ ತುಮಕೂರು ನಗರಪಾಲಿಕೆಯಲ್ಲಿ ಈ ಬಾರಿ ಸ್ವತಂತ್ರವಾಗಿ ಅಧಿಕಾರ ಹಿಡಿಯವಲ್ಲಿ ಕಾಂಗ್ರೆಸ್ ಯಶಸ್ವಿಯಾಗಲೇ ಬೇಕಿದೆ.ಇದುವರೆಗೆ ಕಾಂಗ್ರೆಸ್ ಅಧಿಕಾರ ಮಾಡಿದ್ದರೂ ಮೈತ್ರಿಯಿಂದಾಗಿ ಸಾಧ್ಯವಾಗಿದೆ. ನಮ್ಮದೆ ಸರಕಾರವಿದ್ದು, ಇಷ್ಟೊಂದು ಗ್ಯಾರಂಟಿಗಳನ್ನು ನೀಡಿ, ಜನರಿಗೆ ಅನುಕೂಲ ಮಾಡಿಕೊಟ್ಟಿರುವಾಗ, ಜನರ ಬಳಿ ಮತ ಕೇಳಲು ಹಿಂಜರಿಕೆ ಬೇಡ.ಹಾಗಾಗಿ ಎಲ್ಲರೂ ಮೈಚಳಿಯ ಜೊತೆಗೆ, ವೈಮನಸ್ಸು ಬಿಟ್ಟು ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಹಿರಿಯರಾದ ರೇವಣಸಿದ್ದಯ್ಯ, ಪಾಲಿಕೆ ಮಾಜಿ ಸದಸ್ಯ ಇನಾಯತ್,ಓಬಿಸಿ ಘಟಕ ಅಧ್ಯಕ್ಷ ಅನಿಲ್, ಮುಖಂಡರಾದ ಗೋವಿಂದರಾಜು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್,ಫಯಾಜ್ ಸೇರಿದಂತೆ ಹಲವರು ಉಪಸ್ಥಿತರಿದರು.

Leave a Reply

Your email address will not be published. Required fields are marked *